ಸೂರ್ಯ ಮೇಲೇರುತ್ತಿದ್ದಂತೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಬಳಿ ಕಾತರ ತುದಿ ಮುಟ್ಟಿತ್ತು. ಗಂಟೆ ಹತ್ತಾಗುತ್ತಿದ್ದಂತೆ ಸಂಗಾತಿಗಳು ಹೋರಾಟದ ಗೀತೆಗಳನ್ನು ಹಾಡುತ್ತಾ ಕಾಡಿನ ಸಂಗಾತಿಗಳಿಗೆ ಸ್ವಾಗತ ಕೋರುತ್ತಿದ್ದರು. ಹಿಂದಿನ ದಿನವೇ ನಕ್ಸಲರನ್ನು ಕಾಡಿನಿಂದ ಕರೆತರಲು ಹೋಗಿದ್ದ ತಂಡ ಅವರೊಂದಿಗೆ ರಾತ್ರಿ ಕಳೆದು ಪೊಲೀಸ್ ಸುರಕ್ಷತೆಯೊಂದಿಗೆ ಹೊರಟಿದ್ದವು...
ಚಿಕ್ಕಮಗಳೂರಿನ ಪ್ರವಾಸಿಮಂದಿರದ ಸುತ್ತಮುತ್ತಲಿನ ಪ್ರದೇಶ ಜ. 8ರಂದು ಅಕ್ಷರಶಃ ನೀರವ ಮೌನಕ್ಕೆ ಶರಣಾಗಿತ್ತು. ಅದೊಂಥರ ಖುಷಿ, ನಿರಾಳತೆ, ಕುತೂಹಲ, ವಿಷಾದ, ಆತಂಕ ತುಂಬಿದ ಮೌನ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಯಚೂರು, ಕೇರಳ ಮತ್ತು ತಮಿಳುನಾಡಿಗೆ ಸೇರಿದ ಆರು ಮಂದಿ ನಕ್ಸಲರು ಚಿಕ್ಕಮಗಳೂರಿನ ಕಾಡಿನ ಸಂಬಂಧ ಕಡಿದುಕೊಂಡು ಮುಖ್ಯವಾಹಿನಿಗೆ ಬರುವ ಕೊನೆಯ ಕ್ಷಣವದು.
ಪೊಲೀಸರ ಕಿರುಕುಳ, ಸಾಮಾಜಿಕ ಕಳಂಕ ಹೊತ್ತುಕೊಂಡು ಕುಟುಂಬದ ಕುಡಿಗಳನ್ನು ದಶಕಗಳಿಂದ ನೋಡದ ಕುಟುಂಬ ಸದಸ್ಯರು ಬೆಳಿಗ್ಗೆ ಎಂಟೂವರೆವರೆಗೆ ಪ್ರವಾಸಿ ಮಂದಿರದ ಆವರಣದೊಳಗೆ ಕಾತುರ ತುಂಬಿದ ಹೆಜ್ಜೆ ಹಾಕುತ್ತಿದ್ದರು. ಪ್ರವಾಸಿ ಮಂದಿರದ ಬಳಿ ಶಾಂತಿಗಾಗಿ ನಾಗರಿಕ ವೇದಿಕೆಯ ಕೆ ಎಲ್ ಅಶೋಕ್, ಬಿ ಟಿ ಲಲಿತಾ ನಾಯಕ್, ವಿಜಯಮ್ಮ, ಸಿರಿಮನೆ ನಾಗರಾಜ್ ಇನ್ನೂ ಹಲವರು ಬೆಳಿಗ್ಗೆಯಿಂದಲೇ ಸೇರಿದ್ದರು. ಬೆಂಗಳೂರಿನ ಹಲವು ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಚಳವಳಿಯ ಸಂಗಾತಿಗಳು, ಮಾಜಿ ನಕ್ಸಲರು ಮಾತ್ರವಲ್ಲ, ನಕ್ಸಲರ ಶರಣಾಗತಿ ಹೇಗಿರುತ್ತದೆ ಎಂದು ಕುತೂಹಲದಿಂದ ನೋಡಲು ಬಂದ ಹಲವರು ಇದ್ದರು. ಪ್ರವಾಸಿ ಮಂದಿರದ ಬಳಿ 144 ಸೆಕ್ಷನ್ ಹಾಕಲಾಗಿತ್ತು. ಅದರಾಚೆಗೆ ಸ್ಥಳೀಯ ಜನರ ಕುತೂಹಲದ ಕಣ್ಣುಗಳು ಪ್ರವಾಸಿ ಮಂದಿರದ ಗೇಟುಗಳ ಕಡೆಗೇ ನೆಟ್ಟಿದ್ದವು.
