ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರೈತರ ಬಳಕೆಗಾಗಿ ʼರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ(ಎನ್‌ಪಿಎಸ್‌ಎಸ್)ʼ ಎಂಬ ಹೊಸ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದ್ದು, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜನರಿಗೆ ಇದರ ಕುರಿತಾಗಿ ಮಾಹಿತಿ ಒದಗಿಸಲು ರಾಜ್ಯಾದ್ಯಂತ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೃಷಿ ತರಬೇತಿ ಕೇಂದ್ರದಲ್ಲಿ ಕಾರ್ಯಾಗಾರ ನಡೆಸಿದ್ದು, ಈ ಅಪ್ಲಿಕೇಶನ್, ಕೃತಕ ಬುದ್ಧಿಮತ್ತೆ(ಎಐ) ಮತ್ತು ಯಂತ್ರ ಕಲಿಕೆ(ಎಂಎಲ್)ಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ನಿಜಾವಧಿಯ ಕೀಟ ಮೇಲ್ವಿಚಾರಣೆ ಕುರಿತು ಸಮಯೋಚಿತ ಸಲಹೆಗಳು ಮತ್ತು ಪರಿಣಾಮಕಾರಿ ತಂತ್ರಗಳನ್ನು ನೀಡುತ್ತದೆ ಎಂದು ತಿಳಿಸಿದರು.
ಭಾರತ ಸರ್ಕಾರದ ಅಂಗಸಂಸ್ಥೆಯಾದ ಪ್ರಾದೇಶಿಕ ಕೇಂದ್ರ ಸಮಗ್ರ ಕೀಟ ನಿರ್ವಹಣಾ ಕೇಂದ್ರ, ಬೆಂಗಳೂರು(ಆರ್‌ಸಿಐಪಿಎಂಸಿ) ಹಾಗೂ ಸಸ್ಯ ಸಂರಕ್ಷಣಾ, ಸಂಘರೋಧ ಮತ್ತು ಸಂಗ್ರಹಣೆ ನಿರ್ದೇಶನಾಲಯ ಭಾರತ ಸರ್ಕಾರ(ಡಿಪಿಪಿಕ್ಯೂಎಸ್)ಗಳು ಜಂಟಿಯಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಜ್ಯಾದ್ಯಂತ ಜನರಿಗೆ ಇದರ ಕುರಿತಾಗಿ ಮಾಹಿತಿ ಒದಗಿಸಲು ಕಾರ್ಯಾಗಾರಗಳನ್ನು ನಡೆಸುತ್ತಿದೆ. ಅದರಂತೆ ದಾವಣಗೆರೆ, ಉಡುಪಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ನಡೆಸುವ ಯೋಜನೆಯಲ್ಲಿದೆ.

ಎನ್‌ಪಿಎಸ್‌ಎಸ್ ಅಪ್ಲಿಕೇಶನ್, ಕೀಟ ಸಂಭವವನ್ನು ಆರಂಭದಲ್ಲೇ ಪತ್ತೆಹಚ್ಚಿ ತುರ್ತು ಕ್ರಮದ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಮೂಲಕ ರೈತರಿಗೆ ಕೀಟ ಕಣ್ಗಾವಲು ಹಾಗೂ ಕೀಟ ನಿರ್ವಹಣೆ ಕುರಿತ ತಜ್ಞರ ಸಲಹೆಯನ್ನು ಸುಲಭ ಮತ್ತು ಸಕಾಲದಲ್ಲಿ ಪಡೆಯಬಹುದಾಗಿದೆ. ಅಲ್ಲದೆ ನುರಿತ ಕೃಷಿ ನಿರ್ವಾಹಕರು, ತರಬೇತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ರೈತರು ಸಲ್ಲಿಸಿದ ನಿಜ ಅವಧಿಯ ಡೇಟಾವನ್ನು ಬಳಸಿಕೊಂಡು, ಕೀಟದಿಂದ ಉಂಟಾಗಲಿರುವ ಬೆಳೆ ನಷ್ಟವನ್ನು ಗುರುತಿಸಿ ಕೂಡಲೇ ಕಡಿಮೆ ಮಾಡಬಹುದಾಗಿದೆ. ಜತೆಗೆ ಇದು ವಿವಿಧ ಸಾರ್ವಜನಿಕ ಏಜೆನ್ಸಿಗಳಿಗೆ ರಾಷ್ಟ್ರೀಯ ಕೀಟ ಸನ್ನಿವೇಶದ ಭಂಡಾರವನ್ನೇ ಒದಗಿಸುತ್ತದೆ ಮತ್ತು ಕೀಟಗಳ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಆ ಮೂಲಕ ಸಸ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿದೆ.
ಈ ಸುದ್ದಿ ಓದಿದ್ದೀರಾ?: ತುಮಕೂರು | ಆರ್‌ಟಿಒ ಬ್ರೋಕರ್ ಮನೆ ಮೇಲೆ ಲೋಕಾಯುಕ್ತ ದಾಳಿ
