ಪ್ರಸ್ತುತ 371(ಜೆ) ಕಲಂ ನಿಯಮಾವಳಿಗಳನ್ನು ಅವಲೋಕಿಸಿ ಪರಿಷ್ಕರಿಸಿ ಪ್ರತಿ ವರ್ಷ ನಿಯಮಾವಳಿಗಳಿಗೆ ಪರಿಷ್ಕರಣೆ ಮಾಡಿ ಕಲ್ಯಾಣ ಕರ್ನಾಟಕದ ವ್ಯಾಪಕ ಕ್ಷೇತ್ರದ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸಿ ಕೆಕೆಆರ್‌ಡಿಬಿಗೆ ಮಂತ್ರಿಗಳನ್ನೇ ಸರದಿವಾರು ಅಧ್ಯಕ್ಷರನ್ನಾಗಿ ಮಾಡುವಂತೆ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ಬೀದರ್ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, “ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ನೂತನ ಸರ್ಕಾರದ ಸಂಪುಟದಲ್ಲಿ ಜಿಲ್ಲೆಯಿಂದ ಈಶ್ವರ ಖಂಡ್ರೆ ಮತ್ತು ರಹಿಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸಂತೋಷದ ವಿಷಯವಾಗಿದೆ. ಉಭಯ ಸಚಿವರು ಈ ಹಿಂದೆಯೂ ಸಚಿವರಾಗಿ ಕಾರ್ಯ ನಿರ್ವಹಿಸಿರುವುದರಿಂದ, ಅಪಾರ ಅನುಭವ ಹೊಂದಿದ್ದಾರೆ” ಎಂದರು.
“ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿತಿರುವ ಇಬ್ಬರೂ ಸಚಿವರು ಜಿಲ್ಲೆಯ ರಚನಾತ್ಮಕ ಪ್ರಗತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸುವ ಮೂಲಕ ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು, ಕಾರ್ಯಾಚರಣೆ ರೂಪದಲ್ಲಿ ಕೈಗೊಳ್ಳಬೇಕೆಂದು ಕಾರಂಜಾ ಮುಳುಗಡೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ” ಎಂದರು.
“ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿ ಮಾಡಿ ಭಾರತ ಸರ್ಕಾರ ಜಾರಿಗೆ ತಂದಿದೆ. ಇದರ ಅನ್ವಯ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿ, ಸಮಗ್ರ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಬೇಕಾಗಿದೆ. ಪ್ರಸ್ತುತವಾಗಿ ವಿಶೇಷ ಸ್ಥಾನಮಾನದಡಿ ಶೈಕ್ಷಣಿಕ ಪ್ರವೇಶಗಳು, ನೇಮಕಾತಿಗಳು, ಮುಂಬಡ್ತಿಗಳು ಮತ್ತು ಕೆಕೆಆರ್‌ಡಿಬಿಯಿಂದ ಸೀಮಿತ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ 371(ಜೆ) ಕಾನೂನು ಉಪಯೋಗವಾಗುತ್ತಿದೆ. ನೂತನ ಸರ್ಕಾರ 371(ಜೆ) ಕಲಂ ಅಡಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ನಿಯಮಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವುದು ಅತಿ ಅವಶ್ಯವಾಗಿದೆ” ಎಂದು ಹೇಳಿದರು.
ರೈತರು, ಸಂತ್ರಸ್ತರು ಸೇರಿದಂತೆ ಎಲ್ಲ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ 371(ಜೆ) ಕಲಂ ಬಲಿಷ್ಟ ರಾಮಬಾಣವಾಗಿದ್ದರೂ ಸಹ ಅದರ ಪ್ರಯೋಗವಾಗದೇ ಇರುವುದು ಖೇದಕರವಾದ ವಿಷಯವಾಗಿದೆ. ನೂತನ ಸರಕಾರ ಈ ವಿಷಯಕ್ಕೆ ಸವಾಲಾಗಿ ಸ್ವೀಕರಿಸಲು ಒತ್ತಾಯಿಸಿದರು.
“ಸುಮಾರು 11 ತಿಂಗಳುಗಳಿಂದ ಕಾರಂಜಾ ಸಂತ್ರಸ್ಥರು ನ್ಯಾಯಯುತವಾದ ಬೇಡಿಕೆಗೆ ಮಾನವಿಯತೆಯ ಮಾನದಂಡದಂತೆ ಈಡೇರಿಸಲು ನಡೆಸುತ್ತಿರುವ ಹೋರಾಟಕ್ಕೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು. ಪ್ರಸ್ತುತ ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷದವರು ಕಾರಂಜಾ ಸಂತ್ರಸ್ಥರ ಬೇಡಿಕೆ ಈಡೇರಿಸಲು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ, ಕಾಲಮಿತಿಯಲ್ಲಿ ಸಕರಾತ್ಮಕವಾಗಿ ಸ್ಪಂದನೆ ನೀಡಿ, ಸಂತ್ರಸ್ತರಿಗೆ(ಒನ್ ಟೈಮ್ ಸೆಟ್ಲಮೆಂಟ್ ಮಾನದಂಡದಂತೆ) ವೈಜ್ಞಾನಿಕ ಪರಿಹಾರ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದರು.
