“ಕರ್ನಾಟಕ ಮತ್ತೊಂದು ಅನನ್ಯ ಮಾದರಿಯೊಂದನ್ನು ಕಟ್ಟಿಕೊಟ್ಟಿದೆ. ನಕ್ಸಲ್ ಬಿಕ್ಕಟ್ಟನ್ನು ಪರಿಹರಿಸುವ ಹೊಸ ಸೂತ್ರವನ್ನು ಹೊಸೆದಿದೆ. ದೇಶದಲ್ಲಿ ಛತ್ತೀಸ್‌ಗಢ ಮತ್ತು ಇನ್ನು ಕೆಲವು ರಾಜ್ಯಗಳಿಂದ ನಕ್ಸಲರ ಹಾಗೂ ಪೊಲೀಸರ ಹತ್ಯೆಗಳ ಸುದ್ದಿಗಳು ಸತತವಾಗಿ ಕೇಳಿಬರುತ್ತಿವೆ. ಆದರೆ, ಕರ್ನಾಟಕ ಈ ಸಾವು ನೋವುಗಳ ಇತಿಹಾಸವನ್ನು ವಿಶಿಷ್ಟ ವಿಧಾನದಲ್ಲಿ ಬಗೆಹರಿಸಿಕೊಂಡಿದೆ” ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಸದಸ್ಯರು ಸರ್ಕಾರವನ್ನು ಪ್ರಶಂಸಿಸಿದ್ದಾರೆ.
ಐದು ದಶಕಗಳಿಂದ ಕರ್ನಾಟಕದಲ್ಲೂ ನಡೆಯುತ್ತಿದ್ದ ನಕ್ಸಲ್ ಹೋರಾಟ ನಿಟ್ಟುಸಿರಿನ ಘಟ್ಟಕ್ಕೆ ಬಂದು ಮುಟ್ಟಿದೆ. ಜನವರಿ 8ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆರು ಮಂದಿ ನಕ್ಸಲೀಯರು ಪ್ರಜಾತಾಂತ್ರಿಕ ಚಳವಳಿಗೆ ಮರಳುವ ಮೂಲಕ ನಕ್ಸಲ್ ಚಟುವಟಿಕೆಯ ತನ್ನ ಹಳೆಯ ರೂಪ (ಶಸ್ತ್ರಸಜ್ಜಿತ ಹೋರಾಟ) ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಪ್ರಕ್ರಿಯೆಯನ್ನು ಇಡೀ ನಾಗರಿಕ ಸಮಾಜ ಅತ್ಯಂತ ಹರ್ಷದಿಂದ ಸ್ವಾಗತಿಸಿದೆ ಎಂದು ವೇದಿಕೆಯ ಸದಸ್ಯರು ಹೇಳಿದ್ದಾರೆ.
“ನಕ್ಸಲ್ ಮಾದರಿಯ ಹೋರಾಟವನ್ನು ಬದಲಾಯಿಸಿಕೊಳ್ಳಲು ತೀರ್ಮಾನಿಸಿ ಕಾಡಿನಿಂದ ಹೊರಬಂದ ಆರು ಜನ ನಕ್ಸಲೀಯರು, ʼನಾವು ಹೋರಾಟವನ್ನು ಕೈಬಿಟ್ಟಿಲ್ಲ. ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳುತ್ತಿದ್ದೇವೆ. ನಮ್ಮ ಜೀವದ ಕೊನೆ ಉಸಿರಿನ ತನಕ ನಾವು ಜನರಿಗಾಗಿ ಹೋರಾಟವನ್ನು ಮುಂದುವರೆಸುತ್ತೇವೆ. ಇದೇ ಈ ಮಾದರಿಯ ಅತಿಮುಖ್ಯ ವಿಶೇಷತೆಯಾಗಿದೆ. ಬದಲಾದ ಸಂದರ್ಭದಲ್ಲಿ ಬದಲಾದ ಹೋರಾಟದ ವಿಧಾನ ಅಗತ್ಯವಿದೆ ಎಂಬುದು ನಮಗೆ ಮನವರಿಕೆಯಾಗಿದೆ. ಹಾಗಾಗಿಯೇ ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾರ ಒತ್ತಡದಿಂದಲೂ ಅಲ್ಲ, ಯಾವ ಭಯದಿಂದಲೂ ಅಲ್ಲ, ಸ್ವಇಚ್ಛೆಯಿಂದಲೇ ಈ ಹೋರಾಟಕ್ಕೆ ಹೋಗಿದ್ದೇವೆ, ಸ್ವ ಇಚ್ಛೆಯಿಂದಲೇ ಈ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳುತ್ತಿದ್ದೇವೆʼ ಎಂದು ಅವರು ದೃಢವಾಗಿ ಪ್ರತಿಪಾದಿಸಿದ್ದಾರೆ” ಎಂದು ವೇದಿಕೆಯ ತಾರಾ ರಾವ್ ಸ್ಪಷ್ಟಪಡಿಸಿದರು.
ಶರಣಾಗತಿ ಅಲ್ಲ: “ನಕ್ಸಲೀಯರು ಶರಣಾಗಿರುವುದು ಅಲ್ಲ, ಹೋರಾಟದ ಮಾರ್ಗವನ್ನು ಬದಲಾಯಿಸಿಕೊಂಡಿದ್ದಾರೆ. ಅವರು ಆ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ. ನಕ್ಸಲೀಯರು ಸಶಸ್ತ್ರ ಹೋರಾಟದ ಮಾರ್ಗದಿಂದ ಪ್ರಜಾತಾಂತ್ರಿಕ ಹೋರಾಟದ ಮಾರ್ಗಕ್ಕೆ ಮರಳಿದ್ದಾರೆ. ಹಾಗಾಗಿ ನಾವು ಮಾಧ್ಯಮ ಮಿತ್ರರಲ್ಲೂ ಕೋರಿಕೊಳ್ಳುವುದೇನೆಂದರೆ ಹೊಸ ಮಾದರಿಗೆ ಹೊಸ ಭಾಷೆ ಕೊಡೋಣ. ಇದು ಶರಣಾಗತಿ ಅಲ್ಲ. ಹೊಸ ಮಾರ್ಗಕ್ಕೆ ಪರಿವರ್ತನೆ. ಅವರು ಶರಣಾಗಿರುವುದು ಅಲ್ಲ, ಪ್ರಜಾತಾಂತ್ರಿಕ ಹೋರಾಟದ ಮುಖ್ಯವಾಹಿನಿಗೆ ಮರಳಿದ್ದಾರೆ. ಮಾಧ್ಯಮಗಳು ಇದನ್ನು ಗಮನಿಸಿ ಸರಿಯಾದ ನರೇಟಿವ್ ಕಟ್ಟಲು ನೆರವಾಗಬೇಕು” ಎಂದು ತಾರಾ ರಾವ್ ಹೇಳಿದರು.