ಪ್ರವಾಸಿ ಮಂದಿರದ ಬಳಿ ಬಂದು ತಮ್ಮವರ ಸ್ವಾಗತಕ್ಕಾಗಿ ಕಾತುರದಿಂದ ಕಾದಿದ್ದ ನಕ್ಸಲ್ ಚಳವಳಿಗಾರರ ಕುಟುಂಬದವರನ್ನು ಮಾತನಾಡಿಸುವ ಪ್ರಯತ್ನವನ್ನು ಈ ದಿನ.ಕಾಮ್ ತಂಡ ಮಾಡಿತ್ತು. ಬೆಳಿಗ್ಗೆ ಎಂಟೂವರೆಗೆಲ್ಲ ಕಳಸದಿಂದ ಬಂದಿದ್ದ ಯಶೋದಾ ಮೊದಲು ಮಾತಿಗೆ ಸಿಕ್ಕಿದರು. ತಮ್ಮ ಸೋದರತ್ತೆಯ ಮಗಳು ಬಾಳೆಹೊಳೆಯ ವನಜಾಕ್ಷಿಯವರನ್ನು ನೋಡುವ ಆಸೆಯಿಂದ ಅವರು ಬಂದಿದ್ದರು. ಯಶೋದಾ ಕೂಡಾ ಹೋರಾಟಗಾರ್ತಿ. ಆಕೆ ನಕ್ಸಲ್ ಅಲ್ಲ, ಆದರೆ, ನಕ್ಸಲ್ ಎನ್‌ಕೌಂಟರ್ ಕಣ್ಣಾರೆ ಕಂಡವರು. 2003ರಲ್ಲಿ ಕಾರ್ಕಳದ ಈದುವಿನಲ್ಲಿ ಪಾರ್ವತಿ ಮತ್ತು ಹಾಜಿಮಾ ಎಂಬ ಇಬ್ಬರು ನಕ್ಸಲರು ನಕ್ಸಲ್ ನಿಗ್ರಹಪಡೆಯ ಗುಂಡಿಗೆ ಬಲಿಯಾಗಿದ್ದರು. ಆಗ ಯಶೋದಾ ಕೂಡಾ ಆ ಜಾಗದಲ್ಲಿದ್ದರು, ಗುಂಡೇಟು ತಗುಲಿ ಬಂಧನಕ್ಕೊಳಗಾಗಿ ಮೈಸೂರಿನ ಜೈಲಿನಲ್ಲಿ ಮೂರು ತಿಂಗಳು ಕಳೆದಿದ್ದರು. ನಕ್ಸಲ್ ಅಲ್ಲದ ಯಶೋದಾ ಅಲ್ಲಿ ಇದ್ದದ್ದು ಹೇಗೆ ಎಂದು ಅವರೇ ವಿವರಿಸಿದರು.