“ಪ್ರಸ್ತುತ 371(ಜೆ) ಕಲಂ ನಿಯಮಾವಳಿಗಳನ್ನು ಅವಲೋಕಿಸಿ ಪರಿಷ್ಕರಣೆ ಮಾಡಬೇಕು. ಅಷ್ಟೇ ಅಲ್ಲದೆ ಪ್ರತಿ ವರ್ಷ ನಿಯಮಾವಳಿಗಳಿಗೆ ಪರಿಷ್ಕರಣೆ ಮಾಡಿ ಕಲ್ಯಾಣ ಕರ್ನಾಟಕದ ವ್ಯಾಪಕ ಕ್ಷೇತ್ರದ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸಬೇಕು” ಎಂದರು.
“ನೂತನ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆಯವರು ಈಗಾಗಲೇ ಪ್ರಕಟಿಸಿರುವಂತೆ ಕೆಕೆಆರ್‌ಡಿಬಿಗೆ ಮಂತ್ರಿಗಳನ್ನೇ ಸರದಿವಾರು ಅಧ್ಯಕ್ಷರನ್ನಾಗಿ ಮಾಡಬೇಕು. ಅದರಂತೆ 371(ಜೆ) ಕಲಂ ಸಂಪುಟ ಉಪಸಮಿತಿಗೆ ಕಲ್ಯಾಣ ಕರ್ನಾಟಕದ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು” ಎಂದು ಒತ್ತಾಯಿಸಿದರು.
ಬೀದರ್, ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕೃಷ್ಣಾ ಭಾಗ್ಯ ಜಲ ನಿಗಮದಡಿ ಸೇರಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ಕೃಷ್ಣಾ ಗೋದಾವರಿ ಕೊಳದ ಯೋಜನೆಗಳಿಗೆ ಹೈದರಾಬಾದ್‌ನಲ್ಲಿ ಒಂದೇ ಆಯುಕ್ತಾಲಯ ಕಚೇರಿ ಅಸ್ತಿತ್ವಕ್ಕೆ ತಂದಿದೆ. ಅದಕ್ಕೆ ಪೂರಕವಾಗಿ ಎರಡು ಜಿಲ್ಲೆಗಳ ನೀರಾವರಿ ಯೋಜನೆಗಳು (ಕಾರಂಜಾ, ಭೀಮಾ, ಮುಂತಾಗಿ ಎಲ್ಲ ಯೋಜನೆಗಳು) ಕೆಬಿಜೆಎನ್‌ಎಲ್‌ಗೆ ಸೇರಿಸಲು ಕಲ್ಯಾಣ ಕರ್ನಾಟಕ ಭಾಗದ ಸಚಿವರು ಸವಾಲಾಗಿ ಸ್ವೀಕರಿಸಲು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ಸಕ್ಕರೆ ನಾಡಿನ ಸಮಸ್ಯೆಗಳಿಗೆ ಕುರುಡಾದ ಚಲುವರಾಯಸ್ವಾಮಿ
“ಕಾರಂಜಾ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಫಲಾನುಭವಿಗಳಿಗೆ ಭೂಸ್ವಾಧೀನ ಇಲಾಖೆ ಕಚೇರಿ ಮತ್ತು ನೀರಾವರಿ ನಿಗಮ ಕಚೇರಿಯಲ್ಲಿ ಸಕಾಲದಲ್ಲಿ ಪರಿಹಾರ ಸಿಗದೇ ಕಚೇರಿಯ ಆಡಳಿತ ವ್ಯವಸ್ಥೆ ನಿರ್ಲಕ್ಷತನ ತೋರುತ್ತಿದೆ. ಅಷ್ಟೇ ಅಲ್ಲದೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸುಮಾರು ಶೇ.10ರಿಂದ 15ರಷ್ಟು ಪ್ರತಿಶತ ಹಣ ಸಂತ್ರಸ್ಥರಿಂದ ಕಮಿಷನ್ ಪಡೆದು ಉದಯ ಕಚೇರಿ ಅಧಿಕಾರಿಗಳೊಂದಿಗೆ ಶಾಮಿಲಾಗಿ ಅವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರು, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಬೀದರ್ ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮಕೈಗೊಳ್ಳಬೇಕು.ಇಲ್ಲವಾದಲ್ಲಿ ಉಭಯ ಕಚೇರಿಗಳ ಎದುರು ಸಮಿತಿಯಿಂದ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“2021-22ರಲ್ಲಿ ಅಂದಾಜು ಒಂದು ಕೋಟಿ ಹಣ ವೆಚ್ಚ ಮಾಡಿ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ಪ್ರದೇಶದ ಸರ್ವೆ ಕಾರ್ಯವನ್ನು ಡ್ರೋನ್ ಮುಖಾಂತರ ಕೈಗೊಳ್ಳಲಾಯಿತು. ಇದರ ವರದಿಯನ್ನು ಆಧರಿಸಿ, ಸಂತ್ರಸ್ಥರಿಗೆ ಯಾವುದೇ ಸ್ಪಂದನೆ ಸಿಗದಿರುವುದು ಖೇದಕರ ವಿಷಯವಾಗಿದೆ. ಈ ಬಗ್ಗೆ ನೂತನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದ್ದಾರೆ.