ಮುಂಬರುವ ಚುನಾವಣೆಯಲ್ಲಿ ಪಕ್ಷವು ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಶನಿವಾರ ತಿಳಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನೆ (ಯುಬಿಟಿ) ಮೈತ್ರಿ ಮಾಡಿಕೊಂಡಿತ್ತು. ಲೋಕಸಭೆಯಲ್ಲಿ ಇಂಡಿಯಾ ಒಕ್ಕೂಟ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಮಾಜಿ ಪ್ರಧಾನಿ ವಾಜಪೇಯಿ ಎರಡನೇ ನೆಹರೂ: ಸಂಸದ ಸಂಜಯ್ ರಾವತ್
ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಜಯ್ ರಾವತ್, “ಇಂಡಿಯಾ ಒಕ್ಕೂಟ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಗಳು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗಾಗಿ ಮಾಡಲಾದ ಮೈತ್ರಿಗಳಾಗಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಮೈತ್ರಿಯಲ್ಲಿ, ಪ್ರತ್ಯೇಕ ಪಕ್ಷಗಳ ಕಾರ್ಯಕರ್ತರಿಗೆ ಅವಕಾಶ ಸಿಗಲಾರದು. ಇದು ಸಾಂಸ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಾವು ಮುಂಬೈ, ಥಾಣೆ, ನಾಗ್ಪುರ ಮತ್ತು ಇತರ ಪುರಸಭೆಗಳು, ಜಿಲ್ಲಾ ಪರಿಷತ್‌ಗಳು ಮತ್ತು ಪಂಚಾಯತ್ ಚುನಾವಣೆಗಳಿಗೆ ಪ್ರತ್ಯೇಕವಾಗಿ ಸ್ವಬಲದಿಂದ ಸ್ಪರ್ಧಿಸುತ್ತೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಕಾಂಗ್ರೆಸ್ ಬದಲು ಎಎಪಿ ಬೆಂಬಲಕ್ಕೆ ನಿಂತ ‘ಇಂಡಿಯಾ’ ಮಿತ್ರಪಕ್ಷಗಳು
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಎಂವಿಎ ಮೈತ್ರಿ ಸೋಲಿಗೆ ಶಿವಸೇನೆ ಕಾರಣ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ವಿರುದ್ಧ ರಾವತ್ ವಾಗ್ದಾಳಿ ನಡೆಸಿದರು. “ಒಮ್ಮತ ಮತ್ತು ರಾಜಿಯಲ್ಲಿ ನಂಬಿಕೆಯಿಲ್ಲದವರಿಗೆ ಮೈತ್ರಿಕೂಟದಲ್ಲಿರಲು ಹಕ್ಕಿಲ್ಲ” ಎಂದು ಹೇಳಿದರು.
“ಲೋಕಸಭೆ ಚುನಾವಣೆಯ ಬಳಿಕ ಇಂಡಿಯಾ ಒಕ್ಕೂಟ ಒಂದೇ ಒಂದು ಸಭೆಯನ್ನು ನಡೆಸಿಲ್ಲ. ನಾವು ಇಂಡಿಯಾ ಒಕ್ಕೂಟಕ್ಕೆ ಸಂಚಾಲಕರನ್ನು ನೇಮಿಸಲು ಸಾಧ್ಯವಾಗಲಿಲ್ಲ. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಸಭೆ ಕರೆಯುವುದು ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ” ಎಂದು ಶಿವಸೇನೆ ತಿಳಿಸಿದೆ.
ಇನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳ ಎಎಪಿ, ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಎಸ್‌ಪಿ, ಟಿಎಂಸಿ ಸೇರಿದಂತೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಎಎಪಿ ಬೆಂಬಲಕ್ಕೆ ನಿಂತಿದೆ. ಇದಾದ ಬೆನ್ನಲ್ಲೇ ಹಲವು ನಾಯಕರು ಇಂಡಿಯಾ ಒಕ್ಕೂಟದ ಸಭೆ ನಡೆಸುವುದು ಅಗತ್ಯ ಎಂದಿದ್ದಾರೆ.