“ಜನಪರ ಚಳವಳಿಯಲ್ಲಿ ಸಕ್ರಿಯಳಾಗಿದ್ದ ನನ್ನನ್ನು ಹಾಜಿಮಾ ಮತ್ತು ಪಾರ್ವತಿ ಅವರಿದ್ದ ತಂಡ ಒಂದು ಮೀಟಿಂಗ್‌ಗಾಗಿ ಅಲ್ಲಿಗೆ ಬರ ಹೇಳಿದ್ದರು. ಕಾಡಿನೊಳಗೆ ಅವರಿದ್ದ ಜಾಗಕ್ಕೆ ಅಂದೇ ಮೊದಲ ಬಾರಿಗೆ ಹೋಗಿದ್ದೆ. ಆ ರಾತ್ರಿ ಅಲ್ಲೇ ತಂಗಿದ್ದೆ. ಅವರು ಅಲ್ಲಿರುವುದು ಗೊತ್ತಾಗಿ ನಕ್ಸಲ್ ನಿಗ್ರಹ ಪಡೆ ದಾಳಿ ನಡೆಸಿತ್ತು. ಆಗ ನನ್ನ ಕಣ್ಣೆದುರೇ ಇಬ್ಬರು ಹತರಾದರು. ನನ್ನ ಸೊಂಟಕ್ಕೆ ಗುಂಡೇಟು ತಗುಲಿತ್ತು. ನಂತರ ಚಿಕಿತ್ಸೆ ಕೊಡಿಸಿ ಮೂರು ತಿಂಗಳು ಮೈಸೂರಿನ ಜೈಲಿನಲ್ಲಿಟ್ಟಿದ್ದರು. ಒಂಬತ್ತು ವರ್ಷಗಳ ನಂತರ ಪ್ರಕರಣದಿಂದ ಖುಲಾಸೆಯಾದೆ. ವನಜಾಕ್ಷಿ ಶರಣಾಗುತ್ತಿರುವುದು ಬಹಳ ಖುಷಿಯಾಗಿದೆ. ಆಕೆಯನ್ನು ನೋಡಬೇಕು ಎಂದು ಬಂದಿದ್ದೇನೆ. ಸಂವಿಧಾನಬದ್ಧ ಹೋರಾಟಗಳಲ್ಲಿ ನಾವೆಲ್ಲ ಮತ್ತೆ ತೊಡಗುತ್ತೇವೆ. ಹೋರಾಟ ಮಾಡದಿದ್ದರೆ ನಮಗೆ ಮೂಲಭೂತ ಸೌಕರ್ಯವೂ ಸಿಗುವುದಿಲ್ಲ, ಉಳಿಗಾಲವೂ ಇಲ್ಲ” ಎಂದು ಅಷ್ಟೇ ದಿಟ್ಟತನದಿಂದ ಹೇಳಿದರು.
ಮುಂಡಗಾರು ಲತಾ ಈ ತಂಡದ ಸೀನಿಯರ್ ಸದಸ್ಯೆ. ಆಕೆ ಕಾಡೊಳಗೆ ಹೋಗಿಯೇ ಕಾಲು ಶತಮಾನ ಕಳೆದಿದೆ. ಸಾಕೇತ್ ರಾಜನ್ ಅವರ ಕಾಲದಲ್ಲಿಯೇ ನಕ್ಸಲ್ ಆಗಿ ಗುರುತಿಸಿಕೊಂಡವರು. ಅವರ ತಂದೆ ತಾಯಿಗೆ ಹದಿಮೂರು ಜನ ಮಕ್ಕಳು. ಅವರಲ್ಲಿ ಆರು ಮಂದಿ ಹೆಣ್ಣುಮಕ್ಕಳು, ಏಳು ಮಂದಿ ಗಂಡು ಮಕ್ಕಳು. ಆಕೆಯ ಕೊನೆಯ ತಮ್ಮ ರಮೇಶ್ ಮಾತಿಗೆ ಸಿಕ್ಕರು. “ಅಕ್ಕ ಕಾಡಿನಿಂದ ಹೊರ ಬರುತ್ತಿರುವುದು ಸಂತೋಷವಾಗುತ್ತಿದೆ” ಎಂದು ಹೇಳುತ್ತಿದ್ದಂತೆ ಮುಂದೆ ಗದ್ಗದಿತರಾದ ಅವರಿಗೆ ಮಾತೇ ಹೊರಡಲಿಲ್ಲ.