“ಇದು ಸಾಧ್ಯವಾದದ್ದು ನಾಗರಿಕ ಸಮಾಜ ಹಾಗೂ ಸರ್ಕಾರ ಇಬ್ಬರೂ ಪರಸ್ಪರ ವಿಶ್ವಾಸವಿಟ್ಟು, ಸಮನ್ವಯದ ಜೊತೆ, ಏಕ ತೀರ್ಮಾನದ ಜೊತೆ ಕೆಲಸ ಮಾಡಿರುವುದರಿಂದ. ನಾಗರಿಕ ಸಮಾಜ ನಕ್ಸಲೀಯರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈಹಾಕದೇ ಇದ್ದಿದ್ದಲ್ಲಿ ಕೇವಲ ಸರ್ಕಾರದ ಕೈಯಿಂದ ಇದನ್ನು ಬಗೆಹರಿಸಲು ಸಾಧ್ಯವೇ ಇರುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ನಾಗರಿಕ ಸಮಾಜ ಮುಂದಿಟ್ಟ ಪರಿಹಾರದ ಸೂತ್ರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಹೋಗಿದ್ದರೂ ಇದು ಸಾಧ್ಯವಾಗುತ್ತಿರಲಿಲ್ಲ. ಇದೊಂದು ರೀತಿಯಲ್ಲಿ ಜಾಯಿಂಟ್ ಮಿಷನ್ ಕ್ರಿಯೇಟ್ ಮಾಡಿದ ಮ್ಯಾಜಿಕ್. ಇದರಲ್ಲಿ ನಾಗರಿಕ ಸಮಾಜದ ಪಾತ್ರ ಬಹಳ ಬಹಳ ಮಹತ್ವದ್ದು. ಇದನ್ನು ಸರ್ಕಾರವೂ, ಸಮಾಜವೂ ಮತ್ತು ಮಾಧ್ಯಮವೂ ಗಮನಿಸಬೇಕು ಎಂದು ಕೋರುತ್ತೇವೆ” ಎಂದರು.
ಮತ್ತೋರ್ವ ಸದಸ್ಯ ನಗರಗೆರೆ ರಮೇಶ್ ಮಾತನಾಡಿ, ಈ ವೇದಿಕೆಯ ಹಿನ್ನಲೆ, ಯಾವ ಸಂದರ್ಭದಲ್ಲಿ ಇದು ಹುಟ್ಟಿಕೊಂಡಿತು. ಏನೇನು ಕೆಲಸ ಮಾಡಿದೆ ಎಂದು ವಿವರಿಸಿದರು.
“ನಕ್ಸಲ್ ಬಿಕ್ಕಟ್ಟನ್ನು ಹೊಸ ವಿಧಾನದಲ್ಲಿ ಪರಿಹರಿಸುವ ಪ್ರಯತ್ನ ಪ್ರಾರಂಭಗೊಂಡು ಎರಡು ದಶಕಗಳಾಗಿವೆ. 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಶಿವಲಿಂಗು ಎಂಬ ಕಾರ್ಯಕರ್ತರ ಹತ್ಯೆಯಾಗುತ್ತದೆ. ಇದಕ್ಕೆ ಇಡೀ ಕರ್ನಾಟಕ ಮಿಡಿದು ಪ್ರತಿಕ್ರಿಯಿಸುತ್ತದೆ. ಅಂದಿನ ಧರಂಸಿಂಗ್ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯುತ್ತದೆ. ಏಕೆಂದರೆ, ಸಾಕೇತ್ ರಾಜನ್ ಅಂತಹ ಮೇರು ವ್ಯಕ್ತಿಯಾಗಿದ್ದರು. ಅಪಾರ ಸಾಮಾಜಿಕ ಕಾಳಜಿ, ವೈಚಾರಿಕ ವಿದ್ವತ್ತು, ದಿಟ್ಟತನ ಧೈರ್ಯ ಎದ್ದು ಕಾಣುತ್ತಿದ್ದ ವಿಶೇಷ ವ್ಯಕ್ತಿತ್ವ. ಅವರು ಬರೆದಿರುವ ‘ಮೇಕಿಂಗ್ ಹಿಸ್ಟರಿ’ ಕರ್ನಾಟಕದ ಜನರ ಚರಿತ್ರೆಗೆ ಅಮೂಲ್ಯ ಕೊಡುಗೆ. ಅವರ ಹತ್ಯೆ ಎಲ್ಲ ಮಾನವೀಯ ಮನಸ್ಸುಗಳನ್ನು ವಿಚಲಿತಗೊಳಿಸಿತ್ತು. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕು ಎಂಬ ಚಡಪಡಿಕೆಯನ್ನು ಸೃಷ್ಟಿಸಿತ್ತು. ಗೌರಿ ಲಂಕೇಶ್, ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಸೇರಿದಂತೆ ಅನೇಕ ಮೇರು ವ್ಯಕ್ತಿತ್ವಗಳು ಸೇರಿ ಚಾಲನೆ ಕೊಟ್ಟ ವೇದಿಕೆಯೇ ಶಾಂತಿಗಾಗಿ ನಾಗರಿಕರ ವೇದಿಕೆ ಎಂದರು.
