ಶುಕ್ರವಾರ, ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ 13 ವರ್ಷದ ಪುಟ್ಟ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸಾವಿನ ಸುದ್ದಿ ಹೊರಬಂದ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಶಕುಂತಲಾ ಕುರಿತಾದ ಟ್ರೋಲ್‌ಗಳು, ಟೀಕೆಗಳು ವ್ಯಕ್ತವಾಗುತ್ತಿವೆ. ಆಕೆಯ ಹಳೆಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಹಲವರು ನಂಜು ಕಾರುತ್ತಿದ್ದಾರೆ. ಬಿಜೆಪಿ ಸಾವನ್ನೂ ಸಂಭ್ರಮಿಸುತ್ತದೆ ಎಂದು ಆರೋಪಿಸುತ್ತಿದ್ದವರೇ, ಶಕುಂತಲಾ ಮಗನ ಸಾವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ, ‘ಸಾವು ಯಾರದ್ದಾದರೂ ಸಾವೇ’, ಯಾರದ್ದೇ ಸಾವು ಟ್ರೋಲ್‌ಗೆ ಬಳಕೆಯಾಗಬಾರದೆಂಬ ನಿಲುವಿನೊಂದಿಗೆ ಗಮನ ಸೆಳೆದ ಮೂರು ಪೋಸ್ಟ್‌ಗಳು ಇಲ್ಲಿವೆ…
ಸಾಹಿತ್ಯ ಕಲೆ ಎಂದರೆ ಮನುಷ್ಯತ್ವ ಅಂತ ಅಂದುಕೊಳ್ಳಬೇಕಾಗಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಒಬ್ಬ ವೀರನ ರಣಶೌರ್ಯವನ್ನು ಪ್ರಶಂಸಿಸಬೇಕಾದರೆ, ವೈರಿವನಿತೆಯರ ಕೆನ್ನೆಯ ಮೇಲೆ ಸದಾ ಕಂಬನಿ ಹರಿಸಿದವನು ಎಂಬಂತಹ ವರ್ಣನೆ ಸಿಗುತ್ತವೆ. ಇಂತಹ ಅಮಾನುಷ ರೂಪಕಗಳನ್ನು ಹುಟ್ಟಿಸಿದ್ದು ಹಿಂಸಾತ್ಮಕ ಊಳಿಗವಾದಿ ಯುದ್ಧಸಂಸ್ಕೃತಿ. ಇಲ್ಲಿ ಕವಿಯೂ ಆ ಸಂಸ್ಕೃತಿಯ ಬಲಿಪಶುವಾಗಿದ್ದರಿಂದಲೇ ಪಾಪಪ್ರಜ್ಞೆಯಿಲ್ಲದೆ ಇಂತಹ ರೂಪಕ ಸೃಷ್ಟಿಸಿದನು.
ನಮ್ಮ ಕಾಲದಲ್ಲೂ, ತಾವು ದ್ವೇಷಿಸುವ ಧರ್ಮಕ್ಕೆ ಜನಾಂಗಕ್ಕೆ ಭಾಷೆಗೆ ದೇಶಕ್ಕೆ ಸೇರಿದವರು ಪ್ರಾಕೃತಿಕ ವಿಕೋಪಗಳಿಂದ ಮರಣಿಸಿದಾಗ, ದುಷ್ಟ ಪ್ರಭುತ್ವಗಳಿಂದ ಜನತೆಯ ಹೋರಾಟಗಾರರು ದಮನಕ್ಕೆ ಒಳಗಾದಾಗ, ಬಲಿಷ್ಠರು ಹೂಡಿದ ಅನ್ಯಾಯದ ಯುದ್ಧಗಳಲ್ಲಿ ಮಕ್ಕಳು ಮಹಿಳೆಯರು ನಾಶವಾಗುವಾಗ, ಸಂಭ್ರಮಿಸುವ ವ್ಯಕ್ತಿಗಳನ್ನು ನೋಡುತ್ತಿದ್ದೇವೆ. ಹಾಗೆ ನೋಡುವಾಗ, ಅವರ ಮನಸ್ಸನ್ನು ಕಲುಷಿತಗೊಳಿಸಿದ, ಅವರ ಆಲೋಚನೆಯನ್ನು ಅಮಾನುಷಗೊಳಿಸಿದ, ಅವರ ವ್ಯಕ್ತಿತ್ವವನ್ನು ಕ್ಷುದ್ರಗೊಳಿಸಿದ ಸಿದ್ಧಾಂತ ರಾಜಕಾರಣ ಸುದ್ದಿಮಾಧ್ಯಮ ಹಾಗೂ ಪ್ರಚೋದಕ ಭಾಷಣಗಳು ಯಾವುವು ಎಂಬುದನ್ನು ಸಾಮಾನ್ಯವಾಗಿ ಮರೆಯುತ್ತೇವೆ. ಆಯುಧ ಕಾಣುತ್ತದೆ. ಆಯುಧ ರೂಪಿಸಿದ ತೆರೆಮರೆಯ ಮೆದುಳುಗಳಲ್ಲ. ಗೊಂಬೆ ಗೋಚರಿಸುತ್ತದೆ. ಗೊಂಬೆಗಳಿಗೆ ಬಿಗಿದ ಸೂತ್ರಗಳು ಅಗೋಚರ.