“ಅಕ್ಕ ಒಳ್ಳೆಯ ಉದ್ದೇಶಕ್ಕೆ ನಕ್ಸಲ್ ಚಳವಳಿಗೆ ಹೋದಳು. ಆಕೆ ಹೊರಗಿದ್ದಾಗಲೂ ಹೋರಾಟಗಳಲ್ಲಿ ಇರುತ್ತಿದ್ದಳು. ಮನೆಯಲ್ಲಿ ಮದುವೆಯಾಗು ಎಂದು ಹೇಳಿದಾಗ ಈಗ ಬೇಡ ಮುಂದೆ ನೋಡೋಣ ಅಂತಿದ್ದಳು. ನಂತರ ಟೈಲರಿಂಗ್ ಟ್ರೈನಿಂಗ್ ಮಾಡಿದ್ಲು. ನಂತರ ಜನಪರ ಸಂಘಟನೆಗಳ ಸಂಪರ್ಕ ಆಯ್ತು. ಒಂದಿನ ಏನಾಯಿತೋ ಕಾಡಿಗೆ ಹೋಗಿಬಿಟ್ಟಳು. ಆ ನಂತರ ಆಕೆಯನ್ನು ನೋಡಿದ್ದೇ ಇಲ್ಲ. ಅಮ್ಮ ಕಾಯಿಲೆಯಿಂದ ತೀರಿಕೊಂಡ್ರು. ಅಪ್ಪ ಆಕೆ ಮನೆಯಲ್ಲಿದ್ದಾಗಲೇ ತೀರಿಕೊಂಡಿದ್ದರು. ಈಗ ಅಕ್ಕ ಬರುತ್ತಿದ್ದಾಳೆ, ಆದರೆ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇಸುಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಅಕ್ಕ ಕೂಡಾ ಎನ್‌ಕೌಂಟರ್ ಆಗಬಹುದು ಎಂದು ಭಯಗೊಂಡಿದ್ದೆವು. ಈಗ ಸರ್ಕಾರದ ಮನವಿಗೆ ಸ್ಪಂದಿಸಿ ಹೊರಬರುತ್ತಿರುವುದು ಖುಷಿಯಾಗಿದೆ. ಅಕ್ಕನನ್ನು ನಾನು ನೋಡಿಕೊಳ್ಳುತ್ತೇನೆ” ಎಂದ ಲತಾಳ ಪುಟ್ಟ ಸಹೋದರನಲ್ಲಿ ಅಕ್ಕನ ಬಗ್ಗೆ ಹೆಮ್ಮೆ ಇತ್ತು.

ರಾಯಚೂರಿನ ಮಾರೆಪ್ಪ ಅರೋಲಿಯವರ ಸಂಬಂಧಿ ಅಂಬಣ್ಣ ಅವರು ಮಾರೆಪ್ಪ ಅವರ ಕುಟುಂಬದ ಪರಿಸ್ಥಿತಿಯ ಬಗ್ಗೆ ವಿವರಿಸಿದರು. “ಮಾರೆಪ್ಪ ತಾಯಿಗೆ ಈಗ 77ವರ್ಷ ವಯಸ್ಸು. ಆಕೆ ಮಗ ಸತ್ತೇ ಹೋಗಿದ್ದಾನೆ ಅಂದುಕೊಂಡಿದ್ದಾರೆ. ಅಣ್ಣ ದೇವೇಂದ್ರಪ್ಪ ಹಾರ್ಟ್ ಪೇಷೆಂಟ್. ಅವರಂತೆ ಮಿಕ್ಕವರ ಕುಟುಂಬಗಳೂ ಅವರೆಲ್ಲ ಜೀವಂತ ಬರಲ್ಲ ಎಂದುಕೊಂಡಿದ್ದರು. ಇಪ್ಪತ್ತೈದು ವರ್ಷಗಳಿಂದ ಚಳವಳಿಗಾರರು ಕಾಡಿನೊಳಗೆ ಇದ್ದಾರೆ. ಅವರ ಪ್ರದೇಶದ ಕೆಲವು ಸಮಸ್ಯೆಗಳು ಬಗೆಹರಿದಿವೆ. ಬಹುತೇಕ ಬೇಡಿಕೆಗಳು ಇನ್ನೂ ಈಡೇರಿಲ್ಲ. ಹಾಗಾಗಿ ಇದುವರೆಗೂ ಕಾಡಿನಲ್ಲೇ ಇದ್ದರು. ನಕ್ಸಲ್ ಚಳವಳಿಯನ್ನು