“ನಕ್ಸಲ್ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡುಕೊಳ್ಳೋಣ. ಮಾತುಕತೆಗೆ ಕರೆಯಿರಿ ಎಂದು ಸರ್ಕಾರವನ್ನು ಎಷ್ಟು ಒತ್ತಾಯಿಸಿದರೂ ಆಗಿನ ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ. ಸಾವು ನೋವುಗಳು ನಿಲ್ಲಲಿಲ್ಲ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ಇದಕ್ಕೆ ಯಾವ ಸಾಧ್ಯತೆಗಳೂ ಇರಲಿಲ್ಲ. ಏಕೆಂದರೆ ಬಿಜೆಪಿ ಇದನ್ನು ಅರ್ಥಮಾಡಿಕೊಳ್ಳುವ ಯಾವ ಸಾಧ್ಯತೆಗಳೂ ಇರಲಿಲ್ಲ. ತಾತ್ವಿಕವಾಗಿಯೇ ಅದರದು ತದ್ವಿರುದ್ಧ ನೆಲೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಾರೆ. ಶಾಂತಿಗಾಗಿ ನಾಗರೀಕರ ವೇದಿಕೆ ಸಕ್ರಿಯವಾಗುತ್ತದೆ. ನಕ್ಸಲರನ್ನು ಮಾತುಕತೆಗೆ ಕರೆಯಿರಿ ಎಂದು ಒತ್ತಾಯ ಹಾಕುತ್ತದೆ. ವೇದಿಕೆಯ ಮಾತಿಗೆ ಓಗೊಟ್ಟು ಸಿದ್ದರಾಮಯ್ಯನವರು ನಕ್ಸಲರು ಮಾತುಕತೆಗೆ ಬರುವುದಾದರೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಹೇಳಿಕೆ ನೀಡುತ್ತಾರೆ. ನಾಗರಿಕ ವೇದಿಕೆ ಸರ್ಕಾರದ ಈ ಕರೆಯನ್ನು ಸ್ವಾಗತಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದೆ ಬರಬೇಕೆಂದು ನಕ್ಸಲೀಯರಿಗೂ ಮನವಿ ಮಾಡಿಕೊಳ್ಳುತ್ತದೆ. ಇಷ್ಟು ಹೊತ್ತಿಗೆ ಭಿನ್ನ ಧೋರಣೆಯನ್ನು ಬೆಳೆಸಿಕೊಂಡಿದ್ದ ನಕ್ಸಲ್ ಮುಖಂಡರಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ “ನಾವು ಮುಖ್ಯವಾಹಿನಿಗೆ ಮರಳಿದ ನಂತರ ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಯಾವ ರೀತಿಯ ಅಡಚಣೆಯನ್ನೂ ಸೃಷ್ಟಿ ಮಾಡಬಾರದು” ಎಂಬ ಏಕ ಷರತ್ತಿನ ಮೇಲೆ ನಾವಿದಕ್ಕೆ ಸಿದ್ಧವಿದ್ದೇವೆ ಎನ್ನುತ್ತಾರೆ. ಅವರಿಟ್ಟ ಏಕ ಷರತ್ತಿಗೆ ಸರ್ಕಾರ ಒಪ್ಪುತ್ತದೆ. ಕೇಂದ್ರ ಸರ್ಕಾರ ಹೆಸರಿಟ್ಟಿದ್ದ “ಶರಣಾಗತಿ ಯೋಜನೆ”ಯ ಹೆಸರನ್ನು “ಶರಣಾಗತಿ/ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಡುವ ಯೋಜನೆ” ಎಂದು ಮರುನಾಮಕಾರಣ ಮಾಡಲಾಗುತ್ತದೆ. ಈ ಮರ ನಾಮಕರಣದ ಹಿಂದೆ ಹೊಸ ಗ್ರಹಿಕೆ ಅಡಗಿದೆ” ಎಂದು ವಿವರಿಸಿದರು.
2014ರ ಡಿಸೆಂಬರ್ 28ರಂದು ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಚಿಕ್ಕಮಗಳೂರಿನಲ್ಲಿ ಅಜ್ಞಾತವಾಸದಿಂದ ಹೊರಬರುತ್ತಾರೆ. ಮತ್ತೆ 7 ಜನ ನಕ್ಸಲೀಯರು ಮುಖ್ಯವಾಹಿನಿಗೆ ಮರಳುತ್ತಾರೆ. ನಂತರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ವಿಚಾರವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಸಾಧ್ಯತೆಗಳ ಬಾಗಿಲುಗಳು ಮತ್ತೆ ಮುಚ್ಚಿಕೊಳ್ಳುತ್ತವೆ. ಅಷ್ಟು ಮಾತ್ರವಲ್ಲ ಈ ಪ್ರಕ್ರಿಯೆಯನ್ನು ಸರ್ಕಾರದ ವತಿಯಿಂದ ನಡೆಸಿಕೊಡಲು ರಚಿತವಾಗಿದ್ದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಕಾರ್ಯನಿರ್ವಹಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ. ಈ ಹಿಂದೆ ಮುಖ್ಯವಾಹಿನಿಗೆ ಬಂದಿದ್ದ 7 ಜನ ನಕ್ಸಲೀಯರ ಬದುಕು ಅತಂತ್ರಗೊಳ್ಳುತ್ತದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯನ್ನು ಪುನರ್ ಚಾಲನೆಗೊಳಿಸುತ್ತದೆ. ನಾಗರಿಕ ಸಮಾಜದ ಸದಸ್ಯರಿಗೆ ನಕ್ಸಲೀಯರ ಜೊತೆ ಸಂಪರ್ಕ ಸಾಧಿಸಿ, ಶರಣಾಗತಿ ಮಾಡಿಸಿ ಎಂದು ಕೇಳಿಕೊಳ್ಳುತ್ತದೆ. ಅಷ್ಟರಲ್ಲಿ ಕಳೆದ ನವೆಂಬರ್ 18ರಂದು ಎನ್ ಕೌಂಟರ್ ಹೆಸರಿನಲ್ಲಿ ವಿಕ್ರಂ ಗೌಡ ಅವರ ಹತ್ಯೆ ನಡೆಯುತ್ತದೆ. ನಾಗರಿಕರ ವೇದಿಕೆ ಸರ್ಕಾರದ ವರ್ತನೆಯನ್ನು ಹೃದಯಹೀನ ನೀತಿ ಎಂದು ಖಂಡಿಸಿ ನ್ಯಾಯಾಂಗ ತನಿಖೆಯಾಗಲೇಬೇಕು ಎಂದು ಒತ್ತಾಯಿಸುತ್ತದೆ. ಅದೇ ಸಂದರ್ಭದಲ್ಲಿ ಪ್ರಜಾತಾಂತ್ರಿಕ ಹೋರಾಟದ ಮುಖ್ಯವಾಹಿನಿಗೆ ಮರಳುವಂತೆ ನಕ್ಸಲೀಯರಲ್ಲೂ ಮನವಿ ಮಾಡಿಕೊಳ್ಳುತ್ತದೆ. ನೀವು ಬಯಸಿದಲ್ಲಿ ಇದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ, ನಮ್ಮಲ್ಲಿ ಯಾರನ್ನಾದರೂ ನೀವೇ ಸಂಪರ್ಕಿಸಬಹುದು ಎಂದು ಮನವಿ ಮಾಡಿಕೊಳ್ಳುತ್ತದೆ. ನಂತರ ಕೇವಲ ನಲುವತ್ತು ದಿನಗಳಲ್ಲಿ ಆರು ನಕ್ಸಲರು ಹೊರ ಬರಲು ಸಾಧ್ಯವಾಯಿತು” ಎಂದು ವಿವರಿಸಿದರು.
