ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಕೋಲಾರಕ್ಕೆ ಹೋಗುವ ಕಾಚಹಳ್ಳಿ ಗೇಟ್ ಬಳಿ ಬುಧವಾರ ಬೆಳಗಿನ ಜಾವ ಅಪಘಾತ ಸಂಭವಿಸಿದ್ದು, ಕಾರಿನ ಮಾಲೀಕ, ಪತ್ನಿ, ಮಕ್ಕಳು ಗಾಯಗೊಂಡಿದ್ದಾರೆ.

ಚಿಂತಾಮಣಿ ನಗರದ ಕನ್ನಂಪಲ್ಲಿ ಬಡಾವಣೆಯ ನಿವಾಸಿಗಳಾದ ಮಂಜುನಾಥ್(30), 28 ವರ್ಷದ ಪತ್ನಿ, ಮಕ್ಕಳಾದ 5 ವರ್ಷದ ಧನುಷ್ ಮತ್ತು 10 ತಿಂಗಳು ಅನುಮಿಕ್ ಗಾಯಗೊಂಡವರು. ಅಪಘಾತದಲ್ಲಿ ಮಂಜುನಾಥ್ ಅವರ ಬಲಗಾಲು ಮುರಿದಿದೆ. ಆತನ ಪತ್ನಿ ಅಶ್ವಿನಿ ತಲೆಗೆ ಪೆಟ್ಟುಬಿದ್ದಿದೆ. 5 ವರ್ಷದ ಧನುಷ್‌ಗೆ ಸಣ್ಣ ಗಾಯಗಳಾಗಿವೆ. 10 ತಿಂಗಳ ಅನುಮಿಕ್‌ಗೆ ಇತ್ತೀಚೆಗಷ್ಟೆ ಹೃದಯ ಸಂಬಂಧಿ ಚಿಕಿತ್ಸೆ ಮಾಡಿಸಲಾಗಿದ್ದು, ಮಗುವಿಗೆ ಪದೇ ಪದೇ ವಾಂತಿಯಾಗುತ್ತಿದೆ. ನಾಲ್ಕು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರೋಜೋರಪಲ್ಲಿ ಗ್ರಾಮದ ಗೇಟ್‌ಬಳಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯಲ್ಲಿ ಬೆಳಿಗಿನ ತಿಂಡಿ ಮಾರಾಟ ಮಾಡುವ ಸಲುವಾಗಿ ತೆರಳುವಾಗ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.