2025ರ ಜನವರಿ 11’ಎರಡನೇ ಶನಿವಾರದಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ತೀನಂಶ್ರೀ ಭವನದಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕುವೆಂಪು ಜನ್ಮದಿನವಾದ ಕಳೆದ ಡಿಸೆಂಬರ್ 29’ರ ಭಾನುವಾರದಂದು(2024) ಜರುಗಬೇಕಿದ್ದ ಕಾರ್ಯಕ್ರಮವು, ಅಪ್ರತಿಮ ರಾಷ್ಟ್ರನಾಯಕ ಡಾ ಮನಮೋಹನ್ ಸಿಂಗ್’ರವರ ನಿಧನದ ಶೋಕಾಚರಣೆಯ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಈಗಲೂ ಅಂದಿನ ಅದೇ ಪರಿಕಲ್ಪನೆಯಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುವೆಂಪು ಮುಂಗಾಣ್ಕೆಗಳ ಸಮಾಜೋ-ರಾಜಕೀಯ ಭಿತ್ತಿಗಳನ್ನು ಮತ್ತೆಮತ್ತೆ ಶೋಧಿಸಿ ಸೋಸಿಕೊಂಡು ನೋಡುವ ಗುರುತರ ಹೊಣೆಗಾರಿಕೆಯ ಜೊತೆಗೆ ಕುವೆಂಪು ಮುಂಗಾಣ್ಕೆಗಳ ಗೌರವಾರ್ಥ, ಎಲ್ಲರಂತೆ ತಮಗೂ ದಕ್ಕಬೇಕಿರುವ ಸಮಾನ-ನಾಗರಿಕ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿ ಯಶ ಕಾಣುತ್ತಿರುವ ಅಂಚಿನ ಸಮುದಾಯಗಳ ಅಲೆಮಾರಿ ಸಾಧಕರಿಗೆ ಕಂಬಳಿ-ಕಾಣ್ಕೆ’ಯ ಗೌರವವನ್ನೀಯುವ ಸಾರ್ಥಕ ಕಾರ್ಯಕ್ರಮವೂ ಜರುಗಲಿದೆ.
ನಾಟಕದ ಹಿನ್ನೆಲೆ:
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದಂವ. ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ. ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.

ನಾಟಕಕಾರ ಬರ್ಟೋಲ್ಟ್ ಬ್ರೆಖ್ಟ್, ತನ್ನ ಕ್ರಾಂತಿಕಾರಿ ಮತ್ತು ಜನೋಪಕಾರಿ ರಾಜಕೀಯ ಸ್ಪಷ್ಟತೆಯ ನಿಲುವುಗಳ ಕಾರಣದಿಂದಾಗಿ ಅಡಾಲ್ಫ್ ಹಿಟ್ಲರನ ನಾಜ಼ಿ ನಿರಂಕುಶಾಧಿಕಾರದ ನಿಶಾನೆಗೆ ಗುರಿಯಾಗಿದ್ದ ಬರ್ಟೋಲ್ಟ್ ಬ್ರೆಖ್ಟ್, ಅನಿವಾರ್ಯವಾಗಿ ತನ್ನ ದೇಶ ಜರ್ಮನಿಯನ್ನು ತೊರೆದು ಹೊರಡಬೇಕಾಯಿತು. ಜಗತ್ತಿನ ಮೇರುಚಿಂತಕ ಮಾರ್ಕ್ಸ್’ ಚಿಂತನೆಗಳಿಂದ ಬಹುತೇಕ ಪ್ರಭಾವಿತನಾಗಿದ್ದ ಬ್ರೆಖ್ಟ್, ಅದುವರೆಗೂ ಜಾರಿಯಲ್ಲಿದ್ದ ನಾಟಕ-ಪರಂಪರೆಯನ್ನು ಮುರಿದು, ಅದನ್ನು ಸಾಮಾಜಿಕ ಬದಲಾವಣೆಗೆ ಅಗತ್ಯಬೇಕಾದ ಚಲನಶೀಲ ಆದ್ಯತೆ ಎಂಬಂತೆ ಪ್ರಯೋಗಿಸಲಾರಂಭಿಸಿದ್ದ. ಇದು ನಾಜ಼ಿ ಮತಾಂಧ ನಿರಂಕುಶಾಧಿಕಾರಕ್ಕೆ ಬಲುದೊಡ್ಡ ಸವಾಲಾಗಿ ಪರಿಣಮಿಸಿತ್ತು. ತತ್ಪರಿಣಾಮ ಬರ್ಟೋಲ್ಟ್ ಬ್ರೆಖ್ಟ್ ದೇಶ ತೊರೆದು ಹೊರಡಬೇಕಾಯಿತು. ದುರಂತ, ಅವಸಾನದತ್ತ ಇಳೇಬಿದ್ದಿದ್ದ ದೇಶದ ಉಳಿವಿಗಾಗಿ ಅವಿರತ ದುಡಿಯುತ್ತಿದ್ದ ದಿಟದ ದೇಶಪ್ರೇಮಿಯನ್ನೇ ದೇಶಾಂತರ ಮಾಡಿಸಲಾಯಿತು. ಪ್ರಸ್ತುತ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ, ಇಂತಹ ಬಹಳಷ್ಟನ್ನು ವಿಶಿಷ್ಟ ಶೈಲಿಯ ವಿಡಂಬನಾತ್ಮಕ ಪ್ರಯೋಗಶೀಲತೆಯಲ್ಲಿ ಪ್ರಸ್ತುತಪಡಿಸಲಿದೆ.
ಶನಿವಾರ ಸಂಜೆ 5.45’ಕ್ಕೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಎಸ್ ಪಿ ಮುದ್ದಹನುಮೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅದೇರೀತಿ, ತಹಸೀಲ್ದಾರ್ ಕೆ ಪುರಂದರ್, ಚಿಂತಕ ಮತ್ತು ಹಿರಿಯ ರಂಗ-ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಚಿಂತಕ ಮತ್ತು ಅಲೆಮಾರಿಗಳ ಸಂಗಾತಿ ಡಾ ರಘುಪತಿ, ಜನಪರ ಹೋರಾಟಗಾರ ಮತ್ತು ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್, ಯುವ ಚಿಂತಕ ನಿಕೇತ್ ರಾಜ್ ಮೌರ್ಯ, ಪ್ರಗತಿಪರ ಸಾಮಾಜಿಕ ಡಾ ರಂಗನಾಥ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಭೀಮಬಂಧು ಪ್ರವೀಣ್, ಕೆಪಿಸಿಸಿ ಮುಖಂಡರಾದ ಮುರಳೀಧರ ವಿ ಹಾಲಪ್ಪ, ತುಮಕೂರು ಜಿಲ್ಲಾ ಕೆಡಿಪಿ ಸದಸ್ಯ ಸಾಸಲು ಮಂಜುನಾಥ ಸ್ವಾಮಿ ಮುಂತಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ಸಂಚಲನ ಕುರಿತು:
