ಮೋದಿಯವರ ಸಾವರ್ಕರ್‌ ಪ್ರೇಮ: ಗಾಂಧಿ, ಸರ್ದಾರ್‌ ಪಟೇಲ್ ಮತ್ತು ಅಂಬೇಡ್ಕರ್‌ಗೆ ಅಪಚಾರ

Date:

Advertisements

ಸ್ವಾತಂತ್ರ್ಯ ಹೋರಾಟವನ್ನು ಕೈಬಿಟ್ಟ ಸಾವರ್ಕರ್, ಹಿಂದೂಗಳು ಮತ್ತು ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಗಳನ್ನು ರೂಪಿಸಲು ವಿಭಜನಕಾರಿ ನಿರೂಪಣೆಯನ್ನು ಪ್ರಚಾರ ಮಾಡಿದರು

ದೇಶವನ್ನು ಉದ್ದೇಶಿಸಿ ಮಾಡುವ ಎಲ್ಲಾ ಭಾಷಣಗಳಲ್ಲಿ ವಿ ಡಿ ಸಾವರ್ಕರ್‌ ಹೆಸರನ್ನು ಪದೇ ಪದೇ ಜಪಿಸಿದ ನಮ್ಮ ದೇಶದ ಏಕೈಕ ಪ್ರಧಾನಿ ಮೋದಿಯವರು. ಇತ್ತೀಚೆಗೆ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಾವರ್ಕರ್‌ ಹೆಸರಿನ ಕಾಲೇಜೊಂದಕ್ಕೆ ಶಂಕುಸ್ಥಾಪನೆ ಮಾಡಿದ್ದು ಅಪ್ಪಟ ಅನಿರೀಕ್ಷಿತ ದಾಖಲೆ. ಮೋದಿ ಎಸಗುತ್ತಿರುವ ಇಂತಹ ಕೃತ್ಯಗಳಿಂದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಅನುಸರಿಸಿದ ತತ್ವಗಳಿಗೆ ಅವಮಾನವಾಗುತ್ತಿದೆ.

ವಿಡಿ ಸಾವರ್ಕರ್ ಬಗ್ಗೆ ಗಾಂಧಿ ಹೇಳಿದ್ದೇನು?

ಸಾವರ್ಕರ್ ಅವರು 20 ನೇ ಶತಮಾನದ ಮೊದಲ ದಶಕದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡಿದ್ದು ಹೌದು. ಕರಿನೀರ ಸೆರೆವಾಸವನ್ನು ಅಂಡಮಾನಿನಲ್ಲಿ ಅನುಭವಿಸಿದ್ದೂ ನಿಜ. ಆದರೆ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು 1911-1914 ರ ನಡುವೆ ಅನೇಕ ಬಾರಿ ಬ್ರಿಟಿಷರನ್ನು ಅಂಗಲಾಚಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಎಂಬ ಸತ್ಯ ನಿಮಗೆ ಗೊತ್ತೇ? ಸ್ವಾತಂತ್ರ್ಯ ಚಳವಳಿಯ ಯಾವುದೇ ಹೋರಾಟದಲ್ಲಿ ಮುಂದೆಂದೂ ಭಾಗವಹಿಸುವುದಿಲ್ಲ, ಬದಲಾಗಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠನಾಗಿರುತ್ತೇನೆ ಎಂದು ಲಿಖಿತವಾಗಿ ಮಾತು ಕೊಟ್ಟಿದ್ದರು!

