ದಲಿತ ವ್ಯಕ್ತಿಯ ಕೈಯಿಂದ ‘ಪ್ರಸಾದ’ ತೆಗೆದುಕೊಂಡು, ತಿಂದಿದ್ದಕ್ಕಾಗಿ ಸುಮಾರು 20 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಛತ್ತರ್‌ಪುರ ಜಿಲ್ಲೆಯ ಅತ್ರಾರ್ ಗ್ರಾಮದಲ್ಲಿ ಈ ಜಾತಿ ದೌರ್ಜನ್ಯದ ಘಟನೆ ನಡೆದಿದೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮದ ಸರಪಂಚ್ ತಮಗೆ ಬಹಿಷ್ಕಾರ ಹಾಕಿರುವುದಾಗಿ ಆರೋಪಿಸಿದ್ದಾರೆ.
ಗ್ರಾಮದ ತಲೈಯಾ ಹನುಮಾನ್ ದೇವಸ್ಥಾನದಲ್ಲಿ ದಲಿತ ಯುವಕ ಜಗತ್ ಅಹಿರ್ವಾರ್ ಅವರು ದೇವರಿಗೆ ‘ಮಗಜ್ ಲಡ್ಡು’ಅನ್ನು ಅರ್ಪಿಸಿ, ಪ್ರಸಾದವಾಗಿ ದೇವಸ್ಥಾನದಲ್ಲಿದ್ದ ಭಕ್ತರಿಗೆ ಹಂಚಿದ್ದಾರೆ.
ಆ ಪ್ರಸಾದವನ್ನು ಬ್ರಾಹ್ಮಣರು ಮತ್ತು ಇತರ ಪ್ರಬಲ ಜಾತಿಯ 20ಕ್ಕೂ ಹೆಚ್ಚು ಮಂದಿ, ಪಡೆದುಕೊಂಡು ಸೇವಿಸಿದ್ದಾರೆ. ದಲಿತ ಕೊಟ್ಟ ಪ್ರಸಾವನ್ನು ತಿಂದಿದ್ದಾರೆಂಬ ವಿಷಯ ಗ್ರಾಮದಲ್ಲಿ ಮಾರಕ ಸೋಂಕಿನಿಂತೆ ಹರಡಿದೆ. ಆ ಎಲ್ಲ 20 ಮಂದಿಯ ಕುಟುಂಬಗಳನ್ನು ಗ್ರಾಮದ ಸರಪಂಚ್ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.
“ತಮಗೆ ಬಹಿಷ್ಕಾರ ಹಾಕಿದಾಗಿನಿಂದ ತಮ್ಮನ್ನು ಮದುವೆ ಮತ್ತು ಇತರ ಸಾಮಾಜಿಕ ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಒಳಗೊಳ್ಳುತ್ತಿಲ್ಲ” ಎಂದು ಸಂತ್ರಸ್ತ ಕುಟುಂಬಗಳು ಆರೋಪಿಸಿವೆ.
ಈ ವರದಿ ಓದಿದ್ದೀರಾ?: ಜಾತಿ ದೌರ್ಜನ್ಯ | ಸಿಎಂ ತವರಲ್ಲೇ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ದೂರು ದಾಖಲಿಸಿಕೊಂಡಿರುವ ಎಸ್‌ಪಿ ಆಗಮ್ ಜೈನ್, “ನಾವು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಗಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸಂತ್ರಸ್ತರು ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ. ಸ್ಥಳೀಯರ ಅಧಿಕಾರಿಗಳು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಆದರೂ, ಸಮಸ್ಯೆ ಬಗೆಹರಿದಿಲ್ಲ. ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ವರದಿಯಾಗಿದೆ.