ಕಳೆದ ಎರಡು ದಶಕಗಳಿಂದಲೂ ಚಿಕ್ಕನಾಯಕನ ಸೀಮೆಯಲ್ಲಿ ವೃತ್ತಿಪರ ಶಿಸ್ತಿನ ರಂಗ-ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸುತ್ತಿರುವ ಸಂಚಲನ- ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು, ಮಕ್ಕಳ ರಂಗ ತರಬೇತಿ ಶಿಬಿರಗಳು, ಯುವಜನ ರಂಗ ಕಾರ್ಯಾಗಾರಗಳು, ವಿಶೇಷ ಮತ್ತು ವಿಶಿಷ್ಟ ಸಾಂಸ್ಕೃತಿಕ ಹಾಗೂ ಪ್ರದರ್ಶಕ ಹಿನ್ನೆಲೆಯ ರಂಗ-ಪ್ರಯೋಗಗಳ ಆಯೋಜನೆ, ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ವೃತ್ತಿಪರ ಶಿಸ್ತಿನ ನಾಟಕ-ಪ್ರದರ್ಶನಗಳ ಆಯೋಜನೆ, ರಾಜ್ಯದ ಹಲವು ರೆಪರ್ಟರಿ ರಂಗ-ಪ್ರಯೋಗಗಳ ಆಯೋಜನೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರ ಸಂಕಿರಣ ಹಾಗೂ ಅಧ್ಯಯನ ಶಿಬಿರಗಳ ಆಯೋಜನೆ ತರಹದ ಜನಪರ ಹಾಗೂ ಲೋಕೋಪಯೋಗಿ ಕ್ರಿಯಾತ್ಮಕತೆಯಲ್ಲಿ ತೊಡಗಿಕೊಂಡಿದೆ. ನೀನಾಸಮ್, ಪ್ರೊಥಿಯೂ, ರಂಗಧರ್ಮ, ಜನಮನದಾಟ, ಆಟ-ಮಾಟ, ಥಿಯೇಟರ್ ಸಮುರಾಯ್, ನಿರ್ದಿಗಂತ ತರಹದ ಇನ್ನೂ ಹಲವು ರಂಗ ಸಂಸ್ಥೆ ಮತ್ತು ರೆಪರ್ಟರಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಸಂಚಲನ ನಿಪುಣ ರಂಗಾಭ್ಯಾಸಿಗಳನ್ನೂ ತನ್ನಲ್ಲಿ ಹೊಂದಿದೆ. ಪ್ರಸ್ತುತ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ-ಪ್ರದರ್ಶನವನ್ನೂ ಸಂಚಲನ ಸಂಸ್ಥೆ ಆಯೋಜಿಸುತ್ತಿದೆ.
ನಿರ್ದಿಗಂತ ಪರಿಚಯ:
ನಿರ್ದಿಗಂತ ಸಂಘಟನೆಯು, ರಾಷ್ಟ್ರಕವಿ ಕುವೆಂಪುರವರ ಕಾವ್ಯ-ಸಾಲುಗಳಲ್ಲಿ ರೂಪಕವಾಗಿ ಪರಿಕಲ್ಪಿಸಲಾಗಿರುವ ‘ನಿರ್ದಿಗಂತ’ ಎಂಬುದರ ಅನನ್ಯ ಅನಂತತೆಯನ್ನು, ತನ್ನ ಸೃಜನಾತ್ಮಕ ಕಾರ್ಯವಿಧಾನವನ್ನಾಗಿ ಪರಿಕಲ್ಪಿಸಿಕೊಂಡಿರುವ ಸಮಾನಮನಸ್ಕರ ಒಗ್ಗೂಡು. ಸಮಕಾಲೀನ ಸಾಂಸ್ಕೃತಿಕ ಜಗತ್ತ್-ವಿಸ್ತಾರದಲ್ಲಿ, ಸೃಜನಾತ್ಮಕ ಸಂವಾದಿಯಾಗಿ ತೊಡಗಿಕೊಳ್ಳುವ ಹಂಬಲದಿಂದ, ಬಹುಭಾಷಾ ಸಿನೆಮಾ ನಟ ಮತ್ತು ಜನಪರ ಕಾಳಜಿಯ ಪ್ರಗತಿಪರ ಕಾರ್ಯಕರ್ತ ಪ್ರಕಾಶ್ ರಾಜ್ ಹಾಗೂ ಸಮಾನಮನಸ್ಕರು ರೂಪಿಸಿಕೊಂಡಿರುವ ‘ನಿರ್ದಿಗಂತ’ ಇದು.