40 ದಿನಗಳ ʼಮಿಷನ್ ಪ್ರಜಾತಾಂತ್ರಿಕ ಮುಖ್ಯವಾಹಿನಿʼ ಹೇಗೆ ನಡೆಯಿತು ಎಂದು ಸಾಮಾಜಿಕ ಹೋರಾಟಗಾರ, ಮಾಜಿ ನಕ್ಸಲ್ ಹೋರಾಟಗಾರ ನೂರ್ ಶ್ರೀಧರ್ ವಿವರಿಸಿದರು.
ನವೆಂಬರ್ 20ರಂದು ಶಾಂತಿಗಾಗಿ ನಾಗರಿಕ ವೇದಿಕೆ ಪತ್ರಿಕಾಗೋಷ್ಠಿ ನಡೆಸಿ ವಿಕ್ರಂ ಗೌಡ ಹತ್ಯೆಯನ್ನು ಖಂಡಿಸುತ್ತದೆ, ತನಿಖೆಗೆ ಆಗ್ರಹಿಸುತ್ತದೆ, ನಕ್ಸಲೀಯರಿಗೆ ಶರಣಾಗುವಂತೆ ಮನವಿ ಮಾಡಿಕೊಳ್ಳುತ್ತದೆ.
ಡಿಸೆಂಬರ್ 1 ರಂದು ಮುಖ್ಯಮಂತ್ರಿಗಳನ್ನು ಭೇಟಿಯಾಗುವ ನಿಯೋಗ ಕೂಂಬಿಂಗ್ ಆಪರೇಷನ್ ನಿಲ್ಲಿಸಲು ಒತ್ತಾಯಿಸುತ್ತದೆ ಮತ್ತು ಸರ್ಕಾರ ಸರಿಯಾಗಿ ಸ್ಪಂದಿಸಿದಲ್ಲಿ ನಕ್ಸಲೀಯರನ್ನು ಸಂಪರ್ಕಿಸಿ ಮನವೊಲಿಸುತ್ತೇವೆ ಎಂದು ತಿಳಿಸಲಾಗುತ್ತದೆ. ಮುಖ್ಯಮಂತ್ರಿಗಳು “ಮಾಡಿ, ನಮ್ಮ ಸಂಪೂರ್ಣ ಸಹಕಾರವಿರುತ್ತದೆ” ಎನ್ನುತ್ತಾರೆ.
ಶಾಂತಿಗಾಗಿ ನಾಗರಿಕರ ವೇದಿಕೆಯು ಮಲೆನಾಡಿನ ಆದಿವಾಸಿ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಜನಪರ ಸಂಘಟನೆಗಳ ಮಿತ್ರರ ಜೊತೆ ಮಾತನಾಡಿ, ನಿಮ್ಮ ಯಾವುದೇ ಕಾರ್ಯಕರ್ತರ ಸಂಪರ್ಕಕ್ಕೂ ನಕ್ಸಲೀಯರು ಬಂದರೂ ಅವರ ಜೊತೆ ಮಾತನಾಡಲು ಹೇಳಿ, ಸಂಪರ್ಕ ಉಳಿಸಿಕೊಳ್ಳಲು ಹೇಳಿ, ನಮ್ಮನ್ನು ಸಂಪರ್ಕಿಸಲು ಹೇಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಅವರೆಲ್ಲರೂ ಸಹ ಕಾಳಜಿಯೊಂದಿಗೆ ಪ್ರತಿಕ್ರಿಯಿಸುತ್ತಾರೆ.
ಡಿಸೆಂಬರ್ ಮೊದಲ ವಾರದಲ್ಲಿ ನಕ್ಸಲ್ ತಂಡದವರು ಹಳ್ಳಿಯೊಂದಕ್ಕೆ ಬಂದಾಗ ಅಲ್ಲಿನ ಜನಪರ ಕಾರ್ಯಕರ್ತರು ಶಾಂತಿಗಾಗಿ ನಾಗರಿಕರ ವೇದಿಕೆಯ ನಿಲುವನ್ನು ಅವರ ಗಮನಕ್ಕೆ ತರುತ್ತಾರೆ. ದಯವಿಟ್ಟು ಆಲೋಚಿಸಿ ಎಂದು ಕೇಳಿಕೊಳ್ಳುತ್ತಾರೆ. “ಇದೆಲ್ಲ ಅಷ್ಟು ಸುಲಭವಿಲ್ಲ. ನಮ್ಮ ಷರತ್ತುಗಳಿಗೆ ಸರ್ಕಾರ ಒಪ್ಪಲು ಸಾಧ್ಯವಿಲ್ಲ. ತಲೆತಗ್ಗಿಸಿ ನಿಲ್ಲಲು ಅಥವಾ ಜೈಲಲ್ಲಿ ಕೂರಲು ನಾವು ಸಿದ್ಧರಿಲ್ಲ” ಎಂದು ಅವರು ಹೇಳುತ್ತಾರೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನು ಎಂದು ಕಾರ್ಯಕರ್ತರು ಪ್ರಶ್ನಿಸಿ ಚರ್ಚೆ ಮಾಡುತ್ತಾರೆ. ನೋಡೋಣ ಎಂದು ಅವರು ಹೇಳುವ ಮೂಲಕ ಚರ್ಚೆ ಮುಕ್ತಾಯವಾಗುತ್ತದೆ.
