ಸುರಪುರ ತಾಲೂಕಿನ ರಾಜ್ ಕಾಲುವೆ ಡಿ-6ನ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಹಾಗಾಗಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸುರಪುರ ತಾಲೂಕು ಸಮಿತಿ ವತಿಯಿಂದ ಕೃಭಾಜನಿನಿ ಭೀಮರಾಯನಗುಡ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಬಳಿಕ ಹಣಮಂತ್ರಾಯ ಚಂದಲ್ಲಾಪುರ್ ಮಾತನಾಡಿ, ʼಸುರಪುರ ತಾಲೂಕಿನ ಡಿ-6 ಕಾಲವೆಯ ಕೊನೆಯ ಭಾಗ 36 ಕಿ ಮೀ ಇದ್ದು, 14.8000 ಹೆಕ್ಟರ್ ರೈತರ ಜಮೀನು ಇದೆ. ಕೊನೆಯ ಭಾಗದ ರೈತರ ಜಮೀನುಗಳಲ್ಲಿ ಕವಡಿಮಟ್ಟಿ, ಶೆಳ್ಳಗಿ ಮತ್ತು ಮುಷ್ಕಳ್ಳಿ, ಕುಂಬಾರಪೇಟ, ವೆಂಕಟಾಪೂರ, ರುಕ್ಷಾಪೂರ ಗುಡಿಹಾಳ, ಕುಪಗಲ್, ಲಿಂಗದಳ್ಳಿ, ಚಂದ್ಲಾಪೂರ, ಬೇವಿನಾಳ, ಕರ್ನಾಳ, ಸೂಗೂರ, ಹೆಮ್ಮಡಗಿ ಮೂಲಕ ನೀರಾವರಿ ಇಲಾಖೆಯಿಂದ ಕಾಲುವೆ ಹಾದು ಹೋಗಿರುತ್ತದೆ. ಈ ಭಾಗದ ರೈತರ ಜಮೀನಿಗೆ ಬರುವ ಕಾಲುವೆ ಯಾವುದೇ ರೀತಿ ಸಿಲ್ಟ್ ಮತ್ತು ಜಂಗಲ್ ಕಟ್ಟಿಂಗ್ ಮಾಡಿರುವುದಿಲ್ಲ. ಕೇವಲ ಟೆಂಡರ್ ಆಗಿರುತ್ತದೆ ಎಂದು ಹೇಳುತ್ತಿದ್ದಾರೆ ಒಂದು ಕೆಲಸ ಕೂಡಾ ಆಗಿಲ್ಲ. ಟೆಂಡರ್ ಕರೆದಿದ್ದರೆ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಬೋನ್ಹಾಳ ಏತ ನೀರಾವರಿ ಮೇಲ್ವಿಚಾರಣೆಯನ್ನು ಈ ಕೂಡಲೇ ಹಸನಾಪೂರ ಸಬ್ ಡಿವಿಜನ್‌ನ ಅಧಿಕಾರಿಗಳಿಗೆ ವಹಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ| ರೈತ ಸಂಘಟನೆಯ ಪದಾಧಿಕಾರಿಗಳ ನೇಮಕ
ಈ ಸಂದರ್ಭದಲ್ಲಿ ವೆಂಕಟೇಶಗೌಡ ಕುಪಗಲ್, ವೆಂಕೋಬ ದೊರೆ ಕುಪಗಲ್, ರಾಘು ಕುಪಗಲ್, ಶೀನಪ್ಪಗೌಡ ಪೊಲೀಸ್ ಪಾಟೀಲ, ದೇವಪ್ಪ ಪೂಜಾರಿ, ದೇವಿಂದ್ರಪ್ಪ ವಂಟೂರು, ಪರಮಣ್ಣ ಬಾಣತಿಹಾಳ, ಭೀಮಣ್ಣ ಕುಪಗಲ್, ತಿರುಪತಿ ಕುಪಗಲ್, ನಿಂಗಪ್ಪ
ಬಸವರಾಜ ನಗರಗುಂಡ, ಮರೆಪ್ಪ ನಗರಗುಂಡ ಇನ್ನಿತರರು ಉಪಸ್ಥಿತರಿದ್ದರು.