ಲಂಚ ನೀಡಿದರೂ ದಲಿತ ಎಂಬ ಕಾರಣಕ್ಕೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಖಾಸಗಿ ಶಾಲೆಗೆ ಪರವಾನಗಿ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಗುರುವಾರ ಡಿಡಿಪಿಐ ಕಚೇರಿಯಲ್ಲೇ ಎಫ್‌ಡಿಎ ಅಧಿಕಾರಿಯನ್ನು ಖಾಸಗಿ ಶಾಲೆಯ ಮಾಲೀಕ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಡಿಡಿಪಿಐ ಕಚೇರಿ ಸಿಬ್ಬಂದಿ ಮಂಜುನಾಥ್ ಮೇಲೆ ಅರಕಲಗೂಡಿನ ನ್ಯಾಷನಲ್ ಹೆರೋಡೈಟ್ ಶಾಲೆಯ ಮಾಲೀಕ ತೀವ್ರ ವಾಗ್ದಾಳಿ ನಡೆಸಿದ್ದು, ಕಚೇರಿಯಲ್ಲಿ ಆಕ್ರೋಶವನ್ನು ಹೊರ ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿ ಮಂಜುನಾಥ್ ಅವರು ಕಳೆದ 22 ವರ್ಷದಿಂದ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಇದೀಗ ಇವರ ವಿರುದ್ಧ 50 ಸಾವಿರ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. 2009ರಲ್ಲಿ ತನ್ನಿಂದ 50,000 ಹಣ ಪಡೆಯುವ ಜೊತೆಗೆ ಮತ್ತೆ ಇದೀಗ ಈಗಾಗಲೇ 50 ಸಾವಿರ ರೂಪಾಯಿ ಚೆಕ್ ನೀಡಿದ್ದೇನೆ. ಆದರೂ ಪರವಾನಗಿ ನೀಡಲು ಮೂಲಭೂತ ಸೌಕರ್ಯಗಳ ಕೊರತೆ ನೆಪ ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಶಾಲೆಯ ಮಾಲೀಕ ರಂಗಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಇದೇ ಮಂಜುನಾಥ್ ಅಮಾನತು ಗೊಂಡಿದ್ದರು. ಆದರೆ ಕೆಎಟಿ ಹಾಗೂ ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣಗಳಲ್ಲಿ ಅರ್ಜಿದಾರರ ಪರವಾಗಿ ಯಾವುದೇ ಆದೇಶ ಆಗಿಲ್ಲ. ನಂತರ ಎರಡೂ ಕಡೆ ಅರ್ಜಿ ವಜಾ ಆಗಿದೆ. ನಂತರ ಮುಂದಿನ ಕ್ರಮಕ್ಕೆ ಡಿಡಿಪಿಐ ಡಿಸಿ ಅವರು ಪತ್ರ ಬರೆದಿದ್ದರು. ಡಿಸಿ ಸಿ. ಸತ್ಯಭಾಮ ಅವರು ಕಳೆದ ಡಿ.19 ರಂದು ಮಂಜುನಾಥ್ ಅವರ ಅಮಾನತು ಆದೇಶ ಮುಂದುವರಿಯಲಿದೆ. ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದ್ದರು. ಆದರೂ ಇಲಾಖೆ ಅಧಿಕಾರಿಗಳು ಮಂಜುನಾಥ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಮಂಜುನಾಥ್ ಈಗಲೂ ಸೇವೆ ಮುಂದುವರಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಲಂಚ ಕೊಟ್ಟರೆ ಅಧಿಕಾರಿಯು ಪರವಾನಗಿ ನೀಡುತ್ತಿದ್ದಾರೆ. ನನ್ನನ್ನು ದಲಿತನೆಂಬ ಕಾರಣಕ್ಕೆ ಪರವಾನಗಿ ನೀಡಲು ವಿಳಂಬ ಮಾಡಿ ಸಂಸ್ಥೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತನ್ನ ಮೇಲೆ ದೌರ್ಜನ ಮಾಡುತ್ತಿರುವ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಮಾಲೀಕ ರಂಗಸ್ವಾಮಿ ಆಗ್ರಹಿಸಿದರು.