ಡಿಸೆಂಬರ್ 15ರಂದು ನಕ್ಸಲೀಯರು ಆದಿವಾಸಿ ಹಿರಿಯ ಮಹಿಳೆಯೊಬ್ಬರ ಮೂಲಕ ಒಂದು ಸಣ್ಣ ಚೀಟಿಯನ್ನು ಅಲ್ಲಿನ ಸಂಘಟನೆಯ ಕಾರ್ಯಕರ್ತರೊಬ್ಬರಿಗೆ ಕಳಿಸಿಕೊಡುತ್ತಾರೆ. ಅದರಲ್ಲಿ “ಒಂದು ವೇಳೆ ಸರ್ಕಾರ ನಮ್ಮ ಷರತ್ತುಗಳಿಗೆ ಒಪ್ಪುವುದಾದರೆ ನಾವು ತೀರ್ಮಾನ ತೆಗೆದುಕೊಳ್ಳಲು ಸಿದ್ಧರಿದ್ದೇವೆ” ಎಂದು ಅದರಲ್ಲಿ ಬರೆದಿರುತ್ತದೆ. ಸಾಧ್ಯತೆ ಇದ್ದಲ್ಲಿ ಈ ಆದಿವಾಸಿ ಹಿರಿಯ ಮಹಿಳೆಯೊಬ್ಬರ ಮೂಲಕ ಸುದ್ದಿ ಕಳಿಸಿದರೆ ತಮಗೆ ತಲುಪುತ್ತದೆ ಎಂಬ ಸೂಚನೆಯನ್ನು ಕೊಡುತ್ತಾರೆ. ಈ ಮಾಹಿತಿಯನ್ನು ಕಾರ್ಯಕರ್ತರು ಕೂಡಲೇ ಶಾಂತಿಗಾಗಿ ನಾಗರಿಕ ವೇದಿಕೆಗೆ ತಿಳಿಸುತ್ತಾರೆ.
ಡಿಸೆಂಬರ್ 18ರಂದು ವೇದಿಕೆಯ ತಂಡ ಇಂಟಲಿಜೆನ್ಸ್ ವಿಭಾಗದ ಮುಖ್ಯಸ್ಥರಾದ ಹೇಮಂತ್ ನಿಂಬಾಳ್ಕರ್ ಅವರನ್ನು ಭೇಟಿಯಾಗುತ್ತದೆ. ನಮಗೆ ಹೀಗೊಂದು ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ. ನಾವು ಕಾಡಿಗೆ ಹೋಗಿ ಬರಲು ಸಿದ್ಧರಿದ್ದೇವೆ. ನಾವು ಕಾಡಿಗೆ ಹೋಗಬೇಕಾದರೆ ಎಎನ್‌ಎಫ್ ಕಾರ್ಯಾಚರಣೆ ನಿಲ್ಲಬೇಕು, ನಮ್ಮ ಸುರಕ್ಷತೆ ಖಾತ್ರಿಯಾಗಬೇಕು ಮತ್ತು ಒಂದು ವೇಳೆ ಅವರು ಕಾಡಿನಿಂದ ಹೊರಬಂದಲ್ಲಿ ಅವರು ಜೈಲಲ್ಲಿ ಕೊಳೆಯುವಂತೆ ಮಾಡುವುದಿಲ್ಲ ಎಂಬ ಖಚಿತ ಭರವಸೆ ನಮಗೆ ಸಿಗಬೇಕು ಎಂದು ಕೇಳುತ್ತೇವೆ. ಸಾಕಷ್ಟು ಚರ್ಚೆ ನಡೆಯುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡೋಣ. ನೀವು ಅವರನ್ನು ಮನವೊಲಿಸಿ ಎಂದು ಅವರು ತಿಳಿಸುತ್ತಾರೆ.
ಡಿಸೆಂಬರ್ 19ರಂದು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ. ವಿಚಾರ ತಿಳಿಸಿ. “ನೀವು ನಮಗೆ ಸಂಪೂರ್ಣ ವಿಶ್ವಾಸ ನೀಡಿದರೆ ಮಾತ್ರ ನಾವು ಕಾಡಿಗೆ ಹೋಗಿ ನಕ್ಸಲರಿಗೆ ವಿಶ್ವಾಸ ನೀಡುತ್ತೇವೆ” ಎನ್ನುತ್ತೇವೆ. ಅವರು ನಮ್ಮ ಕಡೆಯಿಂದ ಖಂಡಿತ ಸಂಪೂರ್ಣ ಸಹಕಾರವಿರುತ್ತದೆ ಎಂದು ಹೇಳುತ್ತಾರೆ. ಆದರೂ ಇದು ಸರ್ಕಾರವಾಗಿ ತೆಗೆದುಕೊಳ್ಳಬೇಕಾದ ತೀರ್ಮಾನವಾದ್ದರಿಂದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರ ಇಬ್ಬರ ಗಮನಕ್ಕೂ ತಂದು ಖಚಿತ ಅಭಿಪ್ರಾಯ ತಿಳಿಸುತ್ತೇನೆ ಎನ್ನುತ್ತಾರೆ.
ಡಿಸೆಂಬರ್ 28ರಂದು “ಮಾತನಾಡಿದ್ದೇನೆ. ಮುಂದುವರೆಯಿರಿ” ಎಂಬ ಸಂದೇಶವನ್ನೂ ಮುಖ್ಯಮಂತ್ರಿಗಳು ಕಳಿಸುತ್ತಾರೆ.
ಡಿಸೆಂಬರ್ 29ರಂದು ಪತ್ರಿಕಾ ಹೇಳಿಕೆಯನ್ನೂ ಕೊಟ್ಟು ನಕ್ಸಲೀಯರಿಗೆ ಮುಖ್ಯವಾಹಿನಿಗೆ ಬರುವಂತೆ ಆಹ್ವಾನಿಸುತ್ತಾರೆ.
ಜನವರಿ 1ರಂದು ಅದೇ ಆದಿವಾಸಿ ಹಿರಿಯ ಮಹಿಳೆ ಮೂಲಕ ನಕ್ಸಲೀಯರು ನಮ್ಮವರನ್ನು ಸಂಪರ್ಕಿಸುತ್ತಾರೆ. “ಮುಖ್ಯಮಂತ್ರಿಯವರ ಹೇಳಿಕೆ ನೋಡಿದೆವು. ನೀವು ಬರುವುದಾದರೆ ನಾವು ಸಿಗುತ್ತೇವೆ” ಎಂದು ತಿಳಿಸುತ್ತಾರೆ.
ಜನವರಿ 2ರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಅವರು ಬಂದು ಶಾಂತಿಗಾಗಿ ನಾಗರಿಕ ವೇದಿಕೆ ಸುದ್ದಿ ಮುಟ್ಟಿಸುತ್ತಾರೆ.
