ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಕ್ ಜನ್ಮದಿನದಂದು, ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅವರು ರಾಯಚೂರು ಜಿಲ್ಲೆಯ ಮಾನ್ವಿ ನಗರದ ಉರ್ದು ಶಾಲೆಗೆ ₹25 ಲಕ್ಷ ಬೆಲೆಬಾಳುವ ನಿವೇಶನವನ್ನು ದಾನವಾಗಿ ನೀಡಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉರ್ದು ಶಾಲೆಯ ಸ್ವಂತ ಕಟ್ಟಡವಿಲ್ಲದೆ ಅನೇಕ ವರ್ಷ ಖಾಸಗಿ ಜಾಗದಲ್ಲಿ ತರಗತಿಗಳನ್ನು ನಡೆಯುತ್ತಿದೆ ಎಂಬ ಕಾರಣಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಶ ಅವರು ತಮ್ಮ ನಿವೇಶನವನ್ನು ದಾನವಾಗಿ ನೀಡಿ ನೂರಾರು ಮಕ್ಕಳ ಭವಿಷ್ಯಕ್ಕೆ ರೂವಾರಿಯಾಗದ್ದಾರೆ.
ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನದಂದೇ ಉರ್ದು ಶಾಲೆ ನಿರ್ಮಾಣಕ್ಕೆ ದಾನವಾಗಿ ನಿವೇಶನ ನೀಡಿ ಅಕ್ಷರದವ್ವನ ಧ್ವನಿಗೆ ಮಕ್ಕಳು ಧ್ವನಿಗೂಡಿಸಲಿ ಎಂದು ಭದ್ರ ಬುನಾದಿ ಹಾಕಿದರು.

ಮಾನ್ವಿ ನಗರದ ನಮಾಜಗೇರಿಗುಡ್ಡದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕೋಣೆಗಳಲ್ಲಿ ಬೋಧನೆ ನಡೆಯುತ್ತಿತ್ತು. ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸ್ವಂತ ಕಟ್ಟಡಕ್ಕೆ ಅನೇಕ ಹೋರಾಟಗಳನ್ನು ಮಾಡಿ ಅಲೆದಾಡಿದರೂ ಸ್ವಂತ ಕಟ್ಟಡ ಒದಗಿಸಲು ಸಾಧ್ಯವಾಗಿರಲಿಲ್ಲ.
ಆದರೆ ಈಗ ಮಾನ್ವಿ ಪಟ್ಟಣದ ಪ್ರಥಮ ದರ್ಜೆ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅವರು ಈ ಶಾಲೆಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿದ ₹25 ಲಕ್ಷ ಬೆಲೆ ಬಾಳುವ ನಿವೇಶನ ನೀಡಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಜತೆಗೆ ನೂರಾರು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಅಕ್ಬರ್ ಪಾಷಾ ಅವರು ಸುಮಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿ ನೂರಾರು ಬಡವರಿಗೆ ಆಹಾರ ಕಿಟ್, ಪಿಂಚಣಿ ಹಾಗೂ ಇತರ ಸಮಾಜಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿ ಹೆಸರುವಾಸಿಯಾದವರು ಎನ್ನಲಾಗಿದೆ.
ಈ ಸಮಾಜ ಸೇವೆಗೆ ಜಿಲ್ಲೆಯ ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ಹೋರಾಟಗಾರರು ಹಾಗೂ ಸಮಾಜ ಸೇವಕರು ಪ್ರಶಂಸೆ ವ್ಯಕ್ತಪಡಿಸಿದರು.

