- ಜೂನ್ 4 ರಂದು ನೈಋತ್ಯ ಮಾನ್ಸೂನ್ ಕೇರಳ ಪ್ರವೇಶ
- ಗುರುವಾರ ನಗರದಲ್ಲಿ 31.3 ಡಿ.ಸೆ ಗರಿಷ್ಠ ಉಷ್ಣಾಂಶ ದಾಖಲು
ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೂನ್ 4ರಂದು ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ. ರಾಜ್ಯದಲ್ಲಿಯೂ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಯಾವುದೇ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಂಗಳೂರಿನಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ದಾಖಲೆ ಮಳೆ
ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬಿಸಿಲು ಇರುತ್ತದೆ. ಆದರೆ, ಈ ವರ್ಷ ಹೆಚ್ಚಾಗಿ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಪ್ರಕಾರ ಮೇ ತಿಂಗಳಲ್ಲಿ 13 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. ಈ ಬಾರಿ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 31 ಸೆಂ.ಮೀ ಮಳೆಯಾಗಿದ್ದು, ಇದು 123 ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಹೇಳಿದೆ.
ಕಳೆದ 123 ವರ್ಷದಲ್ಲಿ ಈ ಬಾರಿಯ ಮೇ ತಿಂಗಳಿನಲ್ಲಿ ಮಹಾಮಳೆ ಸುರಿದಿದೆ. 1901ರಿಂದ ಮಳೆಯ ಪ್ರಮಾಣ ದಾಖಲು ಮಾಡುವ ವ್ಯವಸ್ಥೆ ಆರಂಭಗೊಂಡಿದ್ದು, ಇದಕ್ಕೂ ಹಿಂದಿನ ವರ್ಷಗಳ ಅಂಕಿ-ಅಂಶ ಹವಾಮಾನ ಇಲಾಖೆ ಬಳಿ ಇಲ್ಲ. ಹೀಗಾಗಿ, 1,901ರ ನಂತರ ಮೇನಲ್ಲಿ ಸುರಿದ ಅತಿ ದೊಡ್ಡ ಮಳೆ ಇದಾಗಿದೆ.
ಮೇ ತಿಂಗಳಿನಲ್ಲಿ ಬೆಂಗಳೂರು ದಾಖಲೆಯ ಇತಿಹಾಸದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ಹಿಂದೆ, ಮೇ 1957ರಲ್ಲಿ 28 ಸೆಂ.ಮೀ ಮಳೆಯಾಗಿತ್ತು. ಇಲ್ಲಿಯವರೆಗೂ ಇದು ದಾಖಲೆಯ ಮಳೆಯಾಗಿತ್ತು. ಇದೀಗ ಹಳೆ ವರ್ಷದ ದಾಖಲೆಯನ್ನು ಈ ವರ್ಷದ ಮಳೆ ಮುರಿದಿದೆ ಎಂದು ಇಲಾಖೆ ತಿಳಿಸಿದೆ.
2015 ರಿಂದ ಪ್ರತಿ ವರ್ಷ ಬೆಂಗಳೂರಿನ ಮೇ ಮಳೆಯು ಸರಾಸರಿ ಮಾಸಿಕ ಒಟ್ಟು 128.7 ಮಿಮೀ ಮಳೆಗಿಂತ ಮೇಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದತ್ತಾಂಶ ಹೇಳಿದೆ.
ಕಳೆದ ಎಂಟು ವರ್ಷಗಳಲ್ಲಿ ಮೇ ತಿಂಗಳ ಸರಾಸರಿ ಮಳೆ 18.5 ಸೆಂ.ಮೀ. ಕಳೆದ ವರ್ಷ ಅತಿ ಹೆಚ್ಚು 27 ಸೆಂ.ಮೀ ಮಳೆಯಾಗಿದ್ದು, 2020 ಮತ್ತು 2021ರಲ್ಲಿ 13 ಸೆಂ.ಮೀ ಅತಿ ಕಡಿಮೆ ಮಳೆಯಾಗಿದೆ.
2023ರ ಮಾರ್ಚ್ 1 ರಿಂದ ಮೇ 31 ರವರೆಗಿನ ಇಲಾಖೆಯ ಋತುಮಾನದ ಸಂಚಿತ ಮಳೆಯ ಮಾಹಿತಿಯು ಬೆಂಗಳೂರು ನಗರದಲ್ಲಿ 343 ಮಿಮೀ ಮಳೆಯಾಗಿದ್ದು, ಸಾಮಾನ್ಯಕ್ಕಿಂತ 173 ಮಿಮೀ ಹೆಚ್ಚು ಮಳೆಯಾಗಿದೆ ಎಂದಿದೆ.
ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ 275 ಮಿ.ಮೀ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 227 ಮಿ.ಮೀ ಮಳೆ ದಾಖಲಾಗಿದೆ.
ಮಾರ್ಚ್‌ನಿಂದ ಮೇ ವರೆಗೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 245.8 ಮಿಮೀ ಮಳೆಯಾಗಿದೆ, ಮುಂಗಾರು ಪೂರ್ವ ಅವಧಿಯಲ್ಲಿ ಸಾಮಾನ್ಯ ಸರಾಸರಿ 156.1 ಮಿಮೀಗಿಂತ 57% ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 131.5 ಮಿಮೀ ಮಳೆಯಾಗಿದೆ. ಇದು ಸಾಮಾನ್ಯ ಸರಾಸರಿ 140.7 ಮಿಮೀಗಿಂತ 6.5% ಕಡಿಮೆಯಾಗಿದೆ.
ಈ ಸುದ್ದಿ ಓದಿದ್ದೀರಾ? 96 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ: ಬಿಎಂಆರ್‌ಸಿಎಲ್
ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಋತುವಿನಲ್ಲಿ ವಾರ್ಷಿಕವಾಗಿ ಸರಾಸರಿ 60 ಸೆಂ.ಮೀ ಮಳೆಯಾಗುತ್ತದೆ. ಜೂನ್‌ನಲ್ಲಿ 11 ಸೆಂ.ಮೀ., ಜುಲೈನಲ್ಲಿ 12 ಸೆಂ.ಮೀ., ಆಗಸ್ಟ್‌ನಲ್ಲಿ 16 ಸೆಂ.ಮೀ ಮತ್ತು ಸೆಪ್ಟೆಂಬರ್‌ನಲ್ಲಿ ಸರಾಸರಿ 21 ಸೆಂ.ಮೀ ಮಳೆಯಾಗುತ್ತದೆ.
ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಮಾತನಾಡಿ, “ಗಾಳಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ ಗಾಳಿಯ ಚಲನೆ ಸ್ಥಗಿತವಾಗಿದೆ. ಇದು ಮೋಡಗಳ ಚಲನೆಯ ಮೇಲೂ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ” ಎಂದು ಹೇಳಿದ್ದಾರೆ.