Advertisements

ವಾಸ್ತವವೇನೆಂದರೆ, ಸಾವರ್ಕರ್ ಮತ್ತು ಜೈಲಿನಲ್ಲಿರುವ ತಮ್ಮ ಇನ್ನೊಬ್ಬ ಸಹೋದರನ ಹೆಸರು ಈ ಕ್ಷಮಾದಾನ ಅರ್ಜಿಗಳ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದವರ ಪಟ್ಟಿಯಲ್ಲಿ ಇಲ್ಲ ಎಂದು ವಿಡಿ ಸಾವರ್ಕರ್ ಅವರ ಸಹೋದರ, ಡಿಎನ್ ಸಾವರ್ಕರ್ ಅವರು 1920 ಜನವರಿ 8 ರಂದು ಮಹಾತ್ಮಾ ಗಾಂಧಿಯವರಿಗೆ ಟೆಲಿಗ್ರಾಮ್ ಕಳುಹಿಸಿದ್ದರು. ಕ್ಷಮಾದಾನ ಕೋರಿರುವವರು ತಾವು ಮಾಡಿರುವ ಅಪರಾಧಗಳನ್ನು ಸಂಪೂರ್ಣವಾಗಿ ರಾಜಕೀಯ ಸ್ವರೂಪದಲ್ಲಿ ಮನವೊಲಿಸುವ ರೀತಿಯಲ್ಲಿ ಸಾರ್ವಜನಿಕರ ಮುಂದೆ ಇಡಬೇಕು ಎಂದು ಗಾಂಧಿಯವರು, ಜನವರಿ 25 ರಂದು ಪ್ರತ್ಯುತ್ತರ ಪತ್ರ ಬರೆದಿದ್ದರು.

1920 ಮೇ 26ರಂದು ಯಂಗ್ ಇಂಡಿಯಾದಲ್ಲಿ ‘ಸಾವರ್ಕರ್ ಬ್ರದರ್ಸ್’ ಎಂಬ ಲೇಖನ ಬರೆದಿದ್ದರು ಗಾಂಧಿ. ಫ್ರೆಂಚ್ ಮೆಡಿಟರೇನಿಯನ್‌ ಬಂದರಿನಲ್ಲಿ ಹಡಗಿನ ಬಂದರುರಂಧ್ರದಿಂದ ಸಮುದ್ರಕ್ಕೆ ಹಾರಿ ಪೋಲೀಸರಿಂದ ತಪ್ಪಿಸಿಕೊಳ್ಳಲು ಸಾವರ್ಕರ್ ಮಾಡಿದ ಸಾಹಸಿ ಪ್ರಯತ್ನವನ್ನು ನೆನಪಿಸಿಕೊಂಡು, ಇತರೆ ಆಧಾರಗಳ ಅಡಿಯಲ್ಲಿ ಸಾವರ್ಕರ್ ಬಿಡುಗಡೆಗಾಗಿ ಮನವಿ ಮಾಡಿದ್ದರು. “ಅವರಿಬ್ಬರೂ (ಸಾವರ್ಕರ್‌ ಮತ್ತು ಅವರ ಸಹೋದರ) ತಾವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಬಯಸುವುದಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತಾರೆ,” ಎಂದು ಆ ಲೇಖನದಲ್ಲಿ ಗಾಂಧಿ ಉಲ್ಲೇಖಿಸಿದ್ದಾರೆ. ಸಾವರ್ಕರ್ ಮತ್ತು ಅವರ ಸಹೋದರನ ನಿಲುವು ಭಾರತ ಸ್ವತಂತ್ರವಾಗುವುದು ಆಗಿರಲಿಲ್ಲ, ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಚಳವಳಿಯ ಮನೋಭಾವಕ್ಕೆ ವಿರುದ್ಧವಾಗಿತ್ತು!

ಜಿನ್ನಾಗಿಂತ ಮುಂಚೆಯೇ ದ್ವಿ-ರಾಷ್ಟ್ರ ಸಿದ್ದಾಂತ ಬಿತ್ತಿದ ಸಾವರ್ಕರ್ !

ಸ್ವಾತಂತ್ರ್ಯ ಹೋರಾಟವನ್ನು ಕೈಬಿಟ್ಟ ಸಾವರ್ಕರ್, ಹಿಂದೂಗಳು ಮತ್ತು ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಗಳನ್ನು ರೂಪಿಸಲು ವಿಭಜನಕಾರಿ ನಿರೂಪಣೆಯನ್ನು ಪ್ರಚಾರ ಮಾಡಿದರು. 1937ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಭಾಷಣ ಮಾಡುತ್ತಾ ಹಿಂದುಸ್ತಾನ-ಪಾಕಿಸ್ತಾನ ಬೇರೆ ಬೇರೆ ದೇಶಗಳಾಗಬೇಕು ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದರು. “ಆಂಗ್ಲರು ನಮ್ಮ ದೇಶವನ್ನು ಬಿಟ್ಟು ಹೋದರೂ ಮಹಮ್ಮದೀಯರು ನಮ್ಮ ಹಿಂದೂ ರಾಷ್ಟ್ರಕ್ಕೆ ಮತ್ತು ಭಾರತ ದೇಶದ (Common Indian State) ಅಸ್ತಿತ್ವಕ್ಕೆ ಅಪಾಯಕಾರಿಯಾಗುವ ಸಾಧ್ಯತೆಯಿದೆ ಎಂದು ನಾನು ಹಿಂದೂಗಳನ್ನು ಎಚ್ಚರಿಸುತ್ತೇನೆ,” ಎಂದು ಸಾವರ್ಕರ್ ತಮ್ಮ ಮುಸ್ಲಿಮ್ ದ್ವೇಷವನ್ನು ಕಾರಿಕೊಂಡಿದ್ದರು.

