ವಿವಾಹಿತ ವ್ಯಕ್ತಿಯೊಬ್ಬ ತನ್ನ ಲಿವ್‌ಇನ್ ಸಂಗಾತಿಯನ್ನು ಕೊಂದು ಆಕೆಯ ಮೃತದೇಹವನ್ನು ಎಂಟು ತಿಂಗಳುಗಳ ಕಾಲ ಫ್ರಿಡ್ಜ್‌ನಲ್ಲಿಟ್ಟ ಘಟನೆ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆಭರಣಗಳನ್ನು ಧರಿಸಿರುವ, ಕೈಗಳನ್ನು ಕುತ್ತಿಗೆಗೆ ಕಟ್ಟಲಾಗಿರುವ ಸೀರೆಯುಟ್ಟಿರುವ ಮಹಿಳೆಯ ಕೊಳೆತ ಶವ ಶುಕ್ರವಾರ ಆರೋಪಿ ಸಂಜಯ್ ಪಾಟಿದಾರ್ ಬಾಡಿಗೆಗೆ ಇದ್ದ ಮನೆಯ ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಈಕೆಯ ಕೊಲೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಮಿರ್ಜಾಪುರ’ ವೆಬ್ ಸೀರೀಸ್ ನೋಡಿ ಗೆಳತಿಯ ಕತ್ತು ಸೀಳಿ ಕೊಂದ ವಿದ್ಯಾರ್ಥಿ!
ಉಜ್ಜಯಿನಿ ನಿವಾಸಿ ಸಂಜಯ್ ಪಾಟಿದಾರ್ ಕಳೆದ ಐದು ವರ್ಷಗಳಿಂದ ಪಿಂಕಿ ಜೊತೆ ಲಿವ್ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆಕೆ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದಾಗ ಪಾಟಿದಾರ್ ತನ್ನ ಸ್ನೇಹಿತನ ಸಹಾಯದಿಂದ ಆಕೆಯ ಕೊಲೆಯನ್ನು ಮಾಡಿದ್ದಾನೆ ಎಂದು ವರದಿಯಾಗಿದೆ.
“ಮಹಿಳೆಗೆ 30 ವರ್ಷವಾಗಿತ್ತು. 2024ರ ಜೂನ್‌ನಲ್ಲಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ್ದರಿಂದ ನೆರೆಹೊರೆಯವರು ಮನೆಯ ಮಾಲೀಕರಿಗೆ ಕರೆ ಮಾಡಿ ಮನೆಯ ಬಾಗಿಲು ತೆರೆದಿದ್ದರು. ಮನೆಯ ಫ್ರಿಡ್ಜ್‌ನಲ್ಲಿ ಶವ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶದಲ್ಲಿ ಕಾಮುಕರ ಅಟ್ಟಹಾಸ; ಪತಿಯನ್ನು ಮರಕ್ಕೆ ಕಟ್ಟಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ
ಈ ಮನೆ ಇಂದೋರ್‌ನಲ್ಲಿ ವಾಸಿಸುವ ಧೀರೇಂದ್ರ ಶ್ರೀವಾಸ್ತವ ಅವರದ್ದಾಗಿದೆ. ಶ್ರೀವಾಸ್ತವ 2023ರ ಜೂನ್‌ನಲ್ಲಿ ಈ ಮನೆಯನ್ನು ಪಾಟಿದಾರ್‌ಗೆ ಬಾಡಿಗೆಗೆ ನೀಡಿದ್ದರು. ಇದಾದ ಒಂದು ವರ್ಷದ ಬಳಿಕ ಪಾಟಿದಾರ್ ಮನೆ ಖಾಲಿ ಮಾಡಿದ್ದರು. ಆದರೆ ತಮ್ಮ ವಸ್ತುಗಳನ್ನು ಕೆಲವು ಕೋಣೆಗಳಲ್ಲಿ ಇಟ್ಟುಕೊಂಡಿದ್ದರು. ತಾನು ವಸ್ತುಗಳನ್ನು ಶೀಘ್ರವೇ ಕೊಂಡೊಯ್ಯುವುದಾಗಿ ಹೇಳಿದ್ದರು. ಪಾಟಿದಾರ್ ಆಗಾಗ ಮನೆಗೆ ಬರುತ್ತಿದ್ದರು. ಮನೆಯ ಇನ್ನೊಂದು ಭಾಗದಲ್ಲಿ ಹೊಸ ಬಾಡಿಗೆದಾರರು ವಾಸವಿದ್ದರು” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಇತ್ತೀಚೆಗೆ ಮನೆ ಮಾಲೀಕರು ಪಾಟಿದಾರ್‌ನ ವಸ್ತುಗಳಿದ್ದ ಕೋಣೆಗಳ ವಿದ್ಯುತ್ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಫ್ರಿಡ್ಜ್‌ನಲ್ಲಿದ್ದ ಮೃತದೇಹ ಕೊಳೆಯಲು ಆರಂಭಿಸಿತ್ತು. ಇದರಿಂದಾಗಿ ನೆರೆಮನೆಯವರಿಗೆ ಕೆಟ್ಟ ವಾಸನೆ ಬರಲು ಶುರುವಾಯಿತು” ಎಂದು ಪೊಲೀಸ್ ಅಧಿಕಾರಿ ಅಮಿತ್ ಸೋಲಂಕಿ ಹೇಳಿದ್ದಾರೆ.