ಸರ್ಕಾರಗಳು ಭಯೋತ್ಪಾದಕ ಚಳವಳಿ, ಸಂವಿಧಾನಬಾಹಿರ ಚಳವಳಿ, ಹಿಂಸಾತ್ಮಕ ಚಳವಳಿ ಎಂದು ತೀರ್ಮಾನ ಮಾಡೋದು ಸರಿಯಲ್ಲ. ಅದಕ್ಕೆ ಮೊದಲು ಅವರ ಬೇಡಿಕೆಗಳನ್ನು ಸಮಸ್ಯೆಗಳನ್ನು ಸಂವಿಧಾನ ಬದ್ಧವಾಗಿ ಬಗೆಹರಿಸಬೇಕಿತ್ತು. ಅದು ಒಂದಷ್ಟು ಮುಜುಗರ ತಂದಿದೆ. ಆ ಮುಜುಗರದಿಂದ ಹೊರಬರಲು ಅವರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅವರೇನು ಶರಣಾದ ತಕ್ಷಣ ಮನೆಗೆ ಹೋಗಲ್ಲ. ಮತ್ತೆ ಅವರು ಜೈಲಿನಲ್ಲಿದ್ದು ಕೋರ್ಟ್ ಮೂಲಕ ಆರೋಪಮುಕ್ತರಾಗಬೇಕು. ಅಷ್ಟೇ ಅಲ್ಲ ವಿಕ್ರಂ ಗೌಡ ಎನ್‌ಕೌಂಟರ್ ಆದ ಕಾರಣದಿಂದ ಭಯಪಟ್ಟು ಶರಣಾಗುತ್ತಿದ್ದಾರೆ ಎಂಬ ಮಾಧ್ಯಮಗಳ ಆರೋಪ ಸರಿಯಲ್ಲ. ಹಾಗಿದ್ದರೆ ಈ ಹಿಂದೆ ಹಲವರ ಹತ್ಯೆ ಆಗಿದೆ. ಆಗಲೇ ಬರುತ್ತಿದ್ದರು. ಜನ ಚಳವಳಿಯ ಮೇಲೆ ನಂಬಿಕೆ ಇಟ್ಟು ಅವರೆಲ್ಲ ಹೊರ ಬರುತ್ತಿದ್ದಾರೆ. ಅವರಿಗೆ ಮುಖ್ಯವಾಹಿನಿಯಲ್ಲಿ ಜನಚಳವಳಿಯಲ್ಲಿ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗುವಂತೆ ಸರ್ಕಾರ, ಸಮುದಾಯ ಸಹಾಯ ಮಾಡುವ ಅಗತ್ಯವಿದೆ” ಎಂದರು.

ತಮಿಳುನಾಡಿನ ನಕ್ಸಲ್ ಕೆ ವಸಂತ ಅವರ ತಂದೆ ಕುಮಾರ್, ತಾಯಿ ತಮಿಳ್ ಸೆಲ್ವಿ, ಭಾವ ತಲೈಸೆಲ್ವಂ ಬೆಳಿಗ್ಗೆಯೇ ಚಿಕ್ಕಮಗಳೂರಿಗೆ ಬಂದಿದ್ದರು. ಮಗ ಇನ್ನೇನು ಕಣ್ಮುಂದೆ ಬರಲಿದ್ದಾನೆ ಎಂದು ಆ ಜೀವಗಳು ಪ್ರವಾಸಿ ಮಂದಿರದ ಗೇಟಿನ ಕಡೆಗೇ ನೋಡುತ್ತ ಕಣ್ತುಂಬಿ ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ಬಿ ಟೆಕ್ ಓದಿರುವ ಪ್ರತಿಭಾವಂತ ಮಗ ವಸಂತ ಕಾಡಿಗೆ ಸೇರಿದ ನಂತರ ನೋಡೇ ಇಲ್ಲ ಎಂದು ಹೇಳುತ್ತಾ ಕಣ್ಣೀರಾದರು ತಾಯಿ. ಅಪ್ಪ ಗಟ್ಟಿಮುಟ್ಟಾಗಿದ್ದಾರೆ. ಮಗನನ್ನು ನೋಡುವ ಸಂತೋಷ ಅವರ ಮುಖದಲ್ಲಿತ್ತು.
