ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಜ್ಞಾನದಿಂದ ವಂಚಿತರಾಗಬಾರದು. ಭಾಷೆ ದೇಶದ ಗಡಿ ದಾಟಿ ಸ್ನೇಹದ ಸೇತುವೆಯಾಗಬೇಕು. ಭಾಷಾಭಿಮಾನದ ಹೆಸರಲ್ಲಿ ಕಂದಕ ಸೃಷ್ಟಿಸಬಾರದು ಎಂದು ಕೊಪ್ಪಳದ ವಿಕೆಕೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೊ. ಬಿ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಳಲು, ಮಾಗಳ ಮತ್ತು ಹಿರೇಹಡಗಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಪರೀಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದವರು.
“ಕಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಇಂಗ್ಲಿಷ್ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಆಂಗ್ಲ ಭಾಷೆ ಹೆಚ್ಚಿನ ಜ್ಞಾನಕ್ಕೆ, ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡಲು ಸಹಾಯ ಆಗಬೇಕು. ಇಂಗ್ಲಿಷ್ ಕಲಿಯುವಿಕೆಯಿಂದ ನಿಮ್ಮ ಮನೆಯ ಮನದ ಭಾಷೆಯನ್ನೂ ನೀವು ಮರೆಯಬಾರದು” ಎಂದು ಕಿವಿ ಮಾತು ಹೇಳಿದರು.

ಹಿರೇಹಡಗಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೊ. ಪ್ರಕಾಶ್ ಕಲ್ಲನಗೌಡ್ರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಗ್ರಾಮೀಣ ಕಾಲೇಜುಗಳಲ್ಲಿನ ಫಲಿತಾಂಶ ಸುಧಾರಣೆಯ ಕ್ರಮವಾಗಿ ಈ ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರ ಆಯೋಜಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ: ರಾಜ ನಾಯ್ಕ
ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಎಂ. ರೇವಣಸಿದ್ಧಪ್ಪ, ಪರಶುರಾಮ ನಾಗೋಜಿ, ಎಚ್. ನಾಗರಾಜ, ತಾರಾಸಿಂಗ್ ಇದ್ದರು. ಜತೆಗೆ ಹೊಳಲು, ಹಿರೇಹಡಗಲಿ ಹಾಗೂ ಮಾಗಳ ಸರ್ಕಾರಿ ಪದವಿಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
