ಬೀದರ್‌ | ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಬೇಡಿಕೆ : ಇಚ್ಚಾಶಕ್ತಿ ತೋರದ ಜನಪ್ರತಿನಿಧಿಗಳು

Date:

Advertisements

ಔರಾದ್-ಕಮಲನಗರ ಅವಳಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಬಾಲಕಿಯರಿಗೆ ಪ್ರತ್ಯೇಕವಾಗಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ಆರಂಭವಾಗಿಲ್ಲ. ಪಿಯುಸಿ ಶಿಕ್ಷಣ ಪಡೆಯಬೇಕೆಂದು ಬಯಸಿದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಬೇಕು ಎಂಬುದು ಬಹುದಿನಗಳ ಬೇಡಿಕೆ ಮುನ್ನೆಲೆಗೆ ಬಂದಿದೆ.

ಎಸ್ಸೆಸ್ಸೆಲ್ಸಿ ಮುಗಿದಾಕ್ಷಣ ಬಹಳಷ್ಟು ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸುವ ಸಾಧ್ಯತೆಯೂ ಇದೆ. ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಕೆಲ ಪೋಷಕರು ಮಕ್ಕಳನ್ನು ದೂರದ ಕಾಲೇಜುಗಳಿಗೆ ಕಳುಹಿಸಲು ಮನಸ್ಸು ಮಾಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳ್ಳುತ್ತದೆ. ಹೀಗಾಗಿ ತಾಲ್ಲೂಕಿಗೊಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಔರಾದ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ತಲಾ ಒಂದೊಂದು ಸರ್ಕಾರಿ ಪಿಯು ಕಾಲೇಜುಗಳಿವೆ. ಕಮಲನಗರ ಹೊಸ ತಾಲೂಕು ರಚನೆಯಾಗಿ ಏಳೆಂಟು ವರ್ಷಗಳು ಕಳೆದರೂ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜು ಇಲ್ಲದೇ ಇರುವುದು ವಿಪರ್ಯಾಸ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೌಢ, ಕಾಲೇಜು ಶಿಕ್ಷಣ ಪಡೆಯಲು ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುವುದು ಅನಿವಾರ್ಯ ಎಂಬಂತಾಗಿದೆ.

Advertisements

ಔರಾದ್‌, ಕಮಲನಗರ ತಾಲೂಕಿನಲ್ಲಿ ಎರಡು ಸರ್ಕಾರಿ, 5 ಅನುದಾನಿತ ಹಾಗೂ 5 ಖಾಸಗಿ ಪಿಯು ಕಾಲೇಜುಗಳಿವೆ. ಆದರೆ ದಾಬಕಾ, ಚಿಂತಾಕಿ ಹೋಬಳಿ ಕೇಂದ್ರದಲ್ಲಿ ಯಾವುದೇ ಪದವಿ ಪೂರ್ವ ಕಾಲೇಜು ಇಲ್ಲ. ಉಳಿದ ಕಡೆಯಿರುವ ಕೆಲವು ಕಾಲೇಜುಗಳಲ್ಲಿ ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ಹಾಗೂ ಬಹು ವಿಷಯ ಆಯ್ಕೆಗೆ ಅವಕಾಶ ಇಲ್ಲದಿರುವುದಕ್ಕೆ ಬಹಳಷ್ಟು ವಿದ್ಯಾರ್ಥಿಗಳು 40-50 ಕಿ.ಮೀ. ದೂರದ ಜಿಲ್ಲಾ ಕೇಂದ್ರದ ಕಾಲೇಜುಗಳಿಗೆ ದಾಖಲಾಗುತ್ತಿದ್ದಾರೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಭರಿಸಲು ಸಾಧ್ಯವಾಗದ ಕಾರಣ ಶಿಕ್ಷಣಕ್ಕೆ ತೊಡಕಾಗುತ್ತಿದೆ ಎಂಬುದು ಪೋಷಕರು ಹೇಳುತ್ತಿದ್ದಾರೆ.