“ಭಾರತದಲ್ಲಿ ಅಕ್ಕಪಕ್ಕದಲ್ಲಿ ವಾಸಿಸುವ ಎರಡು ಶತ್ರು ರಾಷ್ಟ್ರಗಳು,” ಎಂಬ ಆಘಾತಕಾರಿ ಹೇಳಿಕೆಯನ್ನು ಅವರು ಅದೇ ಭಾಷಣದಲ್ಲಿ ಅವರು ಹಿಂದೂಗಳು ಮತ್ತು ಮುಸ್ಲಿಮರ ಕುರಿತು ನೀಡಿದ್ದರು. “… ಭಾರತವು ಈಗಾಗಲೇ ಸಮರಸದ ದೇಶವಾಗಿ ಬೆಸೆದುಕೊಂಡಿದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪು, ಅಥವಾ ಹಾಗೆ ಮಾಡಬೇಕೆಂಬ ಇಚ್ಛೆಯಿಂದ ಬೆಸುಗೆ ಹಾಕುವ ಕೆಲಸ ಮಾಡಬಹುದೆಂದು,” “ಕೆಲವು ಅಪ್ರಬುದ್ಧ ರಾಜಕಾರಣಿಗಳು ಯೋಚಿಸುತ್ತಾರೆ” ಎಂದು ಆರೋಪ ಮಾಡಿದ್ದರು. “ಸದುದ್ದೇಶವಿದ್ದರೂ ಆಲೋಚನೆಯನ್ನೇ ಮಾಡದ ಗೆಳೆಯರು” ಎಂದು ಕರೆದು, “ಅವರು ತಮ್ಮ ಕನಸುಗಳನ್ನೇ ನಿಜವೆಂದು ನಂಬಿಕೊಳ್ಳುತ್ತಾರೆ,” ಮತ್ತು “ಮತೀಯ ಗೋಜಲುಗಳನ್ನು ಅರಿಯುವ ಪ್ರಯತ್ನವನ್ನೇ ಮಾಡದೆ ಸಂಘಟನೆಗಳ ಮೇಲೆ ಕೋಮುವಾದಿ ಆರೋಪ ಹೊರಿಸುತ್ತಾರೆ,” ಎಂದು ಟೀಕಿಸಿದರು. “ಆದರೆ ದೊಡ್ಡ ಸತ್ಯವೆಂದರೆ ಕೋಮುವಾದಿ ಪ್ರಶ್ನೆಗಳು ಎಂದು ಈ ಗೆಳೆಯರು ಏನನ್ನು ಕರೆಯುತ್ತಾರೋ, ಅವು ಶತಮಾನಗಳಿಂದ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ವಿರೋಧಾಭಾಸಗಳು,” ಎಂದು ಹೇಳಿದರು.

1940ರ ದಶಕದಲ್ಲಿ ಮಹಮ್ಮದ್ ಅಲಿ ಜಿನ್ನಾ ತೀವ್ರವಾಗಿ ಪ್ರತಿಪಾದಿಸಿದ ದ್ವಿ- ರಾಷ್ಟ್ರದ ಸಿದ್ಧಾಂತದ ನಿಕಟ ಪ್ರತಿರೂಪವನ್ನು ಸಾವರ್ಕರ್ 1937ರಲ್ಲೇ ಪ್ರತಿಪಾದಿಸಿದ್ದರು. ಅವುಗಳು ದೇಶ ಒಡೆಯುವ ಅಪಾಯಕಾರಿ ವಿಚಾರಗಳಾಗಿದ್ದವು.