ಕುಟುಂಬದವರಲ್ಲೂ ಅದೇ ದಿಟ್ಟತನ
ಮುಖ್ಯವಾಗಿ ನಕ್ಸಲರು ಅಂದ್ರೆ ಕೊಲೆ ಪಾತಕಿಗಳು, ಸಂವಿಧಾನ ವಿರೋಧಿಗಳು, ಕಾನೂನು ಉಲ್ಲಂಘನೆ ಮಾಡೋರು, ಕಾಡಂಚಿನ ಜನರಿಗೆ ಜೀವ ಭಯ ಉಂಟು ಮಾಡೋರು ಎಂಬ ಪರಂಪರಾಗತ ಆರೋಪಗಳಿಗಿಂತ ಭಿನ್ನವಾಗಿದ್ದಾರೆ ಅಲ್ಲಿನ ಜನರು ಮತ್ತು ಸ್ವತಃ ನಕ್ಸಲರ ಕುಟುಂಬದವರು. ಅವರೆಲ್ಲರಿಗೆ ತಮ್ಮವರು ಜನಪರ ಚಳವಳಿಗಾರರು, ಸರ್ಕಾರದಿಂದ ಜನರಿಗಾಗುತ್ತಿರುವ ಅನ್ಯಾಯದ ವಿರುದ್ಧ ಚಳವಳಿ ಮಾಡಿದವರು ಎಂಬ ಹೆಮ್ಮೆ ಇದೆ. ಕುಟುಂಬದವರು ರಕ್ತ ಸಂಬಂಧಿಗಳು ಮಾತ್ರವಲ್ಲ ಊರಿನ ಜನರೂ ಅದೇ ಭಾವನೆಯಲ್ಲಿದ್ದಾರೆ. ಎರಡು ತಿಂಗಳ ಹಿಂದೆ ನಕ್ಸಲ್ ನಿಗ್ರಹ ಪಡೆಯ ಗುಂಡೇಟಿನಿಂದ ಮೃತಪಟ್ಟ ವಿಕ್ರಂ ಗೌಡ ಅವರ ಸಹೋದರಿ ಕೂಡಾ ಅಣ್ಣನ ಶವ ಅನಾಥವಾಗದಂತೆ ನೋಡಿಕೊಂಡಿದ್ದನ್ನು ನಾವು ಕಂಡಿದ್ದೇವೆ. ವಿಕ್ರಂ ಗೌಡರಿಗೆ ಸೇರಿದ ಜಮೀನಿನಲ್ಲಿ ಊರವರೆಲ್ಲ ಸೇರಿ ಗೌರವದ ಅಂತ್ಯಸಂಸ್ಕಾರ ನಡೆಸಿದ್ದರು. ನಿನ್ನೆ ಶರಣಾದ ನಕ್ಸಲರ ಕುಟುಂಬದವರೂ ಅದೇ ಘನತೆಯಿಂದ ಅವರನ್ನು ಎದುರುಗೊಳ್ಳಲು ಕಾದಿದ್ದರು.
ಏಕಾಏಕಿ ಬದಲಾದ ಶರಣಾಗತಿ ಸ್ಥಳ
ಸೂರ್ಯ ಮೇಲೆರುತ್ತಿದ್ದಂತೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಬಳಿ ಕಾತರ ಹೆಚ್ಚಾಗಿತ್ತು. ಗಂಟೆ ಹತ್ತಾಗುತ್ತಿದ್ದಂತೆ ಸಂಗಾತಿಗಳು ಹೋರಾಟದ ಗೀತೆಗಳನ್ನು ಹಾಡುತ್ತಾ ಕಾಡಿನ ಸಂಗಾತಿಗಳಿಗೆ ಸ್ವಾಗತ ಕೋರುತ್ತಿದ್ದರು. ಹಿಂದಿನ ದಿನವೇ ನಕ್ಸಲರನ್ನು ಕಾಡಿನಿಂದ ಕರೆತರಲು ಹೋಗಿದ್ದ ತಂಡ ಅವರೊಂದಿಗೆ ರಾತ್ರಿ ಕಳೆದು ಪೊಲೀಸ್ ಸುರಕ್ಷತೆಯೊಂದಿಗೆ ಹೊರಟಿದ್ದವು. ಹನ್ನೊಂದು ಗಂಟೆ ಸುಮಾರಿಗೆ ಪ್ರವಾಸಿ ಮಂದಿರದಲ್ಲಿ ಅವರನ್ನು ಸ್ವಾಗತ ಕೋರಲು ಶಾಂತಿಗಾಗಿ ನಾಗರಿಕರು ವೇದಿಕೆ ಸದಸ್ಯರು, ಕುಟುಂಬ ಸದಸ್ಯರು ಪ್ರಗತಿಪರರು ಉತ್ಸಾಹದ ತಯಾರಿ ನಡೆಸಿದ್ದರು. ದಿಢೀರ್ ಆದ ಬದಲಾವಣೆಯನ್ನು ಹನ್ನೆರಡು ಗಂಟೆಯ ಸುಮಾರಿಗೆ ಸಂಘಟನೆಯವರು ಘೋಷಿಸಿ, ನಕ್ಸಲರು ಬೆಂಗಳೂರಿನಲ್ಲಿ ಸಿ ಎಂ ಮುಂದೆಯೇ ಶರಣಾಗಲಿದ್ದಾರೆ ಎಂಬ ವಿಷಯವನ್ನು ಮಾಧ್ಯಮದವರಿಗೆ ತಲುಪಿಸಿದರು. ಎರಡು ಪೊಲೀಸ್ ವಾಹನಗಳು ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ರವಾನಿಸಲು ಸಜ್ಜಾದವು. ಅವರೊಂದಿಗೆ ನಾಗರಿಕ ವೇದಿಕೆಯ ಸದಸ್ಯರು ಹೊರಟು ಸಂಜೆ ಆರರ ಸುಮಾರಿಗೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಗೃಹಕಚೇರಿ ಕೃಷ್ಣ ಬಳಿ ತಲುಪಿದ್ದವು.