3 ದಶಕದಿಂದ ಹೊಸ ಕಾಲೇಜು ಇಲ್ಲ:

ಜಿಲ್ಲೆಯಲ್ಲಿ ಒಟ್ಟು 24 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಔರಾದ್‌ ತಾಲ್ಲೂಕಿನಲ್ಲಿ 2 ಪಿಯು ಕಾಲೇಜುಗಳಿವೆ. ಔರಾದ್ ಅತೀ ಕಡಿಮೆ ಸರ್ಕಾರಿ ಪಿಯು ಕಾಲೇಜು ಇರುವ ತಾಲ್ಲೂಕು. 1981-82ರಲ್ಲಿ ಠಾಣಾ ಕುಶನೂರ ಗ್ರಾಮದಲ್ಲಿ (ಈಗ ಕಮಲನಗರ ತಾಲ್ಲೂಕು) ಸರ್ಕಾರಿ ಪಿಯು ಕಾಲೇಜು ಸ್ಥಾಪನೆಯಾಗಿದೆ. ಅದಾದ ಒಂದು ದಶಕದ ನಂತರ 1993-94ರಲ್ಲಿ ಔರಾದ್‌‌ನಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸಲಾಯಿತು.

ತದನಂತರ ತಾಲ್ಲೂಕಿನಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸಿದರೂ ಅದನ್ನು ಉಳಿಸಿಕೊಳ್ಳುವಲ್ಲಿ ಸ್ಥಳೀಯರು, ಜನಪ್ರತಿನಿಧಿಗಳು ವಿಫಲ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಸದ್ಯ ತಾಲ್ಲೂಕಿನಲ್ಲಿರುವ ಎರಡು ಪಿಯು ಕಾಲೇಜುಗಳು ಅರ್ಧಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರಿಂದ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ.

ಸ್ಥಳಾಂತರವಾದ ಪಿಯು ಕಾಲೇಜು :

2000ನೇ ಸಾಲಿನ ಸುಮಾರಿಗೆ ಕಮಲನಗರ ತಾಲ್ಲೂಕಿನ ಮುಧೋಳ(ಬಿ), ಹೊಕ್ರಾಣಾ ಪ್ರೌಢ ಶಾಲೆಯ ವಿಭಾಗದಲ್ಲಿ ಸರ್ಕಾರಿ ಪಿಯು ಕಾಲೇಜು ನಡೆಸಲು ನಿರ್ಧರಿಸಿ, 2004ರವರೆಗೆ ಐದಾರು ವರ್ಷಗಳ ಕಾಲ ಪಿಯು ಕಲಾ ವಿಭಾಗದ ಕಾಲೇಜು ನಡೆಯಿತು. ಮಕ್ಕಳ ದಾಖಲಾತಿ, ಮೂಲಸೌಕರ್ಯ ಸೇರಿ ಹಲವು ಅಡೆತಡೆಯಿಂದ ಎರಡು ಕಾಲೇಜು ಬೇರೆಡೆಗೆ ಸ್ಥಳಾಂತರಿಸಿದ್ದರು ಎಂದು ಸ್ಥಳೀಯ ನಿವಾಸಿ ಶಿವಕಾಂತ ಖಂಡೆ ಹೇಳುತ್ತಾರೆ.

ಪ್ರಸಕ್ತ ವರ್ಷ ಮುಧೋಳ(ಬಿ), ಹೊಕ್ರಾಣಾ ಪ್ರೌಢ ಶಾಲೆಗಳಲ್ಲಿ ಕ್ರಮವಾಗಿ 60, 96 ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಈ ಎರಡು ಪ್ರೌಢಶಾಲೆಗಳಲ್ಲಿ 150ಕ್ಕಿಂತ ಹೆಚ್ಚು ಮಕ್ಕಳ ದಾಖಲಾತಿ ಇರುವುದು ಗಮನಾರ್ಹ ಸಂಗತಿ.

