ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೈಲು ಸೇರಿದ್ದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಎಂಎಲ್‌ಸಿ ಸೂರಜ್ ರೇವಣ್ಣ ಜಾಮೀನು ಪಡೆದು ಹೊರಬಂದಿದ್ದಾರೆ. ತಮ್ಮ ಪಕ್ಷದ ಮುಖಂಡರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಅಶ್ಲೀಲವಾಗಿ ನಿಂದಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಸೂರಜ್ ರೇವಣ್ಣ, “ಪಕ್ಷದೊಳಗಿದ್ದು ಮೋಸ ಮಾಡುವವರು, ಪಕ್ಷ ವಿರೋಧಿ ಕೆಲಸ ಮಾಡುವುವವರು ಸೂ**ಗಳು” ಎಂದು ಅಶ್ಲೀಲ ಮತ್ತು ಅವಾಚ್ಯವಾಗಿ ನಿಂದಿಸಿದ್ದಾರೆ.
“ನನಗೆ ನಾಯಿ ಕಣ್ಣು, ನರಿ ಕಣ್ಣು ಅಂತ ನನ್ನ ದೃಷ್ಟಿ ತೆಗೆದಿದ್ದಾರೆ. ಆದರೆ, ಕೆಟ್ಟ ಸೂ** ಕಣ್ಣು ಅಂತ ಯಾಕೆ ಹೇಳಲಿಲ್ಲ. ಮಹಿಳೆಯರ ಬಗ್ಗೆ ತಪ್ಪಾಗಿ ಮಾತನಾಡುತ್ತಿಲ್ಲ. ಪಕ್ಷದೊಳಗಿದ್ದು ಮೋಸ ಮಾಡುವವರಿಗೆ ಈ ಮಾತು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.
“ನಮ್ಮ ತಾತ ದೇವೇಗೌಡರು ಯಾವುದೇ ಜಾತಿ ನೋಡದೆ ಕೆಲಸ ಮಾಡು ಎಂದಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯದರೂ ನನ್ನ ಗಮನಕ್ಕೆ ತನ್ನಿ, ನಾನು ನಿಮಗಾಗಿ ಕೆಲಸ ಮಾಡುತ್ತೇನೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಲಾಸ್ ಏಂಜಲೀಸ್ ಕಾಡ್ಗಿಚ್ಚು: ಜಗತ್ತು ಕಲಿಯಬೇಕಾದ ಪಾಠವೇನು?
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ತನ್ನ ಕಾಮತೃಷೆ ತೀರಿಸಿಕೊಳ್ಳಲು ಹೆದರಿಸಿ, ಬೆದರಿಸಿ, ಆಮಿಷವೊಡ್ಡಿ ಜೆಡಿಎಸ್ ಕಾರ್ಯಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಜ್ವಲ್ ರೇವಣ್ಣನನ್ನು ಬಂಧಿಸಲಾಗಿದೆ. ಆತ ಜೈಲಿನಲ್ಲಿದ್ದಾನೆ. ಆ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನೂ ಬಂಧಿಸಲಾಗಿತ್ತು. ಅವರಿಗೆ ಜಾಮೀನು ನೀಡಲಾಗಿದೆ. ಇನ್ನು, ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೂರಜ್ ರೇವಣ್ಣನನ್ನು ಬಂಧಿಸಲಾಗಿತ್ತು. ಆತನಿಗೂ ಜಾಮೀನು ನೀಡಲಾಗಿದೆ.