ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಇಂಡಿಯಾ ಒಕ್ಕೂಟದ ಭಾಗವಾಗಿದ್ದರೂ ಕೂಡಾ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಈ ನಡುವೆ ‘ಇಂಡಿಯಾ’ ಒಕ್ಕೂಟದ ಇತರೆ ಮಿತ್ರಪಕ್ಷಗಳು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬದಲಾಗಿ ಎಎಪಿ ಬೆಂಬಕ್ಕೆ ನಿಂತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ಇನ್ನು ದೆಹಲಿ ಚುನಾವಣೆಯಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿಯಲು ನಿರ್ಧರಿಸಿದ ಬಳಿಕ ಪರಸ್ಪರ ವಾಗ್ದಾಳಿಗಳು ಕೂಡಾ ಹೆಚ್ಚಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಕೇಜ್ರಿವಾಲ್ ಅವರನ್ನು ‘ರಾಷ್ಟ್ರ ವಿರೋಧಿ’ ಎಂದು ಕರೆದಿರುವುದು ಕೇಂದ್ರದಂತೆ ದೆಹಲಿಯಲ್ಲೂ ಮಿತ್ರತ್ವಕ್ಕೆ ಕಡಿವಾಣ ಹಾಕಿದೆ.
ಇದನ್ನು ಓದಿದ್ದೀರಾ? ಫೆಬ್ರವರಿ 5 ರಂದು ದೆಹಲಿ ವಿಧಾನಸಭೆ ಚುನಾವಣೆ: ಹೊಸ ದಾಖಲೆ ನಿರ್ಮಿಸಿದ ರಾಜೀವ್ ಕುಮಾರ್
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಎಪಿಯನ್ನು ದೆಹಲಿಯಲ್ಲಿ ‘ವಿರೋಧಿ’ ಎಂದು ಕರೆದಿದ್ದಾರೆ. ಇದಾದ ಬೆನ್ನಲ್ಲೇ ಕೇಜ್ರಿವಾಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ನಾಯಕನ ಹೇಳಿಕೆಯು ಅವರ ಪಕ್ಷ ಮತ್ತು ಬಿಜೆಪಿ ಈಗ ಅಧಿಕೃತವಾಗಿ ಮೈತ್ರಿಯಲ್ಲಿದೆ ಎಂಬುದನ್ನು ದೃಢಪಡಿಸಿದೆ” ಎಂದು ಹೇಳಿದ್ದಾರೆ.
ಇದಾದ ಕೆಲವೇ ಸಮಯದ ನಂತರ ಕೇಜ್ರಿವಾಲ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಎಎಪಿಗೆ ಬೆಂಬಲ ನೀಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದಕ್ಕೂ ಒಂದು ದಿನಕ್ಕೂ ಮುನ್ನ ಎಎಪಿಗೆ ಬೆಂಬಲ ಘೋಷಿಸಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಧನ್ಯವಾದ ತಿಳಿಸಿದ್ದರು.
ಟಿಎಂಸಿ ಮತ್ತು ಎಸ್‌ಪಿ ಎರಡೂ ರಾಷ್ಟ್ರ ರಾಜಧಾನಿಯಲ್ಲಿ ಅಧಿಕ ಪ್ರಾಬಲ್ಯವನ್ನು ಹೊಂದಿಲ್ಲ. ಆದರೆ ಇದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ಕೊಂಚ ಹಿನ್ನೆಡೆ ಉಂಟು ಮಾಡಿದೆ. ಈಗಾಗಲೇ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸೋಲಿನ ಬಳಿಕ ಇಂಡಿಯಾ ಒಕ್ಕೂಟದ ಹಲವು ಪಕ್ಷಗಳು ಕಾಂಗ್ರೆಸ್ ಅನ್ನು ಹೊಣೆಯಾಗಿಸಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಎಎಪಿಯ ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ
ಇನ್ನು ಇದಕ್ಕೂ ಮುನ್ನ ಅಶೋಕ್ ಗೆಹ್ಲೋಟ್ “ಎಎಪಿ ನಮ್ಮ ಎದುರಾಳಿ. ಎರಡು ಬಾರಿ ಗೆದ್ದ ನಂತರ ಅವರು ಭ್ರಮೆಯಲ್ಲಿದ್ದಾರೆ. ದೆಹಲಿಯಲ್ಲಿ ವಾತಾವರಣ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಉತ್ತಮವಾಗಿ ಪ್ರಚಾರ ಮಾಡುತ್ತಿದೆ. ಉತ್ತಮ ಫಲಿತಾಂಶ ಬರುತ್ತದೆ ಎಂದು ನನಗೆ ಖಚಿತವಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಇನ್ನು ಮಮತಾ ವಿರುದ್ಧ ಆಗಾಗ ವಾಗ್ದಾಳಿ ನಡೆಸುವ ಮೂಲಕ ಸುದ್ದಿಯಾಗುತ್ತಾ ಬಂದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಟಿಎಂಸಿ ಜೊತೆ ಮೈತ್ರಿ ಮಾಡುವ ಎಎಪಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ದೆಹಲಿಯಲ್ಲಿ ಬಂಗಾಳಿಗಳಿಗೆ ಈಗಾಗಲೇ ಮಮತಾ ಅವರ ನಿರಂಕುಶಾಧಿಕಾರದ ಬಗ್ಗೆ ತಿಳಿದಿದೆ ಎಂದಿದ್ದಾರೆ.
ಇನ್ನು ಈಗಾಗಲೇ ಇಂಡಿಯಾ ಒಕ್ಕೂಟದ ನಿರ್ವಹಣೆಯನ್ನು ಮಾಡಲು ಪ್ರಬಲ ನಾಯಕತ್ವ ಬೇಕಿದೆ, ಅದನ್ನು ಮಮತಾ ಬ್ಯಾನರ್ಜಿ ನಿಭಾಯಿಸುತ್ತಾರೆ ಎಂದು ಟಿಎಂಸಿ ನಾಯಕರು ಹೇಳಿಕೊಂಡಿದ್ದಾರೆ. ಮಮತಾ ಕೂಡಾ ತನಗೆ ನಾಯಕತ್ವ ನೀಡಿದರೆ, ಪಶ್ಚಿಮ ಬಂಗಾಳದ ಸಿಎಂ ಆಗಿದ್ದುಕೊಂಡೇ ಇಂಡಿಯಾ ಒಕ್ಕೂಟವನ್ನು ನಿರ್ವಹಿಸುವುದಾಗಿ ಹೇಳಿದ್ದರು.