ಸಾವರ್ಕರ್ ವಿರುದ್ಧ ಗಾಂಧಿ, ಪಟೇಲ್ ಮತ್ತು ಅಂಬೇಡ್ಕರ್ ದೋಷಾರೋಪಣೆ

1942 ಆಗಸ್ಟ್ 8 ರಂದು, ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸುವ ಒಂದು ದಿನದ ಮೊದಲು ಮುಂಬೈಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಗಾಂಧಿಯವರು ಮಾತನಾಡುತ್ತಾ, ಧರ್ಮದ ಹೆಸರಿನಲ್ಲಿ ದೇಶ ವಿಭಜನೆಗೆ ಕರೆ ನೀಡುವುದನ್ನು “ದಾಯಾದಿಗಳ ಕಿತ್ತಾಟ ” ಎಂದು ಕರೆದರು. “ಡಾ. ಮೂಂಜೆ ಮತ್ತು ಸಾವರ್ಕರ್ ಅವರಂತೆ ಖಡ್ಗದ ಸಿದ್ಧಾಂತವನ್ನು ನಂಬುವ ಹಿಂದೂಗಳು ಮುಸಲ್ಮಾನರನ್ನು ಹಿಂದೂ ಪ್ರಾಬಲ್ಯದ ಅಡಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಬಹುದು. ನಾನು ಆ ವರ್ಗವನ್ನು ಪ್ರತಿನಿಧಿಸುವುದಿಲ್ಲ,” ಎಂದು ಗಾಂಧಿ ಸಾರಿ ಹೇಳಿದರು.

Narendra Modi pays tributes to Veer Savarkar
ಸಂಸತ್‌ ಭವನದಲ್ಲಿ ಸಾವರ್ಕರ್‌ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

1942ರಲ್ಲಿ ಗಾಂಧಿಯವರು ಖಂಡಾತುಂಡವಾಗಿ ವಿರೋಧಿಸಿದ ಸಾವರ್ಕರ್ ಸಿದ್ಧಾಂತದ ವಿಭಜಕ ಮತ್ತು ಹಿಂಸಾತ್ಮಕ ಆಯಾಮಗಳನ್ನು ಅಂಬೇಡ್ಕರ್ ಅವರು 1946 ರಲ್ಲಿ ಮೊದಲು ಪ್ರಕಟಿಸಿದ ತಮ್ಮ “Pakistan or Partition of Indiaʼ ಎಂಬ ಪುಸ್ತಕದಲ್ಲಿ ಒತ್ತಿಹೇಳಿದರು. ಅದರಲ್ಲಿ ಅವರು 1937 ರಲ್ಲಿ ಸಾವರ್ಕರ್ ಪ್ರತಿಪಾದಿಸಿದ ವಿಭಜನಕಾರಿ ನೀತಿಯನ್ನು ಕಟುವಾಗಿ ವಿರೋಧಿಸಿದ್ದರು. “ವಿಚಿತ್ರವಾಗಿ ಕಾಣಬಹುದು, ಒಂದು ರಾಷ್ಟ್ರವನ್ನು ಕಟ್ಟುವ ಬದಲು ಎರಡು ರಾಷ್ಟ್ರಗಳನ್ನು ಕಟ್ಟುವ ವಿಚಾರದಲ್ಲಿ ಪರಸ್ಪರ ವಿರೋಧಿಸಬೇಕಾಗಿದ್ದ ಸಾವರ್ಕರ್ ಮತ್ತು ಜಿನ್ನಾ ಅವರ ಮಧ್ಯೆ ಹಿಂದುಸ್ತಾನ ಮತ್ತು ಪಾಕಿಸ್ತಾನ ಬೇರೆ ಬೇರೆ ಆಗಬೇಕೆಂಬ ಬಗ್ಗೆ ಸಂಪೂರ್ಣ ಒಪ್ಪಂದವಿದೆ. ಭಾರತದಲ್ಲಿ ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಇಬ್ಬರೂ ಒಪ್ಪುಕೊಳ್ಳುತ್ತಾರೆ, ಒಪ್ಪುವುದು ಮಾತ್ರವಲ್ಲದೆ ಒಪ್ಪುವಂತೆ ಒತ್ತಾಯಿಸುತ್ತಾರೆ,” ಎಂದು ಹೇಳಿದ್ದಾರೆ.