ಜನವರಿ 3ರ ಮುಂಜಾನೆ ನಸುಗತ್ತಲಲ್ಲಿ ಕಾಡಿನ ಅಂಚಿಗೆ ತಲುಪುತ್ತೇವೆ. ಅಲ್ಲಿಂದ ಒಳಗೆ ನಡೆದು ನಕ್ಸಲ್ ತಂಡವನ್ನು ಭೇಟಿಯಾಗುತ್ತೇವೆ. ಈ ಇಡೀ ದಿನ ಬೆಳಿಗ್ಗೆ 8ರಿಂದ ಪ್ರಾರಂಭವಾಗಿ ಸಂಜೆ 7ರ ತನಕ ಅವಿರತ ಚರ್ಚೆಗಳು ನಡೆಯುತ್ತವೆ.
ಜನವರಿ 4ರ ಬೆಳಿಗ್ಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಜೊತೆ ಪಾಯಿಂಟ್ ಬೈ ಪಾಯಿಂಟ್ ಚರ್ಚೆ ನಡೆಯುತ್ತದೆ. ಅಧಿಕಾರಿಗಳು ಬಹುಪಾಲು ಅಂಶಗಳನ್ನು ವಿಶ್ವಾಸದ ಜೊತೆ ಉತ್ತರಿಸಿ “ಮಾಡೋಣ” ಎನ್ನುತ್ತಾರೆ. ಕೆಲವನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತಿಳಿಸುವುದಾಗಿ ಹೇಳುತ್ತಾರೆ.
ಜನವರಿ 6ರ ಸಾಯಂಕಾಲದ ಹೊತ್ತಿಗೆ ಕೆಲವು ವಿಚಾರಗಳಲ್ಲಿ ಅನಿಶ್ಚಿತತೆ ಉಳಿದರೂ ಬಹುಪಾಲು ವಿಚಾರಗಳಲ್ಲಿ ವಿಶ್ವಾಸಾರ್ಹ ಉತ್ತರ ಸಿಗುತ್ತದೆ.
ಜನವರಿ 7ರ ಬೆಳಿಗ್ಗೆ ಎರಡನೇ ಸುತ್ತಿನ ಮಾತುಕತೆಗಾಗಿ ಕಾಡನ್ನು ಸೇರಿಕೊಳ್ಳುತ್ತೇವೆ. ಸರ್ಕಾರ ಪಾಯಿಂಟ್ ಬೈ ಪಾಯಿಂಟ್ ಉತ್ತರಿಸಿರುವ ವೈಖರಿಯನ್ನು ಕಂಡು ನಕ್ಸಲ್ ಸಂಗಾತಿಗಳು ದಂಗಾಗುತ್ತಾರೆ. “ನಾವು ಇಂತಹ ಉತ್ತರವನ್ನು ನಿರೀಕ್ಷಿಸಿಯೇ ಇರಲಿಲ್ಲ. ಹೀಗೂ ಸಾಧ್ಯವೇ ಎಂಬುದನ್ನು ನಂಬಲು ಅಗುತ್ತಿಲ್ಲ. ಇಷ್ಟು ಸಾಕು. ಮಿಕ್ಕಂತೆ ನೀವಿದ್ದೀರಿ, ಜನರಿದ್ದಾರೆ, ಕರ್ನಾಟಕದ ಚಳವಳಿಗಾರರಿದ್ದಾರೆ. ಅದೇನೆ ಬರಲಿ, ನಾವು ಸಿದ್ಧ” ಎಂಬ ಖಚಿತ ಅಭಿಪ್ರಾಯ ತಿಳಿಸುತ್ತಾರೆ. ಮಾತುಕತೆ ಎರಡೇ ಗಂಟೆಯಲ್ಲಿ ಮುಕ್ತಾಯವಾಗುತ್ತದೆ. ನಾವು ಮಧ್ಯಾಹ್ನ 12 ಗಂಟೆ ಹೊತ್ತಿಗೆ ನೆಟ್ವರ್ಕ್ ಏರಿಯಾಗೆ ಬಂದು “ನಕ್ಸಲರಿಂದ ಗ್ರೀನ್ ಸಿಗ್ನಲ್” ಎಂಬ ಸಂದೇಶ ಕಳಿಸುತ್ತೇವೆ.
ಜನವರಿ 7ರ ಸಂಜೆ ಬಾಳೆಹೊನ್ನೂರಿಗೆ ವಾಪಾಸ್ ಬಂದು ಅಧಿಕಾರಿಗಳನ್ನು ಭೇಟಿಯಾಗುತ್ತೇವೆ. ಅಷ್ಟು ಹೊತ್ತಿಗೆ ನಕ್ಸಲ್ ಪುನರ್ವಸತಿ ಸಮಿತಿಯ ಇತರೆ ಸದಸ್ಯರೂ ಬಂದು ಸೇರಿಕೊಳ್ಳುತ್ತಾರೆ. ಜನವರಿ 8ರ ಮುಂಜಾನೆ ಕಾಡನ್ನು ಬಿಟ್ಟು 11ಗಂಟೆ ಹೊತ್ತಿಗೆ ಚಿಕ್ಕಮಗಳೂರು ಐಬಿ ತಲುಪುವುದು. ಅಲ್ಲಿ ಸಂಕ್ಷಿಪ್ತ ರೀತಿಯಲ್ಲಿ ನಾಗರಿಕ ಸ್ವಾಗತ ಮುಗಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಾಧ್ಯಮಗಳ ಮುಂದೆ ಇದನ್ನು ಸಮಾರೋಪಗೊಳಿಸಿಕೊಳ್ಳಬೇಕು ಎಂದು ತೀರ್ಮಾನವಾಗುತ್ತದೆ.
ಜನವರಿ 8ರ ಬೆಳಿಗ್ಗೆ 5 ಗಂಟೆ ಹೊತ್ತಿಗೆ ಶಾಂತಿಗಾಗಿ ನಾಗರಿಕರ ವೇದಿಕೆ ಮತ್ತು ಪುನರ್ವಸತಿ ಸಮಿತಿಯ ತಂಡ ಅವರನ್ನು ಕರೆದುಕೊಂಡು ಬರಲು ಮತ್ತೆ ಕಾಡೊಳಗೆ ಹೋಗುತ್ತದೆ. ಒಂದು ಗಂಟೆಗಳ ಕಾಲ ನಡೆದು 9 ಗಂಟೆಯ ಹೊತ್ತಿಗೆ ರಸ್ತೆಯೊಂದಕ್ಕೆ ಬಂದು ತಲುಪುತ್ತೇವೆ. ವೇದಿಕೆಯ ಮತ್ತು ಪೋಲೀಸರ ವಾಹನಗಳು ಕಾದಿರುತ್ತವೆ. ಅಧಿಕಾರಿಗಳು ಪರಿಶೀಲನೆಯ ಪ್ರಕ್ರಿಯೆಯನ್ನು ಮುಗಿಸಿಕೊಳ್ಳುತ್ತಾರೆ. ವಾಹನಗಳ ಕಾರವಾನ್ ಕಾಡಿಂದ ಚಿಕ್ಕಮಗಳೂರು ಕಡೆ ಹೊರಡುತ್ತಾರೆ.
