ಸಾಲ ಮರುಪಾವತಿ ಮಾಡಿಲ್ಲವೆಂದು ರೈತರೊಬ್ಬರ ಮನೆಯನ್ನು ‘ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್’ನ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮನೆಯನ್ನು ‘ಮುಟ್ಟುಗೋಲು’ ಹಾಕಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಾಗನೂರು ಗ್ರಾಮದ ರೈತ ಸೈದಪ್ಪ ಗಡಾಡಿ ಅವರ ಮನೆಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸೈದಪ್ಪ ಅವರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಬ್ಯಾಂಕ್ ಧೋರಣೆಯಿಂದ ಸೈದಪ್ಪ ಅವರು ತನ್ನ ಪತ್ನಿ ಮತ್ತು ಮಗು ಸೇರಿದಂತೆ ಕುಟುಂಬದ 7 ಮಂದಿ ಬೀದಿಪಾಲಾಗಿದ್ದಾರೆ. ಕುಟುಂಬವು ಬಯಲಿನಲ್ಲಿಯೇ ಬದುಕುವಂತಾಗಿದೆ.
ರೈತ ಸುಮಾರು ಒಂದೂವರೆ ವರ್ಷಗಳಿಂದ ಕಂತು (ಇಎಂಐ) ಪಾವತಿಸಿಲ್ಲ ಎಂದು ಬ್ಯಾಂಕ್ ಆರೋಪಿಸಿದೆ. ಆದರೆ, ರೈತ ತಾವು ಪಡೆದಿದ್ದ 5 ಲಕ್ಷ ರೂ. ಸಾಲದಲ್ಲಿ 3.16 ಲಕ್ಷ ರೂ.ಗಳವರೆಗೆ ಮರುಪಾವತಿಸಿದ್ದಾರೆ. ಈ ನಡುವೆ ತಾವು ಸಾಕಿದ್ದ ದನಗಳು ಸಾವನ್ನಪ್ಪಿದ್ದರಿಂದ ನಷ್ಟ ಅನಭವಿಸಿದ್ದರು. ಆ ವೇಳೆ, ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇತ್ತೀಚೆಗೆ ಮತ್ತೆ ಇಎಂಐ ಪಾವತಿಸಲು ಪುನರಾರಂಭಿದ್ದೇನೆ ಎಂದು ಸಂತ್ರಸ್ತ ರೈತ ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿ ದೌರ್ಜನ್ಯ | ಸಿಎಂ ತವರಲ್ಲೇ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
“ನಾನು ಕಂತುಗಳನ್ನು ಪಾವತಿಸಿದ್ದೇನೆ. ಆದರೆ, ಬ್ಯಾಂಕ್‌ನ ಸಿಬ್ಬಂದಿ ಆ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡದೆ, ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಸೈದಪ್ಪ ಆರೋಪಿಸಿದ್ದಾರೆ.
“ತಮ್ಮ ಕಂತಿನ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ಪದೇ ಪದೇ ಮನವಿ ಮಾಡಿದರೂ, ಬ್ಯಾಂಕ್ ಅಧಿಕಾರಿಗಳು ಸಮಸ್ಯೆಯನ್ನು ಪರಿಹಸಲಿಲ್ಲ” ಎಂದು ರೈತ ಹೇಳಿದ್ದಾರೆ. ಆದರೆ, ಅವರ ಆರೋಪವನ್ನು ಬ್ಯಾಂಕ್ ನಿರಾಕರಿಸಿದೆ.