ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಕಲುಷಿತ ನೀರು ನಿಂತಿದ್ದು, ಚರಂಡಿಗಳು ಗಬ್ಬು ನಾರುತ್ತಿವೆ. ಚರಂಡಿಯಲ್ಲಿ ಬಿದ್ದಿರುವ ಮದ್ಯ ಬಾಟಲಿ, ಕಸಕಡ್ಡಿಯನ್ನು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ಸಾಮಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.
“ಬೇಸಿಗೆ ಸಮಯದಲ್ಲಿ ಶೇ.45ರಷ್ಟು ತಾಪಮಾನ ಇದ್ದರೂ ಕೂಡಾ ಜಿಲ್ಲಾಡಳಿತ ಭವನದ ಎದುರು ಕಲುಷಿತ ನೀರಿನಿಂದ ತುಂಬಿದ್ದು, ಗಬ್ಬೆದ್ದು ನಾರುತ್ತಿದೆ. ಅಲ್ಲಿ ವಿಷ ಜಂತುಗಳು, ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಜಿಲ್ಲಾಡಳಿತ ಭವನದ ಆವರಣದ ಕಸ ಕಡ್ಡಿಗಳನ್ನು ಪ್ರತಿಭಟನಾ ಸ್ಥಳದಲ್ಲಿ ಹಾಕಿ ಬೆಂಕಿ ಹಚ್ಚಿದ್ದರಿಂದ ಅಲ್ಲಿ ಗಿಡ-ಗಂಟಿಗಳು, ಸರ್ಕಾರದ ನಾಮಫಲಕಗಳಿಗೆ ಹಾನಿಯಾಗಿದ್ದು, ಜಾಲಿ ಗಿಡ-ಗಂಟಿಗಳು ಬೆಳೆದು ನಿಂತಿವೆ” ಎಂದರು.
“ಒಂದು ದಿನದ ಒಳಗಾಗಿ ಪ್ರತಿಭಟನಾ ಸ್ಥಳವನ್ನು ಸ್ವಚ್ಛಗೊಳಿಸಿ, ಪ್ರತಿಭಟನಾಕಾರರಿಗೆ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
“ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಕಲುಷಿತ ಪ್ರದೇಶದ ಮುಂದೇಯೇ ಓಡಾಡುತ್ತಾರೆ. ಆದರೂ ಗಮನ ಹರಿಸದೆ ಜಾಣ ಕುರುಡು ಪ್ರದರ್ಶಿಸಿದ್ದು, ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ಪ್ರದೇಶದಲ್ಲಿ ಖಾನಾವಳಿ, ಚಹಾದ ಅಂಗಡಿ, ಪಾನಿಪುರಿ ಅಂಗಡಿ ಮತ್ತು ಹಣ್ಣಿನ ಅಂಗಡಿಗಳು ಇವೆ. ಇಂತಹ ಕಲುಷಿತ ವಾತಾವರಣದಲ್ಲಿ ಜನಸಾಮಾನ್ಯರು ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವೆಲ್ಲ ಗೊತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಸ ವಿಲೇವಾರಿ ಕ್ರಮ ಕೈಗೊಳ್ಳದ ಪಿಡಿಒ; ಪಂಚಾಯತಿ ಎದರು ಕಸದ ರಾಶಿ
“ಜಿಲ್ಲಾಡಳಿತ ಭವನದ ಮುಂದೆಯೇ ಕಲುಷಿತ ಪರಿಸ್ಥಿತಿ ಇರುವಾಗ ಗ್ರಾಮೀಣ, ನಗರ ಪ್ರದೇಶದಲ್ಲಿ ಹೇಗೆ ಇರಬಹುದು. ಜನರು ಸಾಂಕ್ರಾಮಿಕ ರೋಗದಿಂದ ಬಳಲಿ ಆಸ್ಪತ್ರೆ ಸೇರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜಿಲ್ಲಾಡಳಿತ ಭವನ ಕೂಡಲೇ ಪ್ರತಿಭಟನಾ ಸ್ಥಳದಲ್ಲಿ ಸ್ವಚ್ಛತೆ, ವಿದ್ಯುತ್, ನೀರಿನ ವ್ಯವಸ್ಥೆ ಮಾಡಿಕೊಡಬೇಕು” ಎಂದು ಸ್ಥಳೀಯ ನಿವಾಸಿ ಪ್ರಭು ಆಗ್ರಹಿಸಿದ್ದಾರೆ.