ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಯೋಜನೆಯಲ್ಲಿ ಭೂಮಿ ಕಳೆದುಕೊಂಡು ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯಿಸಿ ಕಳೆದ 926 ದಿನಗಳಿಂದ ನಡೆಯುತ್ತಿದ್ದ ಕಾರಂಜಾ ಸಂತ್ರಸ್ತರ ಅಹೋರಾತ್ರಿ ಧರಣಿ ಶನಿವಾರ ಅಂತ್ಯಗೊಂಡಿತು.
ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಲಯ ಮುಂಭಾಗದಲ್ಲಿ ಕಾರಂಜಾ ಸಂತ್ರಸ್ತರು ನಡೆಸುತ್ತಿದ್ದ ಧರಣಿ ಸ್ಥಳದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಪ್ರತಿಭಟನಾ ನಿರತ ಸಂತ್ರಸ್ತರು ಕಬ್ಬಿನ ಹಾಲು ಕುಡಿದು ಧರಣಿ ಅಂತ್ಯಗೊಳಿಸಲಾಯಿತು.
ಕಾರಂಜಾ ನೀರಾವರಿ ಯೋಜನೆಯ ಅಡಿ ಮುಳುಗಡೆಗೊಂಡ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಭರವಸೆ ಮೇರೆಗೆ ಸಂತ್ರಸ್ತರು ಹೋರಾಟ ಹಿಂಪಡೆದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼದೀರ್ಘಕಾಲದಿಂದ ನಡೆಯುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಸಂತ್ರಸ್ತರ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲು ಸರ್ಕಾರದಿಂದ ಶೀಘ್ರದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯ ವರದಿ ಆಧರಿಸಿ ಸಂತ್ರಸ್ತರ ಬೇಡಿಕೆ ಈಡೇರಿಸಲಾಗುವುದುʼ ಎಂದು ಭರವಸೆ ನೀಡಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ, ಹಿರಿಯ ಚಿಂತಕ ಆರ್.ಕೆ.ಹುಡುಗಿ ಅವರು ಮಾತನಾಡಿದರು.
https://www.facebook.com/share/v/15nYKziJmp/
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ಮಾತನಾಡಿ,ʼಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಕಾರಂಜಾ ಹೋರಾಟ ಸಮಿತಿಯ ಸರ್ವ ಸದಸ್ಯರ ಒಪ್ಪಿಗೆ ಪಡೆದು ಅಹೋರಾತ್ರಿ ಸತ್ಯಾಗ್ರಹ ಹಿಂಪಡೆಯುತ್ತಿದ್ದೇವೆʼ ಎಂದು ಪ್ರಕಟಿಸಿದರು.
ಈ ಸುದ್ದಿ ಓದಿದ್ದೀರಾ? ಕೇರಳ | ಬಾಲಕಿ ಮೇಲೆ 64 ಕಾಮುಕರಿಂದ ಲೈಂಗಿಕ ದೌರ್ಜನ್ಯ
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಸವರಾಜ ದೇಶಮುಖ, ಪ್ರೊ. ಬಸವರಾಜ ಕುಮ್ನೂರ ಹಾಗೂ ಮುಖಂಡರಾದ ಅಬ್ದುಲ್ ಮನ್ನಾನ್ ಶೇಠ ಸೇರಿದಂತೆ ಸಮಿತಿಯ ಪ್ರಮುಖರಾದ ವಿನಯ ಮಾಳಗೆ, ರೋಹನಕುಮಾರ, ಕೇದಾರನಾಥ ಪಾಟೀಲ್, ಮಹೇಶ ಮೂಲಗೆ, ಭೀಮರೆಡ್ಡಿ ಬೆಳ್ಳೂರೆ ಕಾರಂಜಾ ಸಂತ್ರಸ್ತರು ಪಾಲ್ಗೊಂಡಿದ್ದರು.