ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ವಿರುದ್ಧ ತೆರಿಗೆ ವಂಚನೆ ಮತ್ತು ಅನುಮತಿ ಪಡೆಯದೆ ಸೆಟ್ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಚಾರ್ ಅವರು ದೂರು ಕೂಡ ದಾಖಲಿಸಿದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಪರಿಣಾಮ, ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಘವೇಂದ್ರ ಚಾರ್ ಅವರು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗೆ ದೂರು ನೀಡಿದ್ದಾರೆ. ಅವರ ದೂರನ್ನು ಪರಿಶೀಲಿಸಿರುವ ಜಿಲ್ಲಾ ಪಂಚಾಯತಿಯು ಬಿಗ್ ಬಾಸ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಮತ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ರಾಮೋಹಳ್ಳಿ ಗ್ರಾಮ ಪಂಚಾಯತಿಗೆ ಪತ್ರ ಬರೆದಿದೆ. ಆದೇಶ ಪತ್ರದ ಪ್ರತಿ ಈದಿನ.ಕಾಮ್‌ಗೆ ದೊರೆತಿದೆ.
ಬಿಗ್ ಬಾಸ್ ಶೋಗಾಗಿ ಬೆಂಗಳೂರಿನ ಕೆಂಗೇರಿ ಬಳಿಕ ಮಾಳಿಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 128ರ 7.18 ಎಕರೆ ಭೂಮಿಯಲ್ಲಿ ‘ಬಿಗ್ ಬಾಸ್ ಮನೆಯ ಸೆಟ್’ ಹಾಕಲಾಗಿದೆ. ಸೆಟ್ ಹಾಕಲಾಗಿರುವ ಭೂಮಿಯು ಕೃಷಿ ಭೂಮಿಯಾಗಿದ್ದು, ಅದರನ್ನು ವಾಣಿಜ್ಯ ಉದ್ದೇಶಕ್ಕೆ ಕಾನೂನಾತ್ಮಕವಾಗಿ ಪರಿವರ್ತನೆ ಮಾಡಲಾಗಿಲ್ಲ. ಸೆಟ್ ಹಾಕಲು ಗ್ರಾಮ ಪಂಚಾಯತಿಯಿಂದ ಅನುಮತಿ (ಎನ್‌ಒಸಿ) ಕೂಡ ಪಡೆದಿಲ್ಲ. ಅಲ್ಲದೆ, ತೆರೆಗೆಯನ್ನೂ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.
“ಬಿಸ್ ಬಾಸ್ ಸೆಟ್ ಹಾಕಲಾಗಿರುವ ಭೂಮಿಯನ್ನು 2023ರ ಡಿಸೆಂಬರ್ 15ರಂಂದು ಕ್ಲಬ್ ಅಗ್ರಿಕಲ್ಚರ್ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲಾಗಿತ್ತು. ಆದರೆ, ಆ ಭೂಮಿಯನ್ನು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಲು ಸೆಕ್ಷನ್ 97ರ ಅಡಿಯಲ್ಲಿ ಆದೇಶ ಪಡೆಯಬೇಕು. ಜೊತೆಗೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯಬೇಕು. ಆದರೆ, ಇದಾವುದನ್ನೂ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಅನುಸರಿಸಿಲ್ಲ. ಯಾವುದೇ ಅನುಮತಿ” ಪಡೆದಿಲ್ಲ ಎಂದು ದೂರುದಾರ ರಾಘವೇಂದ್ರ ಚಾರ್ ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?
“ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಭೂಮಿಯು ರಾಮೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ. ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಬಿಗ್ ಬಾಸ್ ನಡೆಸಲು ಯಾವುದೇ ಅನುಮತಿ ನೀಡಿಲ್ಲವೆಂದು 2024ರ ಡಿಸೆಂಬರ್ 20ರಂದು ಪಂಚಾಯತಿ ಪತ್ರದಿಂದ ಗೊತ್ತಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ತೆರಿಗೆ ಹಣವನ್ನೂ ಪಾವತಿಸದೆ ವಂಚಿಸಲಾಗಿದೆ. ಪಂಚಾಯತಿಯ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಲಾಗುತ್ತಿದೆ. ಭೂಮಿಯನ್ನು ಕ್ಲಬ್ ಅಗ್ರಿಕಲ್ಡರ್ ಉದ್ದೇಶಕ್ಕೂ ಬಳಸದೆ ಬಿಗ್ ಬಾಸ್ ಎಂಬ ವಾಣಿಜ್ಯ ಕಾರ್ಯಕ್ರಮ ನಡೆಸಲು ಬಳಸಲಾಗಿದೆ. ಹೀಗಾಗಿ, ಬಿಗ್ ಬಾಸ್ ಕಾರ್ಯಕ್ರಮ ನಡೆಸುತ್ತಿರುವುದುನ್ನು ಸ್ಥಗಿತಗೊಳಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ರಾಘ್ರವೇಂದ್ರ ಚಾರ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅವರ ದೂರನ್ನು ಪರಿಶೀಲಿಸಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯು ಗ್ರಾಮ ಪಂಚಾಯತಿಗೆ ಸೂಚನಾ ಪತ್ರ ಬರೆದಿದ್ದು, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.