ವಾಹನಗಳು ಬಾಳೆಹೊನ್ನೂರು ಸಮೀಪಿಸುತ್ತಿರುವಾಗ ಮುಖ್ಯಮಂತ್ರಿಗಳು ನೇರವಾಗಿ ಬೆಂಗಳೂರಿಗೆ ಬರಲು ಸೂಚಿಸಿದ್ದಾರೆ ಎಂದು ತಿಳಿಸುತ್ತಾರೆ. ನಾವು ಚಿಕ್ಕಮಗಳೂರಿಗೆ ಹೋಗಿಯೇ ಹೋಗಬೇಕು. ಅಲ್ಲಿ ಜನಪರ ಹೋರಾಟಗಾರರು, ಸಂಬಂಧಿಕರು, ಮಾಧ್ಯಮದವರು ಕಾಯುತ್ತಿದ್ದಾರೆ. ಅವರನ್ನು ಅಲ್ಲಿ ಕಾಯಲು ಬಿಟ್ಟು ನಾವು ಹೀಗೇ ಬೆಂಗಳೂರಿಗೆ ಹೋಗಲು ತಯಾರಿಲ್ಲ ಎಂದು ಹಠ ಹಿಡಿಯುತ್ತೇವೆ. ಇಲ್ಲಿ ಕೆಲವು ಸೂಕ್ಷ್ಮ ವಿಚಾರಳಿವೆ. ದಯವಿಟ್ಟು ಬೇಡ. ಯಾರೆಲ್ಲಾ ಬರಲು ಸಿದ್ಧರಿದ್ದಾರೋ ಅವರೆಲ್ಲರನ್ನೂ ನಾವೇ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಈ ವಿಚಾರ ಇನ್ನು ಹೆಚ್ಚು ಎಳೆದಾಡುವುದು ಬೇಡ ಎಂದು ನಾವು ಒಪ್ಪುತ್ತೇವೆ. ಇಡೀ ದಿನ ಶರವೇಗದಲ್ಲಿ ಪ್ರಯಾಣ ಮಾಡಿ ಸಂಜೆ ಹೊತ್ತಿಗೆ ಮುಖ್ಯಮಂತ್ರಿಯವರ ಕಚೇರಿಗೆ ಬಂದು ತಲುಪುತ್ತೇವೆ.
ಸಂಜೆ ಮಾಧ್ಯಮಗೋಷ್ಠಿಗೂ ಮುನ್ನ ಇಡೀ ಮಂತ್ರಿಮಂಡಲ ಮತ್ತು ಅಧಿಕಾರಿ ವರ್ಗಕ್ಕೆ ನಕ್ಸಲ್ ಕಾರ್ಯಕರ್ತರುಗಳನ್ನು ಅವರ ಹಿನ್ನೆಲೆ ಮತ್ತು ಹೋರಾಟಗಳ ಜೊತೆ ಪರಿಚಯ ಮಾಡಿಕೊಡಲಾಗುತ್ತದೆ. ತಂಡದ ಪರವಾಗಿ ಕಮಾಂಡರ್ ಲತಾ ಸುದೀರ್ಘವಾಗಿ ಮಾತನಾಡುತ್ತಾರೆ. ಅದರಲ್ಲಿ ನಾಲ್ಕು ವಿಚಾರಗಳನ್ನು ಅವರು ಸರ್ಕಾರದ ಗಮನಕ್ಕೆ ತರುತ್ತಾರೆ.
ನಕ್ಸಲರು ಮಂತ್ರಿಮಂಡಲದ ಮುಂದೆ ಇಟ್ಟ ಬೇಡಿಕೆಗಳೇನು?
ಸರ್ಕಾರಕ್ಕೆ ಧನ್ಯವಾದ ತಿಳಿಸಿದ ನಕ್ಸಲರು, “ನಾವು ಹೋರಾಟದ ಮಾರ್ಗ ಮಾತ್ರ ಬದಲಾಯಿಸುತ್ತಿದ್ದೇವೆ. ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸುತ್ತೇವೆ. ಸಮಾಜ ಎಷ್ಟೇ ಅಭಿವೃದ್ಧಿಗೊಂಡಿದೆ ಎಂದು ಹೇಳಿದರೂ ಕಾಡಿನ ಜನರ, ಅದರಲ್ಲೂ ಅಲ್ಲಿನ ಆದಿವಾಸಿ, ದಲಿತ, ಕೂಲಿ-ಕಾರ್ಮಿಕ, ಮಹಿಳೆ ಮತ್ತು ರೈತರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಕಷ್ಟದಲ್ಲಿರುವ ಮತ್ತು ಜೈಲುಗಳಲ್ಲಿರುವ ನಮ್ಮ ಸಂಗಾತಿಗಳ ಬಗ್ಗೆ ಮೃದುಧೋರಣೆ ತಾಳಬೇಕು. ವಿಕ್ರಂ ಗೌಡ ಅವರ ವಿಚಾರದಲ್ಲಿ ತನಿಖೆ ನಡೆಸಿ ನೀವು ಸತ್ಯ ಏನೆಂಬುದನ್ನು ತಿಳಿದುಕೊಳ್ಳಲೇಬೇಕು” ಎಂದು ಒತ್ತಾಯಿಸುತ್ತಾರೆ.
ಮುಖ್ಯಮಂತ್ರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ಮಾತನಾಡುತ್ತಾರೆ, ಭರವಸೆ ನೀಡುತ್ತಾರೆ. ನಂತರ ಪತ್ರಿಕಾಗೋಷ್ಠಿ ನಡೆಯುತ್ತದೆ. ಮರುದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಈಗ ಸಂಗಾತಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ.
