ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರದ ತಾರತಮ್ಯ ಖಂಡಿಸಿ, “ಕೇಂದ್ರದ ಬಳಿ ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇ ಬೇಕು. ನಮ್ಮ ರಾಜ್ಯದ ಹಿತವನ್ನು ಕಾಪಾಡಲೇಬೇಕು” ಎಂದಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿ, “ಬಿಜೆಪಿಯ ಇಷ್ಟೊಂದು ಜನ ಸಂಸದರು ಏಕೆ ಮೌನವಾಗಿ ಇದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ನೀರಾವರಿ ಮತ್ತು ನಗರಾಭಿವೃದ್ಧಿಗೆ ನೀಡುವ ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಪಾಲಿನ ತೆರಿಗೆ ಅನ್ಯಾಯವನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆಗೆ ಈ ಅಸಮಾನ ಹಂಚಿಕೆಗೆ ನಾವು ಉತ್ತರ ಕೊಡುತ್ತೇವೆ” ಎಂದು ಹೇಳಿದರು.
ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,73,030 ಕೋಟಿ ಬಿಡುಗಡೆಗೊಳಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.
2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆಗೊಳಿಸಿತ್ತು. ರಾಜ್ಯಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.