ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮಾಡುತ್ತಿರುವುದು ಖಂಡನೀಯ. ಕೇಂದ್ರ ಸರ್ಕಾರ ಇದೇ ರೀತಿಯ ಮಲತಾಯಿ ಧೋರಣೆ ಮುಂದುವರಿಸಿದರೆ, ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಸಿದ್ದಾರೆ.
ʼಹಿಂದುಳಿದ ಮತ್ತು 371ನೇ (ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಮಲತಾಯಿ ಧೋರಣೆ ಅನ್ಯಾಯ ಎಸಗುತ್ತಿದೆ. ಈ ಭಾಗದ ಪ್ರಮುಖ ಬೇಡಿಕೆಗಳಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಏಮ್ಸ್ ಸ್ಥಾಪನೆ, ಹೆದ್ದಾರಿಗಳ ಅಭಿವೃದ್ಧಿ, ವಿಮಾನಯಾನ ಕ್ಷೇತ್ರದ ಅಭಿವೃದ್ಧಿ, ಕಲಬುರಗಿ 2ನೇ ರಿಂಗ್‌ರೋಡ್ ನಿರ್ಮಾಣ, ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸೇರಿದಂತೆ, ಕೇಂದ್ರ ಸರ್ಕಾರ ಏಳು ಜಿಲ್ಲೆಗಳಿಗೆ ಈಗಾಗಲೇ ಘೋಷಿಸಿರುವ ಅನೇಕ ಯೋಜನೆಗಳು ದಶಕದಿಂದ ನನೆಗುದಿಗೆ ಬಿದ್ದಿವೆʼ ಎಂದಿದ್ದಾರೆ.
ʼಫಜಲ್ ಅಲಿ ವರದಿ, ಸರೀನ್ ಸಮಿತಿ ವರದಿ, ಬಚಾವತ್ ವರದಿ, ಬ್ರಿಜೇಶ್ ವರದಿ, ನಂಜುಂಡಪ್ಪ ವರದಿ ಹೀಗೆ ಸರ್ಕಾರದ ಅಧಿಕೃತ ವರದಿಗಳ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜಾರೋಷವಾಗಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ದೇಶದ ಬೇರೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾವ ಮಾನದಂಡಗಳೂ ಇರಲ್ಲ. ಆದರೆ, ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಗೆ ಕೇಂದ್ರದ ಯೋಜನೆಗಳು ಸ್ಥಾಪನೆ ಪ್ರಶ್ನೆ ಬಂದಾಗ ಮಾನದಂಡಗಳು ಹೇರಲಾಗುತ್ತದೆ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ತಂತ್ರ ಅನುಸರಿಸುತ್ತಿದೆ’ ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ ಯಶಸ್ವಿ | ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ‘ಚಲೋ ಪಾರ್ಲಿಮೆಂಟ್’ ಎಚ್ಚರಿಕೆ
ಕೆಂದ್ರ ಸರ್ಕಾರದ ಮಲತಾಯಿ ಧೋರಣೆಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯ, ಕೇಂದ್ರದಿಂದ ಘೋಷಣೆಯಾದ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಹೊಸ ಯೋಜನೆಗಳ ಸ್ಥಾಪನೆಗೆ ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಕೇಂದ್ರಕ್ಕೆ ಅಧಿಕೃತವಾದ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
‘ಕೇಂದ್ರ ಸರ್ಕಾರ ನಮ್ಮ ಪ್ರದೇಶದ ಬೇಡಿಕೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ, ಈ ಹಿಂದೆ ನಿರ್ಣಯಿಸಿದಂತೆ ಬರುವ ದಿನಗಳಲ್ಲಿ ಏಳೂ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡು ಜಾಗೃತಿ ಅಭಿಯಾನ ನಡೆಸಿ, ಉಗ್ರ ಹೋರಾಟಕ್ಕೆ ಅಡಿಪಾಯ ಹಾಕಲಾಗುವುದು’ ಎಂದು ಎಚ್ಚರಿಸಿದ್ದಾರೆ.