“ಇತರೆ ರಾಜ್ಯಗಳಲ್ಲಿ ರಕ್ತಪಾತ ಮುಂದುವರೆದಿದ್ದರೆ, ಇಲ್ಲಿ ಶಾಂತಿಯುತ ಹಾಗೂ ಪ್ರಜಾತಾಂತ್ರಿಕ ವಿಧಾನದ ಮೂಲಕ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಾಗಿದೆ. ಇದೇ ನಕ್ಸಲ್ ಬಿಕ್ಕಟ್ಟಿನ ಪರಿಹಾರಕ್ಕೆ ಉತ್ತರ ಸೂಚಿಸುವ ʼಕರ್ನಾಟಕ ಮಾದರಿʼಯಾಗಿದೆ. ನಮ್ಮ ವಿನಮ್ರ ಅಭಿಪ್ರಾಯವೆಂದರೆ ಈ ಮಾದರಿಯನ್ನು ಇತರೆ ರಾಜ್ಯಗಳಿಗೂ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಮಾರ್ಪಡಿಸಿಕೊಂಡು ಬಳಕೆ ಮಾಡಿಕೊಂಡಲ್ಲಿ ಅನಗತ್ಯವಾಗಿ ನಾಶವಾಗುತ್ತಿರುವ ಅನೇಕ ಅಮೂಲ್ಯ ಜೀವಗಳನ್ನು ಉಳಿಸಿ ಸಾಮಾಜಿಕ ಒಳಿತಿಗೆ ಮರುತೊಡಗಿಸಿದಂತಾಗುತ್ತದೆ. ಈ ಕೆಲಸಕ್ಕೆ ಸಹಕರಿಸಿದ ಕಾಡಂಚಿನ ಆದಿವಸಿ ಮಹಿಳೆ, ಮೂರು ಕುಟುಂಬಗಳು ಮತ್ತು ಪೊಲೀಸ್ ಅಧಿಕಾರಿಗಳು, ಸ್ಥಳೀಯ ನಾಗರಿಕರಿಗೆ ವಿಶೇಷ ಅಭಿನಂದನೆಗಳು” ಎಂದು ನೂರ್ ಹೇಳಿದರು.
ಇದನ್ನೂ ಓದಿ ಶರಣಾದ ನಕ್ಸಲರು | ಜೀವಂತ ನೋಡುವ ಭರವಸೆ ಕಳೆದುಕೊಂಡಿದ್ದ ಕುಟುಂಬಗಳು ಹೇಳಿದ್ದೇನು?
ಸಿಎಂ ಜೊತೆ ಮಾತುಕತೆ, ಮನವಿ
“ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಭೇಟಿ ಮಾಡಿದ್ದೆವು. ಐದು ಬೇಡಿಕೆಗಳನ್ನು ನೀಡಿದ್ದೇವೆ. ತಕ್ಷಣ ಕಾನೂನು ಪ್ರಕ್ರಿಯೆ ನಡೆಸಲು ಸಮಗ್ರ ಯೋಜನೆ ರೂಪಿಸಲು ಕಾನೂನು ಇಲಾಖೆಗೆ ಪತ್ರ ಬರೆದು ಸರ್ಕಾರ ಹೇಗೆ ನೆರವಾಗಬಹುದು ಎಂದು ತಿಳಿಸಬೇಕು. ಮುಖ್ಯವಾಹಿನಿಗೆ ಬಂದಿರುವ ಎಲ್ಲರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ನಕ್ಸಲರು ಹದಿನೆಂಟು ಬೇಡಿಕೆಗಳನ್ನು ಈಡೇರಿಸಲು ಆಯಾ ಜಿಲ್ಕೆಗಳಲ್ಲಿ ಜಿಲ್ಲಾಧಿಕಾರಿಗಳ ಸಭೆ ಕರೆದು ಎಲ್ಲಾ ಕಾನೂನು ಪ್ರಕ್ರಿಯೆ ನಡೆಸಲು ನೋಡಲ್ ಆಫೀಸರ್ ನೇಮಿಸಬೇಕು. ಕೇರಳ, ತಮಿಳುನಾಡು ಮುಖ್ಯಮಂತ್ರಿಗಳಿಗೆ ಇಲ್ಲಿನ ಪ್ರಕ್ರಿಯೆ ಬಗ್ಗೆ ತಿಳಿಸಿ ನೀವೂ ಇದನ್ನೆ ಅನುಸರಿಸಿ ಎಂದು ಹೇಳುವಂತೆ ಮನವಿ ಮಾಡಿದೆವು. ಈ ಎಲ್ಲಾ ಬೇಡಿಕೆಗಳಿಗೆ ಸಿಎಂ ಒಪ್ಪಿದ್ದಾರೆ. ಇದರ ಜೊತಗೆ ವಿಕ್ರಂ ಗೌಡ ಅವರ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ತಿಳಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ” ಎಂದು ನೂರ್ ಶ್ರೀಧರ್ ತಿಳಿಸಿದರು.
“ಸಿದ್ದರಾಮಯ್ಯ ಸರ್ಕಾರ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಿರುವುದು ಬಹಳ ದಿಟ್ಟ ಹೆಜ್ಜೆ. ಕಾಡಿನಿಂದ ಜೈಲಿಗೆ ತಂದು ಹಾಕಿದ ಪಾಪಕ್ಕೆ ನಮ್ಮನ್ನು ತಳ್ಳಬಾರದು. ಅವರನ್ನು ನಾಡಿಗೆ ತಲುಪಿಸುವ ಕೆಲಸ ಮಾಡಬೇಕು. ಅದಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಬೇಕು. ಆ ನಂಬಿಕೆ ನಮಗೂ ಇದೆ. ಅದು ಸಿದ್ದರಾಮಯ್ಯ ಅವರು ಸಿಎಂ ಆಗಿರುವಾಗಲೇ ಆಗುವುದು ಮುಖ್ಯ” ಎಂದು ಬಿ ಟಿ ಲಲಿತಾನಾಯಕ್ ಹೇಳಿದರು.
ದಲಿತ ಹೋರಾಟಗಾರ ಎನ್ ವೆಂಕಟೇಶ್, ಸರ್ಕಾರದ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದರು. ಹಿಂದೆ ಮುಖ್ಯವಾಹಿನಿಗೆ ಬಂದವರು ಮತ್ತು ಈಗ ಬಂದವರಿಗೆ ಸರ್ಕಾರ ನೆರವಾಗಬೇಕು. ಅವರೆಲ್ಲ ಮತ್ತೆ ಜನಪರ ಹೋರಾಟಗಳಲ್ಲಿ ತೊಡಗುವಂತಹ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.