ನಿರ್ದಿಗಂತ ಸಂಘಟನೆಯು, ರಂಗ-ವಿಕಾಸ ಎಂಬ ಮಹತ್ವದ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ನಿರತವಾಗಿದೆ. ಅದರ ಅಂಗವಾಗಿಯೇ, ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಖ್ಟ್ ರಚಿಸಿದ್ದ ‘ದ ರೆಜ಼ಿಸ್ಟಬಲ್ ರೈಜ಼್ ಆಫ್ ಆರ್ಥುರೋ ಊಯಿ’ ಎಂಬ ನಾಟಕವನ್ನು ‘ತಿಂಡಿಗೆ ಬಂದ ತುಂಡೇರಾಯ’ನನ್ನಾಗಿ ಕನ್ನಡದಲ್ಲಿ ಪ್ರಯೋಗಿಸಲಾಗುತ್ತಿದೆ. ತಾಲೀಮಿನ ಸಂದರ್ಭದಲ್ಲಿ ನಿರ್ದೇಶಕ ಮತ್ತು ನಟ-ನಟಿಯರೇ ಸೇರಿ ಸೃಜಿಸಿರುವ ಕನ್ನಡದ ರಂಗಪಠ್ಯವಿದು. ಉತ್ತರ ಕರ್ನಾಟಕ ಜವಾರಿ-ದೇಶಾವರಿಯ ರಂಗುಗಳು ರಂಗ-ಪ್ರಯೋಗಕ್ಕೆ ಮೆರುಗು ತಂದಿವೆ.

ನಿರ್ದೇಶಕ ಶಕೀಲ್ ಅಹ್ಮದ್,
ಭಿನ್ನ ಭಿನ್ನ ಸಾಂಸ್ಕೃತಿಕ ಸಂಕರಗಳ ಕೂಡು-ಕಳೆಯ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನೃತ್ಯ ಮಾದರಿಗಳ ಕೌಶಲಗಳನ್ನು ಅಭ್ಯಸಿಸುವ ‘ಸ್ಪಿನ್ನಿಂಗ್ ಟ್ರೀ ಥಿಯೇಟರ್’ ರಂಗಸಂಸ್ಥೆಯ ಸಂಸ್ಥಾಪಕ. ಭಾರತೀಯ ರಂಗಭೂಮಿಯ ಒಬ್ಬ ಉತ್ತಮ ನಟ ಮತ್ತು ಅಪರೂಪದ ರಂಗ-ನಿರ್ದೇಶಕ. ನೀನಾಸಮ್ ರಂಗ ಶಾಲೆಯಲ್ಲಿ ರಂಗ ತರಬೇತಿಯನ್ನು ಪಡೆದ ನಂತರ, ಸಿಂಗಾಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ITI) ನಲ್ಲಿ ಏಷಿಯಾ ಖಂಡದಲ್ಲಿನ ಬಹುಮುಖೀ ರಂಗ-ಕೌಶಲಗಳನ್ನು ಮೂರು ವರ್ಷಗಳ ಕಠಿಣ ತರಬೇತಿಯಿಂದ ಕಲಿತಿದ್ದಾರೆ. ಇತ್ತೀಚೆಗಷ್ಟೇ ಯುನೈಟೆಡ್ ಕಿಂಗ್‌ಡಮ್’ನ ಕೇಂಟ್ ವಿಶ್ವವಿದ್ಯಾಲಯದಿಂದ ಥಿಯೇಟರ್ ಮಾಸ್ಟರ್ಸ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಇವರು, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ, ಅನೇಕ ಬೆಂಗಳೂರು, ಪ್ಯಾರಿಸ್ಸಿನ ಕೇಜ್ ಅಂಡ್ ಐಪ್ಯಾಕ್, ಕೆನೊಪಿ, ಪಾಸ್ ಡೆ ಡ್ಯೂಸ್ ತರಹದ ಆಧುನಿಕೋತ್ತರ ರಂಗ-ಮೀಮಾಂಸೆಗಳ ಶೋಧದಲ್ಲಿ ತೊಡಗಿರುವ ರಂಗ-ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ನಿರ್ದಿಗಂತ ಸಂಸ್ಥೆಯೊಂದಿಗೆ ರಂಗ-ಬೆಸುಗೆ ಹೊಂದಿದ್ದಾರೆ.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ
