ಬೈಕ್ ಕದ್ದಿರಬೇಕು ಎಂಬ ಶಂಕೆಯಿಂದ ದಲಿತ ವ್ಯಕ್ತಿಯೊಬ್ಬರನ್ನು ತಲೆ ಕೆಳಗಾಗಿ ನೇತಾಡಿಸಿ, ಅಮಾನುಷವಾಗಿ ಥಳಿಸಿದ ಘಟನೆ ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಗುಡಮಲಾನಿ ಪ್ರದೇಶದ ಭಕ್ರಾಪುರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ಶ್ರವಣ್ ಕುಮಾರ್ ಎಂಬ ದಲಿತ ವ್ಯಕ್ತಿ ಸಂತ್ರಸ್ತ ಯುವಕ. ಸ್ಥಳೀಯ ಮೇಳವೊಂದರಲ್ಲಿ ಬೈಕ್ ಕದ್ದ ಆರೋಪದಲ್ಲಿ ಡಿಸೆಂಬರ್ 29ರಂದು ಶ್ರವಣ್ ಕುಮಾರ್ ನನ್ನು ಬಂಧಿಸಲಾಗಿತ್ತು ಎಂದು ಬರ್ಮೆರ್ ಎಸ್ಪಿ ನರೇಂದ್ರ ಸಿಂಗ್ ಮೀನಾ ಹೇಳಿದ್ದಾರೆ.
ಕೆಲ ದಿನಗಳ ಬಳಿಕ ಅತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತ ಮತ್ತೊಂದು ಬೈಕ್ ಕದ್ದಿದ್ದಾನೆ ಎನ್ನುವುದು ಗ್ರಾಮಸ್ಥರ ಆರೋಪ. ಆದರೆ ಈ ಆರೋಪವನ್ನು ಕುಮಾರ್ ನಿರಾಕರಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ
ಶುಕ್ರವಾರ ಗ್ರಾಮಸ್ಥರು ಕುಮಾರ್ ನನ್ನು ಹಿಡಿದು ಕೈಗಳನ್ನು ಕಟ್ಟಿ ತಲೆ ಕೆಳಗಾಗಿ ಮರಕ್ಕೆ ನೇತು ಹಾಕಿ ನಿರ್ದಯವಾಗಿ ಥಳಿಸಿದ್ದಾರೆ. ಈ ಹಲ್ಲೆಯ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಗಿದ್ದು ಇದು ವೈರಲ್ ಆಗಿದೆ ಎಂದು ಮೂಲಗಳು ಹೇಳಿವೆ.
ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮತ್ತು 53 ಸೆಕೆಂಡಿನ ವಿಡಿಯೊ ತುಣುಕನ್ನು ಪೊಲೀಸರು ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಗುಡಮಲಾನಿ ಡಿವೈಎಸ್ಪಿ ಸುಖರಾಂ ಬಿಷ್ಣೋಯಿ ಹೇಳಿದ್ದಾರೆ.