ಇದನ್ನು ಓದಿದ್ದೀರಾ?: ಗೌರಿ ಲಂಕೇಶ್ ಹತ್ಯೆ ಪ್ರಕರಣ | ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು
ಕಂಡವರ ಮೇಲೆ ವಿಷ ಉಗುಳುವವರು, ಮೊದಲು ಆ ವಿಷವನ್ನು ಸೇವಿಸಬೇಕು. ಅವರಿಗೆ ತಮ್ಮ ವಿಷದಿಂದ ಸಾಯುವವರಷ್ಟೆ ಕಾಣುತ್ತಾರೆ. ಅದಕ್ಕೂ ಮೊದಲು ತಾವೂ ಸತ್ತಿರುವುದು ಗೊತ್ತಾಗುವುದಿಲ್ಲ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’. ನಂಜು ಕಾರುವುದನ್ನು ಹೇಳುವ ಯಾವುದೇ ಧರ್ಮ ರಾಜಕಾರಣ ಸಿದ್ಧಾಂತಗಳಿರಲಿ, ಅವುಗಳ ಮಾಯಾಜಾಲಕ್ಕೆ ಎಚ್ಚರವಿಲ್ಲದ ಗಳಿಗೆಯಲ್ಲಿ ಸಿಲುಕಿರುವ ಜನರನ್ನು, ಸೈದ್ಧಾಂತಿಕ ಸೆರೆಮನೆಗಳಿಂದ ಹೊರತರುವುದು, ಅವರನ್ನು ಖಂಡಿಸುವುದಕ್ಕಿಂತ ಮುಖ್ಯವಾದುದು. ಬುದ್ಧಗುರು ತಾನು ಮುಖಾಮುಖಿಯಾಗುವ ಸ್ವಭಾವತಃ ದುಷ್ಟರಲ್ಲದ, ಸಂದರ್ಭವಶಾತ್ ದುಷ್ಟರಾಗಿರುವ ಜನರನ್ನು ಬದಲಿಸುವ ಪರಿ ಸೋಜಿಗ ಹುಟ್ಟಿಸುತ್ತದೆ.
– ರಹಮತ್ ತರೀಕೆರೆ
=================
ಪಾರಿವಾಳದ್ದೋ ಎಂಥದ್ದೋ ಬಾಜಿ ಕಟ್ಟುವ ವಿಚಾರದಲ್ಲಿ ಗೆಳೆಯರೊಂದಿಗೆ ಜಗಳವಾಡಿ ಹದಿಮೂರು ವರ್ಷದ ಹುಡುಗ ಆತ್ಮ@ತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಡೆ#ತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡ ಹುಡುಗನ ಸುದ್ದಿ ಓದಿ ಭಯದಿಂದ ಮೈ ಜುಮ್ಮೆಂದಿತು. ತಾಯಿ ಎರಡು ತಿಂಗಳ ಹಿಂದೆ ಇವೆಲ್ಲ ಬಾಜಿ ಗೀಜಿ ಕಟ್ಟಬೇಡ ಅವರ ಜತೆ ಸೇರಬೇಡ ಅಂದು ನನ್ನ ಮರ್ಯಾದೆ ಕಳೆಯಬೇಡ ಅಂದಿದ್ದರಂತೆ! ಅಲ್ಲ ಸರ್ ಮಕ್ಕಳು ಇಷ್ಟು ಸೆನ್ಸಿಟಿವ್ ಆದರೆ ಏನು ಮಾಡೋದು ಸರ್? ನಾನು ಸಿಂಗಲ್ ಪೇರೆಂಟು ಮಕ್ಕಳನ್ನು ಇಡೀ ದಿನ ನೋಡುತ್ತ ಕೂರಲಾ ಅಥವಾ ಅವರನ್ನು ಸಾಕಲು ದುಡಿಯಲಾ ಅನ್ನುತ್ತಿದ್ದರು. ಯಾವ ತಾಯಿಗೂ ಈ ಪರಿಸ್ಥಿತಿ ಬರಬಾರದೆನ್ನಿಸಿ ನೋವಾಯಿತು. ಅದಕ್ಕೂ ಹೆಚ್ಚು ಬೇಜಾರಾಗಿದ್ದು, ಮಗ ಹೋದ ನೋವಿನಲ್ಲಿರುವ ತಾಯಿಯನ್ನು ಎಲ್ಲ ವಾಹಿನಿಗಳವರು ಏನಾಯ್ತು, ಯಾವಾಗ ಕೊನೆ ಬಾರಿ ಮಾತಾಡಿದ್ದು, ಡೆ@ತ್‌ನೋಟ್‌ನಲ್ಲಿ ಏನಿತ್ತು ಹೀಗೆ ಒಂದೇ ಸವನೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದದ್ದು! ಬಹಳ ಹಿಂಸೆಯಾಯಿತು! ಇನ್ನು ಆಕೆಗೆ ಏನಾಗಿದೆಯೋ! ಹದಿಮೂರಕ್ಕೆ ಹದಿಹರಯ ಶುರುವಾಗುತ್ತದೇನೋ ನಿಜ, ಆದರೆ ಜೀವ ತೆಗೆದುಕೊಳ್ಳುವಷ್ಟು ಈ ಮಕ್ಕಳು ಪ್ರೌಢರಾಗಿಬಿಟ್ಟಿದ್ದಾರೆಯೇ? ಕಾರಣ ಇಂತಹ ಘಟನೆಗಳು ಗೂಗಲ್ ಮಾಡಿದರೆ ದಿಗಿಲು ಹುಟ್ಟಿಸುವಷ್ಟು ಸಿಗುತ್ತವೆ! ನಿಜಕ್ಕೂ ಮುಂದಿನ ದಿನಗಳನ್ನು ನೆನೆಸಿಕೊಂಡರೆ ಆತಂಕವಾಗುತ್ತದೆ. ಛೇ!
– ದೀಪಾ ಹಿರೇಗುತ್ತಿ
=================
ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ 13 ವರ್ಷದ ಪುತ್ರನು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನೋಡಿ ಮನಸ್ಸು ಯಾಕೋ ಸ್ತಬ್ಧವಾಯಿತು. ಇದಕ್ಕೆ ಹಲವು ಕಾರಣಗಳಿವೆ.
ಶಕುಂತಲಾ ತನ್ನ ಮಗನನ್ನು ಆರ್.ಎಸ್.ಎಸ್ ಶಾಖೆಗೆ ಕಳುಹಿಸುತ್ತೇನೆ ಎನ್ನುವಾಗ, ಅವರು ಪದೇಪದೇ ದ್ವೇಷಕಾರಕ ಟ್ವೀಟ್ ಗಳನ್ನು ಮಾಡುವಾಗ, ಸುಳ್ಳು ಸುದ್ದಿಗಳನ್ನು ಹಬ್ಬಿಸುವಾಗ ಶಕುಂತಲಾ ವ್ಯವಸ್ಥೆಯ ಬಲಿಪಶುವಾಗಿದ್ದಾರೆ ಅಂತ ಯಾವಾಗಲೂ ಅನಿಸುತ್ತಿತ್ತು. ಆಕೆಯ ಮೇಲೆ ವೈಯಕ್ತಿಕವಾಗಿ ಕೆಲವರು ಬಾಡಿಶೇಮಿಂಗ್ ಥರದ ಟ್ರೋಲ್ ಗಳನ್ನು ಮಾಡುವಾಗ ಹಿಂಸೆಯಾಗುತ್ತಿತ್ತು. ಕಾರಣ ಆ ಹೆಂಗಸು ಯಾವುದೋ ಸುಳ್ಳು ಸಿದ್ಧಾಂತದಿಂದ ಪ್ರಚೋದಿತವಾಗಿ, ತನ್ನೊಂದಿಗೆ ದೊಡ್ಡ ಶಕ್ತಿಯೊಂದು ಇದೆ ಎಂಬ ಭ್ರಮೆಯಲ್ಲಿ ಮುಂದಿನದದ್ದು ಯೋಚಿಸದ ದಡ್ಡಿಯಾಗಿದ್ದರು. ಆಕೆಯ ಮೇಲೆ ಕೇಸ್ ದಾಖಲಾದಾಗ ಕನಿಕರ ಹುಟ್ಟಿದ್ದೂ ಉಂಟು.
