ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ. 2 ಗಂಟೆ ಕೆಲಸಕ್ಕೆಂದು ನೇಮಿಸಿಕೊಂಡು 14 ಗಂಟೆ ದುಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಬಾಣಂತಿ ಮಹಿಳೆಯರನ್ನು ಆಸ್ಪತ್ರೆಗೆ ತಲುಪಿಸುವ ಕೆಲಸಕ್ಕೆಂದು ನೇಮಿಸಿಕೊಂಡು ಈಗ ಅವರಿಂದ 32 ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಕೆಲಸದ ಅವಧಿ ಆರು ಪಟ್ಟು ಹೆಚ್ಚಾದರೂ, ಗೌರವಧನ ಮಾತ್ರ ಹೆಚ್ಚಾಗಿಲ್ಲ. ಬೆಲೆ ಏರಿಕೆಗಳ ಹೊಡೆತದ ನಡುವೆಯೂ ಅತೀ ಕಡಿಮೆ ಕೂಲಿಗೆ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ತಮಗೆ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚಿಸಬೇಕೆಂದು ನಿರಂತರವಾಗಿ ಹೋರಾಟನ ನಡೆಸುತ್ತಿದ್ದಾರೆ. ಈಗ ಚಳಿ, ಗಾಳಿ, ಬಿಸಿಲಿನ ನಡುವೆಯೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ.
ಕೊರೆಯುವ ಚಳಿಯಲ್ಲೇ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ನಾಲ್ಕನೇ ದಿನವೂ ಮುಂದುವರೆಸಿದ್ದಾರೆ. ಭಾರೀ ಚಳಿಯ ನಡುವೆಯೂ ಫ್ರೀಡಂ ಪಾರ್ಕ್ನ ರಸ್ತೆಗಳಲ್ಲಿಯೇ ಮಲಗಿ ರಾತ್ರಿ ದೂಡುತ್ತಿದ್ದಾರೆ. ಸರ್ಕಾರವು ಅವರ ಬೇಡಿಕೆಗಳನ್ನು ಈಡೇರಿಸಿದೆ, ಪ್ರತಿಭಟನೆಯನ್ನು ನಿಲ್ಲಿಸುವುದಕ್ಕಷ್ಟೇ ಪ್ರಯತ್ನಿಸುತ್ತಿದೆ. ತಮ್ಮ ಬೇಡಿಕೆ ಈಡರದೆ ಹೋರಾಟ ನಿಲ್ಲಿಸಲು ಸಾಧ್ಯವೇ ಇಲ್ಲ. ಸರ್ಕಾರದ ಪೊಳ್ಳು ಭರವಸೆಗಳಿಗೆ ಮರುಳಾಗಿ ವಾಪಸ್ ಹೋಗುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಮಾಸಿಕ 15 ಸಾವಿರ ರೂ. ನಿಶ್ಚಿತ ಗೌರವಧನ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕೆಂದು ಆಶಾ ಕಾರ್ಯಕರ್ತರೆಯರು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ಭೇಟಿ ನೀಡಿದ್ದರು. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಬೇಡಿಕೆ ಈಡೇರಿಸುತ್ತೇವೆಂದು ಭರವಸೆ ನೀಡಿದ್ದರು. ಸರ್ಕಾರ-ಅಧಿಕಾರಿಗಳು ಕೇವಲ ಭರವಸೆ ನೀಡಲು ಮಾತ್ರವೇ ಸೀಮಿತವಾಗಿದ್ದಾರೆ. ಭರವಸೆಗಳು ಕಾರ್ಯಾಚರಣೆಗೆ ಬರಬೇಕೆಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
ಈ ವರದಿ ಓದಿದ್ದೀರಾ?: ‘ಕೊಟ್ಟ ಮಾತು ಉಳಿಸಿಕೊಳ್ಳಿ’; ಗೌರವಧನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಹಾಲಿ ನೀಡಲಾಗುತ್ತಿರುವ ಗೌರವ ಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ತಿಂಗಳಿಗೆ 9,500 ರೂ.ಗಳನ್ನು ಮುಂಗಡವಾಗಿ ನೀಡಲಾಗುವುದು. ಪ್ರತಿಭಟನೆಯನ್ನು ಕೈಬಿಡಿ ಎಂದು ಗುಂಡೂರಾವ್ ಮನವಿ ಮಾಡಿದರು. ಅವರ ಮನವಿಯನ್ನು ಪ್ರತಿಭಟನಾಕಾರರು ತಿಸ್ಕರಿಸಿದ್ದಾರೆ. ಗೌರವಧನವನ್ನು 15,000 ರೂ.ಗಳಿಗೆ ಏರಿಕೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಸಚಿವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಪರಡಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಸಂಘಟನೆಯು ತಾತ್ಕಾಲಿಕವಾಗಿ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಕ್ಕಾಗಿ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಿದೆ. ಆದರೆ, ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಭಟನಾಕಾರರಿಗೆ ಒಂದು ಕಲ್ಯಾಣ ಮಂಟಪ ಎಲ್ಲ ಸೌಕರ್ಯಗಳನ್ನು ನೀಡಲಾಗದು. ಕೊರೆಯುವ ಚಳಿಯಲ್ಲೇ ರಸ್ತೆಗಳಲ್ಲಿ ಮಲಗುತ್ತಿರುವ ಆಶಾ ಕಾರ್ಯಕರ್ತೆಯರು ಅನಾರೋಗ್ಯಕ್ಕೂ ಈಡಾಗುತ್ತಿದ್ದಾರೆ.
ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಆರೋಗ್ಯ ಕಾರ್ಯಕರ್ತೆಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ. ಅವರ ಬೇಡಿಕೆಗಳನ್ನು ಈಡೇರಿಸಬೇಕಿದೆ.