ನಾನು ಸಚಿವನಾದ ಮೇಲೆ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಯಾವುದೇ ಹೊಸ ಅನುಮತಿ ನೀಡಿಲ್ಲ. ಹಲವು ವರ್ಷಗಳಿಂದ ಬಂಡೀಪುರ ಮತ್ತು ವಯನಾಡು ನಡುವೆ ರಾತ್ರಿ ಬಸ್ ಸಂಚಾರ ನಡೆಯುತ್ತಿದೆ. ಬಿಜೆಪಿಗರಿಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಇಲ್ಲ, ಹೀಗಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಗರುಡಾಕ್ಷಿ- ಆನ್‌ಲೈನ್ ಎಫ್ಐಆರ್ ಉದ್ಘಾಟನೆ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, “ಬಂಡಿಪುರದಲ್ಲಿ ಈಗಾಗಲೇ ರಾತ್ರಿ 9 ರವರೆಗೆ ಸಂಚಾರಕ್ಕೆ ಅವಕಾಶವಿದೆ. ಇದರ ಜೊತೆಗೆ ಎರಡು ರಾಜ್ಯಗಳ ಎರಡು ಬಸ್ ಸಂಚಾರಕ್ಕೆ ಹಿಂದಿನಿಂದಲೂ ಅವಕಾಶವಿದೆ. ಇದಲ್ಲದೆ ಆಂಬುಲೆನ್ಸ್ ಹಾಗೂ ಆರೋಗ್ಯ ನಿಮಿತ್ತ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ” ಎಂದರು.
“ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡಿ ಟ್ವೀಟ್ ಮಾಡಿರುವುದು ಅಕ್ಷಮ್ಯ. ಅವರ ಕಾಲದಲ್ಲೂ ರಾತ್ರಿ ಬಸ್ ಸೇವೆ ಇತ್ತು. ನನ್ನನ್ನು ಕರ್ನಾಟಕದ ಅರಣ್ಯ ಸಚಿವರೋ? ಕೇರಳದ ಅರಣ್ಯ ಸಚಿವರೋ? ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ. ಕರ್ನಾಟಕದ ಜನತೆಯೆ ಈ ಪ್ರಶ್ನೆಗೆ ತಕ್ಕ ಉತ್ತರ ನೀಡುತ್ತಾರೆ. ಸುಳ್ಳು ಸುದ್ದಿ ಹಬ್ಬಿಸುವುದೆ ಬಿಜೆಪಿಗರ ಚಾಳಿ” ಎಂದು ವಾಗ್ದಾಳಿ ನಡೆಸಿದರು.
“ವನ್ಯಜೀವಿ ಸಂರಕ್ಷಣೆಗೆ ಕಾಯಿದೆ ತಂದಿದ್ದು ಇಂದಿರಾ ಗಾಂಧಿ ಅವರು. ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದೇವೆ.
ದೇವರು ಎಂದು ಪೂಜಿಸುವ ಗಣೇಶನ ಪ್ರತಿರೂಪವಾದ ಆನೆಗಳನ್ನು ಗುಂಡಿಟ್ಟು ಕೊಲ್ಲಲು ಅನುಮತಿ ಕೊಡಿ ಎಂದು ಬಿಜೆಪಿ ಶಾಸಕರು ಸದನದಲ್ಲಿ ಹೇಳುತ್ತಾರೆ. ಇವರು ಈಗ ವನ್ಯಜೀವಿ ಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಗರ ಇಂತ ಮಾತು ಭೂತದ ಬಾಯಲ್ಲಿ ಭಗವದ್ಗೀತೆಯಂತೆ” ಎಂದು ತಿರುಗೇಟು ನೀಡಿದರು.