ಕಮಲನಗರ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ದಾಬಕಾ (ಸಿ) ಗ್ರಾಮದಲ್ಲಿ ಕೆಲ ವರ್ಷಗಳ ಕಾಲ ಸರ್ಕಾರಿ ಪಿಯು ಕಾಲೇಜು ಆರಂಭಿಸಿದರು. ನಂತರ ಯಾವ ಕಾರಣಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಮರಾಠಿ ಪ್ರಭಾವ ಹೊಂದಿರುವ ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಪಿಯು ಕಾಲೇಜು ಪುನಾರಂಭಿಸಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಗುಲಾಂ ಶೇಕ್‌ ಒತ್ತಾಯಿಸಿದ್ದಾರೆ.

ಔರಾದ್‌ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಸಂತಪೂರನಲ್ಲಿ ಸರ್ಕಾರಿ ಪಿಯು ಕಾಲೇಜು ಪ್ರಾರಂಭ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.

ಸಂತಪೂರ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಸೇರಿ ಒಟ್ಟು 12 ಪ್ರೌಢ ಶಾಲೆಗಳಿವೆ. ಸುತ್ತಮುತ್ತಲಿನ 20ಕ್ಕೂ ಅಧಿಕ ಗ್ರಾಮಗಳ 600ಕ್ಕೂ ಅಧಿಕ ಮಕ್ಕಳು ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸಂತಪೂರ ಸರ್ಕಾರಿ ಪ್ರೌಢ ಶಾಲೆಯನ್ನು ಪಿಯು ಕಾಲೇಜು ಆಗಿ ಮೇಲ್ದರ್ಜೆಗೇರಿಸುವ ಕನಸು ಮಾತ್ರ ಇಂದಿಗೂ ಈಡೇರಲಿಲ್ಲ. ಇದರಿಂದ 10ನೇ ಮುಗಿಸಿದ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ದುಬಾರಿ ಶುಲ್ಕ ಪಾವತಿಸಿ ದಾಖಲಾಗುವುದು ಅನಿವಾರ್ಯವಾಗಿದೆ.ಯ

WhatsApp Image 2025 01 13 at 6.29.41 PM

ʼಸಂತಪೂರ ಈ ಹಿಂದೆ ತಾಲ್ಲೂಕು ಕೇಂದ್ರವಾಗಿತ್ತು. ಇಂದಿಗೂ ತಾಲ್ಲೂಕು ಮಟ್ಟದ 4 ಇಲಾಖೆ ಕಚೇರಿಗಳು ಸಂತಪೂರಿನಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಮೇಲಿರುವ ಸಂತಪೂರನಲ್ಲಿ 7 ಪ್ರೌಢಶಾಲೆಗಳಿವೆ. ಇನ್ನು ಸಂತಪೂರ ಪ್ರೌಢಶಾಲೆ ಒಂದರಲ್ಲೇ ಪ್ರತಿವರ್ಷ 60ಕ್ಕೂ ಅಧಿಕ ಮಕ್ಕಳು ಹತ್ತನೇ ಮುಗಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯೂ ಏರಿಕೆಯಾಗುತ್ತಿದೆ.

‘ಸಂತಪೂರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪಿಯು ಕಾಲೇಜು ಆರಂಭಿಸಿದರೆ ಸುತ್ತಲಿನ 20ಕ್ಕೂ ಹೆಚ್ಚಿನ ಗ್ರಾಮಗಳ ನೂರಾರು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕು ಎಂದು ಹೋರಾಟಗಾರ ತುಕಾರಾಮ ಹಸನ್ಮುಖಿ ಅಭಿಪ್ರಾಯಪಟ್ಟಿದ್ದಾರೆ.