ಮನುಷ್ಯನ ಮನಸ್ಸಿಗೆ ಯಾವುದಾದರೂ ಮತೀಯವಾದಿ ಸಿದ್ಧಾಂತ ಆಪ್ಯಾಯಮಾನವೆನಿಸಿದಾಗ ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ನಮಗೆ ಇಲ್ಲವಾಗುತ್ತದೆ. ನಾವೊಂದು ವಿಷವರ್ತುಲದ ಭಾಗವಾಗಿ ಕಾಲಾಳುಗಳಾಗಿದ್ದೇವೆ ಎಂದು ಚಿಂತಿಸದಷ್ಟು ಬೌದ್ಧಿಕ ಗೈರುಹಾಜರಿ ನಮ್ಮೊಳಗೆ ನೆಲೆಸಿಬಿಡುತ್ತದೆ.
ಇದನ್ನು ಓದಿದ್ದೀರಾ?: ‘ದೇವಮಾನವ’ನಿಂದ ಮರಳಿ ‘ಮಾನವ’ನಾದ ಪ್ರಧಾನಿ ಮೋದಿ
ಯಾವುದೋ ಬೆಟ್ಟಿಂಗ್ ನಿಂದಾಗಿ ಮಗುವೊಂದು ಸಾವಿಗೀಡಾಗುವುದು ಸಮಾಜ ನಡೆಯುತ್ತಿರುವ ಹಾದಿಯನ್ನು, ನಮ್ಮ ಮಕ್ಕಳು ಟೊಳ್ಳಾಗುತ್ತಿರುವ ಸೂಚನೆಯನ್ನು ಕೊಡುತ್ತಿದೆಯಲ್ಲ ಅದು ದುಃಖದ ದಿನಗಳ ಗಾಯಗಳೇ ಸರಿ. ಈ ಸಾವು ನಮ್ಮನ್ನು ಬಹುಕಾಲ ಕಾಡುವ ಸಂಗತಿ. ಪಾಪ, ಆ ಮಗುವನ್ನು ನೋಡಿದರೆ ಹೊಟ್ಟೆ ಕಿವುಚಿದಂತೆ ಆಗುತ್ತದೆ. ಸಿದ್ಧಾಂತವೊಂದರ ಕಾಲಾಳಾಗಿ ದುಡಿಯುತ್ತಿರುವ ಶಕುಂತಲಾ ಎಂಬ ಅಮಾಯಕ ದಡ್ಡ ಹೆಣ್ಣುಮಗಳ ಕಂಬನಿಯಲ್ಲಿ ಮೂಡಬಹುದಾದ ಕರುಳ ತಂತುಗಳು ತಲ್ಲಣಿಸುವುದಕ್ಕೆ ಕಾರಣವಾಗಿಬಿಡುತ್ತವೆ.
ಮಗುವಿನ ಸಾವನ್ನು ಅರಗಿಸಿಕೊಳ್ಳುವ ಶಕ್ತಿ ಆ ಹೆಣ್ಣುಮಗಳಿಗೆ ದಕ್ಕಲಿ. ವ್ಯವಸ್ಥೆಯೊಂದರ ಬಲಿಪಶುವಾದ ಶಕುಂತಲಾ, ಎಲ್ಲ ಸಿದ್ಧಾಂತಳಾಚೆಗೆ ಒಬ್ಬ ತಾಯಿ ಎಂಬುದಷ್ಟೇ ಎಲ್ಲರನ್ನೂ ಕಾಡಲಿ.
– ಯತಿರಾಜ್ ಬ್ಯಾಲಹಳ್ಳಿ
ಯತಿರಾಜ್ ಬ್ಯಾಲಹಳ್ಳಿಯವರ ಲೇಖನ ಅಂತಃಕರಣ ಮಾನವೀಯ ಮೌಲ್ಯಗಳ ಅಭಿವ್ಯಕ್ತಿ.. ತಾಯ್ನನ ಸ್ಮರಣೆ ಪ್ರೇರಣೀಯ..