ಅನಾರೋಗ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೂಳಲು ಸ್ಮಶಾನವಿಲ್ಲದೆ ಕುಟುಂಬದವರು ನೂರಾರು ಕಿ.ಮೀ ದೂರದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಮಾನವೀಯ ಘಟನೆ ಮೈಸೂರಿನ ತಿ ನರಸೀಪುರದಲ್ಲಿ ನಡೆದಿದೆ.
ತಿ.ನರಸೀಪುರ ಟೌನಿನ ಹೊಸ ರೇಷ್ಮೆ ಗೂಡಿನ ಎದುರು, ಮಾರ್ಕೆಟ್ ರಸ್ತೆ ನಿವಾಸಿ, ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಜನಾಂಗದ 50 ವರ್ಷದ ರತ್ನಮ್ಮ ಎಂಬುವವರು ಅನಾರೋಗ್ಯದಿಂದ ನಿನ್ನೆ(ಜ.08) ದಿನ ಮೃತಪಟ್ಟಿದ್ದರು. ಹೂಳಲು ಸ್ಥಳವಿಲ್ಲದ ಕಾರಣ ರತ್ನಮ್ಮ ನವರ ಮೃತದೇಹವನ್ನು ಅವರ ಕುಟುಂಬದ ಸದಸ್ಯರು ತವರೂರು ದಾವಣಗೆರೆಗೆ ತೆಗೆದುಕೊಂಡು ಹೋಗಿದ್ದಾರೆ.
ಸುಮಾರು 35 ವರ್ಷಗಳ ಹಿಂದೆ ದಾವಣಗೆರೆಯಿಂದ ವಲಸೆ ಬಂದ ರತ್ನಮ್ಮನವರ ಕುಟುಂಬಸ್ಥರು ತಿ.ನರಸೀಪುರ ಪಟ್ಟಣದ ಈಗಿನ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಅರ್ಧಗುಂಟೆ ಜಾಗ ಖರೀದಿಸಿ ವಾಸವಿದ್ದರು. ಕಬಿನಿ ನದಿಗೆ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ಸ್ವಂತ ಜಾಗವನ್ನು ಕಳೆದುಕೊಂಡು ಬೀದಿಗೆ ಬಿದ್ದ ರತ್ನಮ್ಮನ ಕುಟುಂಬಸ್ಥರು, ಖಾಸಗಿ ಜಮೀನಿನಲ್ಲಿ ಬಾಡಿಗೆ ಪಾವತಿಸುತ್ತ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದರು.
ಜೀವನೋಪಾಯಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡಿಕೊಂಡಿದ್ದರು. ಇತ್ತೀಚೆಗೆ ಮೃತಪಟ್ಟ ಗಂಡನ ಸಾವಿನಿಂದ ಕಂಗಾಲಾಗಿದ್ದ ರತ್ನಮ್ಮ, ತನ್ನ ತಮ್ಮ ಕೊಟ್ರೇಶಿಯೊಂದಿಗೆ ವಾಸವಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ
ವಾಸಿಸಲು ಸ್ವಂತ ಸ್ಥಳವಿಲ್ಲದೆ, ಮೃತಪಟ್ಟಾಗ ಹೂಳಲು ಸ್ಮಶಾನವಿಲ್ಲದೆ ಸ್ವಂತ ಸೂರಿಗಾಗಿ ಹೋರಾಡುತ್ತ ತಲೆಕೂದಲು,ಬಟ್ಟೆಪಿನ್ನು ವ್ಯಾಪಾರ ಮಾಡುತ್ತ ಬಡತನದಲ್ಲಿಯೇ ರತ್ನಮ್ಮ ಬದುಕು ಸವೆಸುತ್ತಿದ್ದರು.
ಆದರೆ ಅನಾರೋಗ್ಯದಿಂದಾಗಿ ರತ್ನಮ್ಮ ಜ.8ರಂದು ಅಕಾಲಿಕ ಮರಣ ಹೊಂದಿದರು. ಆದರೆ ಅವರ ಮೃತದೇಹವನ್ನು ಹೂಳಲು ಸ್ಥಳವಿರಲಿಲ್ಲ. ತಾನು ವಾಸವಿದ್ದ ಊರಿನಲ್ಲಿ ಹೂಳಲು ಸ್ಮಶಾನವಿಲ್ಲದೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿ ನೂರಾರು ಕಿ. ಮೀ ದೂರದಲ್ಲಿರುವ ತವರೂರು ದಾವಣಗೆರೆಗೆ ಮೃತದೇಹ ಕೊಂಡೊಯ್ಯುವಂತಾಗಿದ್ದು ನಾಗರಿಕ ಸಮಾಜದ ದುರಂತವಾಗಿದೆ. ಸ್ಥಳೀಯ ಆಡಳಿತ ಕೂಡ ಶೋಷಿತ ಸಮುದಾಯದ ಈ ಕುಟುಂಬಗಳಿಗೆ ಮೂಲಭೂತವಾಗಿ ನೀಡಬೇಕಾದ ಸೂರು, ಸ್ಮಶಾನ ಮುಂತಾದವನ್ನು ನೀಡದೆ ಅನ್ಯಾಯವೆಸಗಿದೆ.
ಕಳೆದ ಮೂವತ್ತು ವರ್ಷಗಳಿಂದ ಸ್ವಂತ ನೆಲೆ ಮತ್ತು ಸೂರಿಗಾಗಿ ಹೋರಾಟ ಮಾಡುತ್ತಿರುವ ತಿ.ನರಸೀಪುರ ಪಟ್ಟಣದ ಪರಿಶಿಷ್ಟ ಅಲೆಮಾರಿ ಕೊರಚ ಸಮುದಾಯದ ಮೂವತ್ತು ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತ ಇನ್ನಾದರೂ ಸ್ವಂತ ಸೂರು, ಸ್ಮಶಾನದ ಜಾಗಗಳನ್ನು ಕಲ್ಪಿಸಿ ಗೌರವಿತವಾಗಿ ಬದುಕಲು ಅವಕಾಶ ನೀಡಬೇಕಾಗಿದೆ.