ಗಡಿಭಾಗದ ವಿದ್ಯಾರ್ಥಿಗಳಿಗೆ ಸಂಕಟ :

ಗ್ರಾಮೀಣ ಪ್ರದೇಶಗಳಲ್ಲಿ ಕಾಲೇಜುಗಳ ಕೊರತೆ ಇರುವುದರಿಂದ ಮಕ್ಕಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ 20-40 ಕಿ.ಮೀ ದೂರದಿಂದ ಔರಾದ್‌, ಬೀದರ್‌ ನಗರಕ್ಕೆ ಬರುವ ವಿದ್ಯಾರ್ಥಿಗಳ ಸಂಕಟ ಹೇಳತೀರದು. ಸಮರ್ಪಕ ಸಾರಿಗೆ ವ್ಯವಸ್ಥೆ, ಕಾಲೇಜು ಕೊರತೆಯಿಂದ ಬಹಳಷ್ಟು ಪೋಷಕರು ಮಕ್ಕಳನ್ನು ವಸತಿ ಕಾಲೇಜುಗಳಿಗೆ ಸೇರಿಸಿದರೆ, ಹಲವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮನೆ, ಮಠ ಬಿಟ್ಟು ನಗರಗಳಲ್ಲಿ ನೆಲೆಸಿದ್ದಾರೆ.

ಔರಾದ್‌ ಹಾಗೂ ಕಮಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ 31 ಸರ್ಕಾರಿ ಹಾಗೂ 42 ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 73 ಪ್ರೌಢ ಶಾಲೆಗಳಿವೆ. ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 3,484 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರ ಸಂಖ್ಯೆ ಇದ್ದೇ ಇರುತ್ತದೆ. ಹೀಗೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪಾಸಾಗುತ್ತಾರೆ. ಮಕ್ಕಳ ಪಿಯು ಶಿಕ್ಷಣಕ್ಕೆ ಸ್ಥಳೀಯವಾಗಿ ಕಾಲೇಜು ಕೊರತೆ, ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ಕಾರಣಕ್ಕೆ ಗಡಿಗ್ರಾಮಗಳ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಕಂಡು ಬಂದಿದೆ.

ಹೋರಾಟದ ಎಚ್ಚರಿಕೆ :

ರಸ್ತೆ, ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ಇತರ ಕಾಮಗಾರಿಗಳಿಗೆ ನೂರಾರು ಕೋಟಿ ವೆಚ್ಚ ಮಾಡುತ್ತಿರುವ ಸರ್ಕಾರ ಗಡಿಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ಅಗತ್ಯ ಯೋಜನೆ ರೂಪಿಸುವಲ್ಲಿ ವಿಫಲವಾಗಿದೆ ಎಂದು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು ಪಟ್ಟಿಯಲ್ಲಿರುವ ಔರಾದ್‌ ತಾಲ್ಲೂಕಿನಲ್ಲಿ ಬಾಲಕಿಯರ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಇಲ್ಲ. ಬೇರೆ ತಾಲ್ಲೂಕಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕಾಲೇಜುಗಳು ಇರುವಂತೆ ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ನಮ್ಮ ತಾಲ್ಲೂಕಿನಲ್ಲಿಯೂ ಬಾಲಕಿಯರ ಕಾಲೇಜು ಆರಂಭಕ್ಕೆ ಶಾಸಕ, ಸಚಿವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಬಿವಿಪಿ ಮುಖಂಡ ಅಶೋಕ ಶೆಂಬೆಳ್ಳಿ ಎಚ್ಚರಿಸಿದರು.

ಹೊಸ ಕಾಲೇಜು ಆರಂಭಿಸುವಂತೆ ಸದನದಲ್ಲಿ ಚರ್ಚೆ :

ಔರಾದ್‌ ತಾಲ್ಲೂಕಿನ ಔರಾದ್(ಬಿ), ಸಂತಪೂರ, ಚಿಂತಾಕಿ, ವಡಗಾಂವ(ದೇ) ಹಾಗೂ ಕಮಲನಗರದಲ್ಲಿ ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವಂತೆ ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರು 2021ರಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರಿಗೆ ಸದನದಲ್ಲಿ ಪ್ರಶ್ನಿಸಿದ್ದರು.

