ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮಹಿಬೂಬ್ ಎಂಬಾತ ನೀಡಿದ ಕಿರುಕುಳದಿಂದಾಗಿ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಬಿರಾದಾರ್ ಶನಿವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಆಟೊ ಚಾಲಕನಾಗಿರುವ ಮಹಿಬೂಬ್ ಮಹಾಲಕ್ಷ್ಮಿ ಶಾಲೆಗೆ ಹಾಗೂ ಮನೆಗೆ ಹೋಗುವಾಗ ರಸ್ತೆಯಲ್ಲಿ ಹಿಂಬಾಲಿಸುತ್ತಿದ್ದ. ನನ್ನ ಸಂಪರ್ಕಕ್ಕೆ ಬಾರದೇ ಇದ್ದರೆ, ನನ್ನ ಜೊತೆ ಮಾತನಾಡದಿದ್ದರೆ ನಿನ್ನನ್ನು ಅತ್ಯಾಚಾರ ಮಾಡುತ್ತೇನೆʼ ಎಂದು ಹೆದರಿಸಿ ಪೀಡಿಸುತ್ತಿದ್ದ. ಅದರಿಂದ ಮನನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆʼ ಎಂದು ಮೃತ ಮಹಾಲಕ್ಷ್ಮಿ ಕುಟುಂಬಸ್ಥರು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರತಿಭಟನೆ : ಆರೋಪಿ ಮಹಿಬೂಬ್‌ನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಾರ್ವಜನಿಕರು ಪಟ್ಟಣದ ಅಖಂಡೇಶ್ವರ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆದು, ಟೈರ್ ಸುಟ್ಟು ಆಕ್ರೋಶ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ದಲಿತ ವ್ಯಕ್ತಿಯನ್ನು ತಲೆಕೆಳಗಾಗಿ ನೇತಾಡಿಸಿ ಹಲ್ಲೆ
ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಶಂಕರಗೌಡ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.