“ಎರಡೂ ರಾಷ್ಟ್ರಗಳಲ್ಲಿ ಜನರು ಬದುಕುವ ನಿಯಮಗಳು ಮತ್ತು ಷರತ್ತುಗಳ ವಿಚಾರದಲ್ಲಿ ಮಾತ್ರ ಇಬ್ಬರ ನಡುವೆ ವ್ಯತ್ಯಾಸ ಇದೆ,” ಎಂದು ಅಂಬೇಡ್ಕರ್ ಹೇಳುತ್ತಾರೆ. “ಪಾಕಿಸ್ತಾನದಲ್ಲಿ ಮುಸ್ಲಿಂ ರಾಷ್ಟ್ರ ಕಟ್ಟಲು, ಹಿಂದೂಸ್ತಾನದಲ್ಲಿ ಹಿಂದೂ ರಾಷ್ಟ್ರ ಕಟ್ಟಲು ಭಾರತವನ್ನು ಪಾಕಿಸ್ತಾನ ಮತ್ತು ಹಿಂದೂಸ್ತಾನ ಎಂದು ಎರಡು ಭಾಗಗಳಾಗಿ ಕತ್ತರಿಸಬೇಕೆಂದು ಜಿನ್ನಾ ಹೇಳುತ್ತಾರೆ. ಮತ್ತೊಂದೆಡೆ ಸಾವರ್ಕರ್ ಅವರು ʼ..ಎರಡು ರಾಷ್ಟ್ರಗಳು ಒಂದೇ ದೇಶದಲ್ಲಿ ವಾಸಿಸುತ್ತವೆ ಮತ್ತು ಒಂದೇ ಸಂವಿಧಾನದಡಿಯಲ್ಲಿ ಬದುಕುತ್ತವೆ; ಸಂವಿಧಾನವು ಹಿಂದೂ ರಾಷ್ಟ್ರವು ಒಂದು ಪ್ರಮುಖ ಸ್ಥಾನವನ್ನು ಪಡೆಯಲು ಸಾಧ್ಯವಾಗುವಂತೆ ಮತ್ತು ಮುಸ್ಲಿಂ ರಾಷ್ಟ್ರವು ಹಿಂದೂ ರಾಷ್ಟ್ರದ ಅಧೀನದಲ್ಲಿ ಸಹಕರಿಸುವ ಸ್ಥಾನದಲ್ಲಿ ವಾಸಿಸುವಂತೆ ಮಾಡುತ್ತದೆʼ ಎನ್ನುತ್ತಾರೆ,” ಎಂದು ಅಂಬೇಡ್ಕರ್‌ ಹೇಳುತ್ತಾರೆ.

“ಆದರೆ ಶ್ರೀ ಸಾವರ್ಕರ್ ಅವರು ತಮ್ಮ ಯೋಜನೆಯನ್ನು ಪ್ರತಿಪಾದಿಸುವ ಮೂಲಕ ಭಾರತದ ಸುರಕ್ಷತೆ ಮತ್ತು ಭದ್ರತೆಗೆ ನಿಜವಾಗಿಯೂ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ,” ಎಂದು ಅಂಬೇಡ್ಕರ್ ದುಃಖದಿಂದ ಹೇಳುತ್ತಾರೆ. “ಆದರೆ ಹಿಂದೂಗಳಿಗೆ ಸ್ಥಿರವಾದ ಮತ್ತು ಶಾಂತಿಯುತ ಭವಿಷ್ಯ ಸಿಗುತ್ತದೆ ಎಂಬ ಯಾವ ಖಾತ್ರಿಯನ್ನೂ ಸಾವರ್ಕರ್ ಅವರ ಈ ಸಿದ್ಧಾಂತವು ನೀಡಲು ಸಾಧ್ಯವಿಲ್ಲ. ಮುಸ್ಲಿಮರು ಎಂದಿಗೂ ಅಂತಹ ಭಯಾನಕ ಪರ್ಯಾಯಕ್ಕೆ ವಿಧೇಯತೆಯನ್ನು ತೋರಿಸುವುದಿಲ್ಲ” ಎಂದು ಹೇಳುತ್ತಾರೆ.