ನಕ್ಸಲ್ ಯೂನಿಫಾರಂಗೆ ಪ್ರತಿಯಾಗಿ ಸಂವಿಧಾನ ಪ್ರತಿ
ಅದಾಗಲೇ ನೂರಾರು ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ನಕ್ಸಲರ ಶರಣಾಗತಿಯ ಲೈವ್ ಕೊಡಲು ಸಜ್ಜಾಗಿದ್ದವು. ಕುಮಾರ ಕೃಪಾ ರಸ್ತೆಯ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದರು. ಮಾಧ್ಯಮ ಪ್ರತಿನಿಧಿಗಳಿಗೂ ಮುಂಚಿತವಾಗಿ ಪ್ರವೇಶ ನೀಡಲಿಲ್ಲ. ಏಳರ ಸುಮಾರಿಗೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಮುಂದೆ ನಡೆದಿದೆ ಎಂದು ಘೋಷಿಸಿದರು. ನಂತರ ನಕ್ಸಲರು ತಮ್ಮ ಯೂನಿಫಾರಂ ಮತ್ತು ಬೇಡಿಕೆ ಪತ್ರವನ್ನು ಸಿಎಂಗೆ ಹಸ್ತಾಂತರಿಸಿದರು. ಸಿಎಂ ಆರು ಮಂದಿಗೂ ಸಂವಿಧಾನದ ಪುಸ್ತಕ ಕೊಟ್ಟು, ಗುಲಾಬಿ ಹೂ ನೀಡಿ ಸ್ವಾಗತಿಸಿದರು. ತಮ್ಮ ಎಲ್ಲ ಬೇಡಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಲು ಬದ್ಧ ಎಂದು ಸಿಎಂ ಒತ್ತಿ ಹೇಳಿದರು. ಇಲ್ಲಿ ಶರಣಾದ ತಮಿಳುನಾಡು ಮತ್ತು ಕೇರಳದ ನಕ್ಸಲರ ಪುನರ್ವಸತಿ ಸಂಬಂಧ ಆಯಾ ಸರ್ಕಾರದ ಜೊತೆ ಮಾತನಾಡುವ ಭರವಸೆಯನ್ನೂ ಸಿದ್ದರಾಮಯ್ಯ ನೀಡಿದರು.
ಗೃಹಕಚೇರಿ ಕೃಷ್ಣದಲ್ಲಿ ನಕ್ಸಲರು, ಸಂಘಟನೆಯ ಕೆಲವರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿತ್ತು. ಕುಟುಂಬದವರನ್ನು ನೇರವಾಗಿ ಕೋರಮಂಗಲದ ಪೊಲೀಸ್ ಪೆರೇಡ್ ಗ್ರೌಂಡ್‌ಗೆ ಕರೆದೊಯ್ಯಲಾಗಿತ್ತು. ನಂತರ ಸಿಎಂ ಕಚೇರಿ ಕೃಷ್ಣದಿಂದ ಆರು ಮಂದಿಯನ್ನು ಕುಟುಂಬ ಸದಸ್ಯರ ಭೇಟಿಗಾಗಿ ಕೋರಮಂಗಲಕ್ಕೆ ಕರೆದೊಯ್ಯಲಾಯಿತು. ತಡ ರಾತ್ರಿ ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದು ಒಯ್ದರು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.