ಸರಿಯಾದ ನಿರ್ವಹಣೆ ಇಲ್ಲದ ಕಾರಣ ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸುತ್ತಿಲ್ಲ ಎಂದು ಸಿಪಿಐಎಂ ಸಂಘಟನೆಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕೋರ್ಟ್ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟಿಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬರುವ 36, 54, 46, ವಿತರಣಾ ಕಾಲುವೆಯಲ್ಲಿ ಡಿಜೈನ್ ಪ್ರಕಾರ ನೀರು ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ರೈತರು ಹೊಲದಲ್ಲಿ ಸಸಿಮಡಿಗಳನ್ನು ನೆಟ್ಟಿದ್ದು, ನೀರಿಲ್ಲದಂತಾಗಿದೆ. ಕೃಷಿ ಅಧಿಕಾರಿಗಳ ಪ್ರಕಾರ 30 ದಿನಗಳಲ್ಲಿ ಸಸಿ ನಾಟಿ ಮಾಡಿದರೆ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯವೆಂದು ಹೇಳಿದ್ದರು. ಆದರೆ ಸಮರ್ಪಕವಾಗಿ ನೀರಿಲ್ಲದೆ ಇದರಿಂದ ನಾಟಿ ಮಾಡಲು ಸಸಿಮಡಿ ಬರುವುದೂ ಕಷ್ಟಕರವಾಗಿದೆʼ ಎಂದು ಅಳಲು ತೋಡಿಕೊಂಡರು.
ʼತುಂಗಭದ್ರಾ ಡ್ಯಾಂನಲ್ಲಿ ನೀರಿನ ಕೊರತೆಯಿಲ್ಲ. ಅದರೂ ಡಿಸೆಂಬರ್ 15ರಿಂದ ಸರಿಯಾಗಿ 3,800 ಕ್ಯೂಸೆಕ್ ನೀರು ಹರಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಅಧಿಕಾರಿಗಳ ಸರಿಯಾದ ನಿರ್ವಹಣೆಯಿಲ್ಲದ ಕಾರಣ ರೈತರಿಗೆ ನೋವುಂಟಾಗಿದೆ. ಸಂಘಟನಾಕಾರರು, ರೈತರು ಪ್ರತಿದಿನ ನೀರಾವರಿ ಅಧಿಕಾರಗಳನ್ನು ದೂಷಿಸುವುದೇ ಆಗಿದೆ. ಜನಪ್ರತಿನಿಧಿಗಳೂ ಕೂಡಾ ರೈತರ ಬಗ್ಗೆ ಗಮನ ಹರಿಸುತ್ತಿಲ್ಲʼ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜ.12ರಂದು ಈ ದಿನ ನ್ಯೂಸ್ ಆ್ಯಪ್, ವಿಶೇಷ ಸಂಚಿಕೆ ಬಿಡುಗಡೆ
ʼತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ನಿಗದಿಪಡಿಸಿದ ನೀರು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ಕುರಿತ ಕೂಡಲೇ ಸ್ಪಂದಿಸಿ ತೊಂದರೆಗಳನ್ನು ಸರಿಪಡಿಸಿ ನಿಗದಿತ ಗೇಜ್ ನೀಡಬೇಕು. ಇಲ್ಲದೆ ಹೋದಲ್ಲಿ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸಂಘಟನೆ ಮೊಕದ್ದಮೆ ಹೂಡಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದರು.