1948 ಜನವರಿ 30ರಂದು ನಡೆದ ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸಾವರ್ಕರ್ ಮೇಲೆ ನಿಜಕ್ಕೂ ಭಯಾನಕ ವಾಸ್ತವ. “ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದು ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಒಂದು ಮತಾಂಧ ವಿಭಾಗ,” ಎಂದು ತಿಂಗಳ ನಂತರ ಫೆಬ್ರವರಿ 27ರಂದು ಪಟೇಲ್ ಅವರು ಪ್ರಧಾನಿ ಜವಾಹರಲಾಲ್ ನೆಹರುಗೆ ಪತ್ರ ಬರೆದಿದ್ದರು.

ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆಗೆ ಒಳಗಾದ ಸಾವರ್ಕರ್ ಆರೋಪಕ್ಕೆ ಪೂರಕವಾದ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆಗೊಂಡರು. ಆದರೆ ಪಟೇಲ್ ಅವರು ನೆಹರೂಗೆ ಬರೆದ ಪತ್ರದಲ್ಲಿ ಮಾಡಿದ ಆರೋಪಗಳನ್ನೇ ಗಾಂಧಿ ಹತ್ಯೆಯ ವಿಚಾರಣೆಗಾಗಿ ರಚಿಸಲ್ಪಟ್ಟ ಜೀವನ್ ಲಾಲ್ ಕಪೂರ್ ಆಯೋಗ 1970ರಲ್ಲಿ ಸಲ್ಲಿಸಿದ ವರದಿಯೂ ಮಾಡಿತ್ತು. ಈ ಪತ್ರವು ದುರ್ಗಾದಾಸ್‌ ಅವರು ಸಂಪಾದಿಸಿದ, ಅಹಮದಾಬಾದ್‌ನ ನವಜೀವನ್ ಪಬ್ಲಿಷಿಂಗ್ ಹೌಸ್‌ ಪ್ರಕಟಿಸಿದ ‘Sardar Patel Correspondence, 1945-50, Vol VI’ ನಲ್ಲಿ ಪ್ರಕಟಿಸಲಾಗಿದೆ.

ತಿರುವಾಂಕೂರು ಭಾರತೀಯ ಒಕ್ಕೂಟಕ್ಕೆ ಸೇರುವುದನ್ನು ವಿರೋಧಿಸಿದ ಸಾವರ್ಕರ್!

ತನ್ನನ್ನು ತಾನೇ ವೀರ ಎಂದು ಕರೆದುಕೊಂಡಿರುವ ಸಾವರ್ಕರ್, ಭಾರತೀಯ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ ತಿರುವಾಂಕೂರಿನ ಹಿಂದೂ ರಾಜರಿಗೆ ಬೆಂಬಲ ನೀಡಿ ಎಸಗಿದ್ದು ಅಕ್ಷಮ್ಯ ಅಪರಾಧ.

ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ಎದುರು 1998ರ ಆಗಸ್ಟ್ 14ರಂದು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವಾಗ ಆಗಿನ ರಾಷ್ಟ್ರಪತಿ ಕೆ ಆರ್‌ ನಾರಾಯಣನ್‌ ಅವರು ತಿರುವಾಂಕೂರಿನ ದಿವಾನರಾಗಿದ್ದ ಸರ್ ಸಿಪಿ ರಾಮಸ್ವಾಮಿ ಅಯ್ಯರ್ ಅವರಿಗೆ ಪಟೇಲ್‌ ಕೇಳಿದ ಪ್ರಶ್ನೆಯನ್ನು ನೆನಪಿಸಿಕೊಂಡರು. ‘ಶ್ರೀ ಪದ್ಮನಾಭ ದೇವರ ಹೆಸರಿನಲ್ಲಿ ಮತ್ತು ದೇವರ ಪರವಾಗಿ ಆಳಲ್ಪಡುತ್ತಿರುವ’ ತಿರುವಾಂಕೂರು ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವ ಬಗ್ಗೆ ಯಾರೂ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ದಿವಾನ ಸಿಪಿ ರಾಮಸ್ವಾಮಿ ಅಯ್ಯರ್‌ ಹೇಳಿದಾಗ ಸರ್ದಾರ್ ಪಟೇಲ್ ಅವರು, “ಓ.. ಹೌದಾ? ಹಾಗಾದರೆ ತಿರುವಾಂಕೂರಿನ ರಾಜರು ಪದ್ಮನಾಭನನ್ನು ಬ್ರಿಟಿಷ್ ಸರ್ಕಾರದ ಅಧೀನನಾಗಲು ಅನುಮತಿ ನೀಡಿದ್ದು ಹೇಗೆ ಎಂದು ದಯವಿಟ್ಟು ನನಗೆ ತಿಳಿಸಿ?” ಎಂದು ಕೇಳಿದ್ದರು ಎಂದು ಕೆ ಆರ್‌ ನಾರಾಯಣನ್‌ ಭಾಷಣದಲ್ಲಿ ನೆನಪಿಸಿಕೊಂಡಿದ್ದರು.