ಅದಕ್ಕೆ ಸಚಿವರು, ʼಪ್ರಸ್ತಾವನೆಗಳ ಕುರಿತು ಈಗಾಗಲೇ ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಲಾಗಿದೆ. ಬೃಹತ್‌ ಆರ್ಥಿಕ ಹೊರೆಯ ಪ್ರಸ್ತಾವನೆಯಾಗಿರುವುದರಿಂದ, ಈಗಾಗಲೇ ಪ್ರಾರಂಭಿಸಲಾದ ಪದವಿಪೂರ್ವ ಕಾಲೇಜುಗಳಿಗೆ ಕಟ್ಟಡ, ಪ್ರಯೋಗಾಲಯ, ಉಪಕರಣಗಳು, ಗ್ರಂಥಾಲಯ ಹಾಗೂ ಇತರ ಮೂಲಸೌಕರ್ಯ ಒದಗಿಸಿದ ನಂತರ ಹೊಸ ಕಾಲೇಜು ಮಂಜೂರು ಮಾಡುವ ಬಗ್ಗೆ ಪರಿಶೀಲಿಸುವಂತೆ ಆರ್ಥಿಕ ಇಲಾಖೆ ತಿಳಿಸಿದೆʼ ಎಂದು ಉತ್ತರಿಸಿದರು. ನಂತರ ಅದು ನನೆಗುದಿಗೆ ಬಿದ್ದಿತ್ತು.

ಈ ಬಗ್ಗೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್‌ ಈದಿನ.ಕಾಮ್ ಜೊತೆಗೆ ಮಾತನಾಡಿ,ʼಔರಾದ್‌ ತಾಲ್ಲೂಕಿನಲ್ಲಿ ಬಾಲಕಿಯರ ಪಿಯು ಕಾಲೇಜು ಆರಂಭಿಸುವ ಕುರಿತು ಯಾವುದೇ ಬೇಡಿಕೆ ಇಲ್ಲ. ಔರಾದ್‌ ತಾಲ್ಲೂಕಿನ ಚಿಂತಾಕಿಯಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆʼ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ

ಔರಾದ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂತಾಕಿ, ದಾಬಕಾ(ಸಿ), ಸಂತಪೂರ ಹಾಗೂ ಕಮಲನಗರ ವ್ಯಾಪ್ತಿಯಲ್ಲಿ ಸರ್ಕಾರಿ ಪಿಯು ಕಾಲೇಜು ಇಲ್ಲದಿರುವುದರಿಂದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿದೆ. ಇಲ್ಲಿಯವರಿಗೆ ತಾಲ್ಲೂಕಿನಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕಾಲೇಜು ಆರಂಭಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಲಿಲ್ಲ ಎಂಬುದು ಯೋಚಿಸಬೇಕಾದ ಸಂಗತಿ. ‌

ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದಾದರೂ ತಾಲ್ಲೂಕಿಗೊಂದು ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹೋಬಳಿ ಕೇಂದ್ರಕ್ಕೊಂದು ಪಿಯು ಕಾಲೇಜು ಪ್ರಾರಂಭಿಸಲು ಮುಂದಾಗಬೇಕುʼ ಎಂದು ಹಿರಿಯ ಹೋರಾಟಗಾರ ಬಸವರಾಜ ಶೆಟಕಾರ್‌ ಆಗ್ರಹಿಸಿದರು.

ಈ ಕುರಿತು ಮಾಹಿತಿಗಾಗಿ ಔರಾದ್ ಕ್ಷೇತ್ರದ ಶಾಸಕ ಪ್ರಭು ಬಿ.ಚವ್ಹಾಣ ಅವರನ್ನು ಈದಿನ.ಕಾಮ್ ಸಂಪರ್ಕಿಸಿತು. ಅವರು ಕರೆ ಸ್ವೀಕರಿಸಲಿಲ್ಲ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

  1. ಶಾಲಾ ಕಾಲೇಜು ವಸತಿ ಗ್ರಹಗಳನ್ನು ಕಟ್ಟಿಸುವ ಬದಲಿ ಮಂದಿರ ಮಸೀದಿ ಚರ್ಚುಗಳನ್ನು ಕಟ್ಟಿಸಲು ಹೇಳಿ ಮೊದಲು ಕಟ್ಟಿಸುತ್ತವೆ ದರಿದ್ರಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X