ಸುಮಾರು ಅರ್ಧ ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳಿಗೆ ರಾತ್ರೋರಾತ್ರಿ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ಸತೀಶ್ ಬಾಬು ಬಿನ್ ವೆಂಕಟೇಶಪ್ಪ ಎಂಬುವರು ಅರ್ಧ ಎಕರೆಯಲ್ಲಿ ಸುಮಾರು 3 ಸಾವಿರ ಸೇವಂತಿಗೆ ಗಿಡಗಳನ್ನು ಬೆಳೆದಿದ್ದಾರೆ. ಕಳೆದ ಸೋಮವಾರ ಔಷಧಿ ಸಿಂಪಡಣೆ ಮಾಡಿದ್ದರು. ಇದಾದ ಬಳಿಕ, ಎರಡ್ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ ಹೂವಿನ ಗಿಡಗಳಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಸತೀಶ್ ಬಾಬು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ.

“ಇನ್ನೇನು 15 ದಿನಗಳಲ್ಲಿ ಸ್ಯಾಂಪಲ್ ಬರ್ತಿತ್ತು. ಅಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಬೆಳೆದು ನಿಂತಿದ್ದ ಸೇಂದಿಲ್ ಸೇವಂತಿ ಹೂವಿನ ಗಿಡಗಳಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಸೇವಂತಿಗೆ ಗಿಡಗಳ ಎಲೆಗಳ ಬಣ್ಣ ಬದಲಾಗಿದ್ದು, ಒಣಗುವ ಹಂತಕ್ಕೆ ತಲುಪಿವೆ. ಯಾರೆಂಬುದು ತಿಳಿಯುತ್ತಿಲ್ಲ. ನಮ್ಮಂತ ರೈತರು ಏನು ಮಾಡಬೇಕು?” ಎನ್ನುತ್ತಾರೆ ಜಮೀನಿನ ಮಾಲೀಕ ವೆಂಕಟೇಶಪ್ಪ.
ಕಳೆನಾಶಕ ಸಿಂಪಡಣೆಯಿಂದ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಕೆಲ ಗಿಡಗಳು ಸಂಪೂರ್ಣ ಒಣಗಿ ಹೋಗಿವೆ. ಇನ್ನೇನು 15 ದಿನಗಳಲ್ಲಿ ಹೂವು ಬಿಡಬೇಕಿದ್ದ ಗಿಡಗಳು ಒಣಗುವ ಹಂತಕ್ಕೆ ತಲುಪಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಬೆಳೆ ಬೆಳೆದಿದ್ದ ರೈತ ಸತೀಶ್ ಬಾಬು ಕುಟುಂಬ ಆತಂಕದಲ್ಲಿದೆ.

ಈ ಕುರಿತು ಈದಿನ ಡಾಟ್ ಕಾಮ್ ಜತೆ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು, ʼಹೊಸಹುಡ್ಯದ ಸತೀಶ್ ಬಾಬು ಅವರ ಹೊಲದಲ್ಲಿ ಸೇವಂತಿಗೆ ಹೂ ಹಾಕಲಾಗಿದ್ದು, ಕಳೆನಾಶಕ ಸಿಂಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ಸ್ಥಳಕ್ಕೆ ಭೇಟಿ ನೀಡಿ ಗಿಡಗಳ ಮಾದರಿಯನ್ನು ಇಲಾಖೆಗೆ ಕಳಿಸಲಾಗಿದೆ. ಈ ಕುರಿತು ವಿಜ್ಞಾನಿಗಳ ವರದಿ ಬರಬೇಕಿದೆ. ಆನಂತರವಷ್ಟೇ ಸೂಕ್ತ ಕಾರಣ ತಿಳಿಯಲಿದೆʼ ಎಂದು ಹೇಳಿದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ | ಭಾರತೀಯ ಮೂಲ ಕಲೆಯ ಪೋಷಣೆ ಶ್ಲಾಘನೀಯ: ಹೈಕೋರ್ಟ್ ವಕೀಲ ಪಾವಗಡ ಶ್ರೀರಾಮ್
ಈ ಕುರಿತು ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿದ ರೈತ ಸತೀಶ್ ಬಾಬು, ʼಕಳೆದ ಬಾರಿ 1 ಎಕರೆಯಲ್ಲಿ ಇದೇ ಬೆಳೆ ಬೆಳೆದಿದ್ದೆ. ಸುಮಾರು 1 ಲಕ್ಷ ಆದಾಯ ಬಂದಿತ್ತು. ಆದರೆ, ಈ ಬಾರಿ ಯಾರೋ ದುಷ್ಕರ್ಮಿಗಳು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಬೆಳೆ ಹಾಳಾಗಿದೆ. ಗಿಡಗಳು ಬಾಡುತ್ತಿವೆ. ಕಳೆನಾಶಕ ಸಿಂಪಡಣೆಯಾದರೆ ಗಿಡಗಳು ಹೂ ಬಿಡುವುದಿಲ್ಲ. ಇದರಿಂದ ನಮಗೆ ನಾವು ನಷ್ಟದ ಭೀತಿಯಲ್ಲಿದ್ದೇವೆ. ರೈತರಿಗೆ ರೈತರೇ ವಿರೋಧಿಗಳಾಗುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲಾಖೆ ನಮ್ಮಂತಹ ರೈತರಿಗೆ ಸೂಕ್ತ ಪರಿಹಾರ ಕೊಡಬೇಕುʼ ಎಂದು ಮನವಿ ಮಾಡಿದರು.