ಸರ್ದಾರ್ ಪಟೇಲ್ ಅವರು ಭಾರತದ ಏಕೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾಗ ವೀರ ಎಂದು ತನ್ನನ್ನು ತಾನು ಕರೆಸಿಕೊಂಡಿದ್ದ ಸಾವರ್ಕರ್ ತಿರುವಾಂಕೂರಿನ ರಾಜರ ಪರವಾಗಿ ನಿಂತಿದ್ದು ಎಷ್ಟು ದೊಡ್ಡ ವಿಪರ್ಯಾಸ ಅಲ್ಲವೇ?

ವಿಕ್ರಮ್ ಸಂಪತ್ ಅವರು ತಮ್ಮ ಪುಸ್ತಕ, ಸಾವರ್ಕರ್: ಎ ಕಾಂಟೆಸ್ಟೆಡ್ ಲೆಗಸಿ- 1924-66 ರಲ್ಲಿ,
”…ತಿರುವಾಂಕೂರು ರಾಜರಿಗೆ ಸಾವರ್ಕರ್ ನೀಡಿದ ಬೆಂಬಲವು ದುರದೃಷ್ಟಕರ ಮತ್ತು ನವ ಭಾರತ ಒಕ್ಕೂಟದ ಏಕೀಕರಣ ಪ್ರಕ್ರಿಯೆಗೆ ಮಾಡಿದ ಹಾನಿ” ಎಂದು ಬರೆದಿದ್ದಾರೆ.

ಮೂಲಭೂತ ಕರ್ತವ್ಯವನ್ನು ನಿರಾಕರಿಸುವ ಮೋದಿ ನಿಲುವು

ಹೀಗೆಲ್ಲಾ ಇದ್ದರೂ ಪ್ರಧಾನಿ ಮೋದಿಯವರು ಸಾವರ್ಕರ್ ಅವರನ್ನು ನಮ್ಮ ರಾಷ್ಟ್ರದ ಅಪ್ರತಿಮ ಐಕಾನ್ ಎಂದು ಬಿಂಬಿಸುತ್ತಿರುವುದು ಮತ್ತು ಅವರ ಹೆಸರಿನಲ್ಲಿ ಒಂದು ಕಾಲೇಜು ಕಟ್ಟಲು ಹೊರಟಿರುವುದು ಯಾಕೆ? ಹಾಗೆ ಮಾಡುವ ಮೂಲಕ ಮೋದಿಯವರು ಗಾಂಧಿ, ಅಂಬೇಡ್ಕರ್, ಸರ್ದಾರ್ ಪಟೇಲ್ ಮತ್ತು ಸ್ವಾತಂತ್ರ್ಯ ಚಳವಳಿಯ ಮೌಲ್ಯಗಳಿಗೆ ಅಪಚಾರ ಎಸಗುತ್ತಿದ್ದಾರೆ. ಅವರು ಸಂವಿಧಾನದ 51 (ಎ) (ಬಿ) ವಿಧಿ ಪ್ರತಿಪಾದಿಸಿರುವ, “ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಉದಾತ್ತ ಆದರ್ಶಗಳನ್ನು ಪಾಲಿಸುವ ಮತ್ತು ಅನುಸರಿಸುವ” ಮೂಲಭೂತ ಕರ್ತವ್ಯವನ್ನು ಅವಮಾನಿಸಿದ್ದಾರೆ.

ಎಸ್.ಎನ್.ಸಾಹು ಅವರು ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಕೃಪೆ : The Wire

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X