ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ನಿವಾಸಿ ಎ. ಷಣ್ಮುಖ ಎಸ್ ಆರ್ಮುಗಂ ಸಹೋದರರು ಮತ್ತು ಕುಟುಂಬ ವರ್ಗದವರು ಪಡೆದಿದ್ದ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ/ ನಾಯಕ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಾದ ಮೀನಾ ನಾಗರಾಜ್ ಅವರು ಎ. ಷಣ್ಮುಖ ಎಸ್ ಆರ್ಮುಗಂ ಪ್ರಕರಣವನ್ನು ಪರಿಶೀಲಿಸಿ, ಆರ್ಮುಗಂ ಕುಟುಂಬವು ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ /ನಾಯಕ ಜಾತಿಗೆ ಸೇರಿರುವುದಿಲ್ಲವೆಂದು ಸ್ಪಷ್ಟವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಎ. ಷಣ್ಮುಖ ಎಸ್ ಆರ್ಮುಗಂ ಕುಟುಂಬದವರು ತಮಿಳುನಾಡಿನಿಂದ ವಲಸೆ ಬಂದು, ಶಂಕರಘಟ್ಟದಲ್ಲಿ ವಾಸವಿದ್ದಾರೆ. ಸದರಿಯವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ ಹಳ್ಳಿಯಲ್ಲಿ ನೆಲೆಸಿ ಪರಿಶಿಷ್ಟ ವರ್ಗದ ವಾಲ್ಮೀಕಿ ನಾಯಕ /ನಾಯಕ ಜಾತಿ ಪ್ರಮಾಣ ಪತ್ರ ಪಡೆದು ನಿಜವಾಗಿ ಅರ್ಹರಿರುವ ಪರಿಶಿಷ್ಟ ವರ್ಗದ ಜನಾಂಗಕ್ಕೆ ಮೋಸಮಾಡಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ ಆರೋಪಿಸಿ ಕ್ರಮಕೈಗೊಳ್ಳಲು ಸಮಿತಿಗೆ ದೂರು ನೀಡಿದ್ದರು.
