ದಲಿತ ವ್ಯಕ್ತಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ತೊಂಡೆಭಾವಿ ಹೋಬಳಿಯ ಬೆಳ್ಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ.
ವೈಕುಂಠ ಏಕಾದಶಿ ಹಿನ್ನೆಲೆ ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದೆ. ಜಾತಿಯ ಕಾರಣಕ್ಕೆ ದೇವಾಲಯ ಪ್ರವೇಶ ದ್ವಾರದಲ್ಲೇ ಕೆಲ ಗ್ರಾಮಸ್ಥರು ನನ್ನನ್ನು ತಡೆದು ವಾಪಾಸ್ ಕಳಿಸಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಗೋಪಾಲಪ್ಪ ಎಂಬುವರು ಮಚೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗ್ರಾಮದ ತಿಮ್ಮಾರೆಡ್ಡಿ, ಭಾಸ್ಕರರೆಡ್ಡಿ, ವೆಂಕಟೇಶ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಎಂಬುವರ ಮೇಲೆ ದೂರು ದಾಖಲಾಗಿದೆ.
ಈ ಕುರಿತು ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್ ಪತ್ರಿ, ವೈಕುಂಠ ಏಕಾದಶಿ ಹಿನ್ನೆಲೆ ಎಸ್ಟಿ ಸಮುದಾಯದ ಗೋಪಾಲಪ್ಪ ಎಂಬುವರು ದೇವಾಲಯಕ್ಕೆ ತೆರಳಿದ್ದಾರೆ. ಆಗ ಸ್ಥಳದಲ್ಲಿದ್ದ ಕೆಲ ಪಡ್ಡೆ ಹುಡುಗರು ವ್ಯಕ್ತಿಯನ್ನು ತಡೆದು ವಾಪಾಸ್ ಕಳಿಸಿದ್ದಾರೆ. ಗ್ರಾಮದ ನಾಲ್ಕು ಜನರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಈ ಕುರಿತು ಈಗಾಗಲೇ ಶಾಂತಿ ಸಭೆ ನಡೆಸಲಾಗಿದ್ದು, ಗೋಪಾಲಪ್ಪ ಅವರನ್ನು ದೇವಾಲಯದ ಒಳಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದರು.