ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು, ಯಶಸ್ವಿಯಾದಲ್ಲಿ ಕಾಂಗ್ರೆಸ್ ಪಕ್ಷದವರೇ ಅಧ್ಯಕ್ಷರಾಗುವ ಸಾಧ್ಯತೆಗಳಿವೆ.
ಒಟ್ಟು 27 ಮಂದಿ ಸದಸ್ಯ ಬಲವಿರುವ ಪುರಸಭೆಯಲ್ಲಿ ಬಿಜೆಪಿಯ 16, ಕಾಂಗ್ರೆಸ್‌ನ 9 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಕೊನೆಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಒಬ್ಬ ಪಕ್ಷೇತರ ಸದಸ್ಯ ಸೇರಿದಂತೆ ಒಟ್ಟು 6 ಮಂದಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿವೆ.
ಕಳೆದ ವಿಧಾನಸಭಾ ಚುನಾವಣೆಯ ನಂತರ ರಾಜ್ಯ ಮತ್ತು ಜಿಲ್ಲೆಯ ಬಣ ಬಡಿದಾಟದಲ್ಲಿ ತಾಲೂಕಿನಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಮಾಜಿ ಶಾಸಕರ ಗುಂಪು ಒಂದೆಡೆಯಾದರೆ, ಮಂಡಲ ಅಧ್ಯಕ್ಷರ ಗುಂಪು ಇನ್ನೊಂದೆಡೆ ಬೇರ್ಪಟ್ಟಿದೆ. ಇವರಿಬ್ಬರ ಗೊಂದಲದಿಂದಾಗಿ ಬಿಜೆಪಿ ಪುರಸಭೆಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬಹುದೆಂಬ ಮಾತು ಹರಿದಾಡುತ್ತಿದೆ.
ಎರಡು ಗುಂಪುಗಳನ್ನು ಒಂದಡೆ ಸೇರಿಸುವ ನಾಯಕರಿಲ್ಲದೆ, ಪುರಸಭೆಯಲ್ಲಿ ಬಹುಮತವಿದ್ದರೂ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡುವ ಅನಿವಾರ್ಯತೆ ಎದುರಾದರೆ ಅಚ್ಚರಿ ಪಡಬೇಕಿಲ್ಲ.
ಪುರಸಭೆಯ ಉಳಿದ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ‘ಬ’ ವರ್ಗದ ಮಹಿಳೆಗೆ ಮೀಸಲಿವೆ. ಕಾಂಗ್ರೆಸ್ ಸದಸ್ಯರೊಬ್ಬರು ನ್ಯಾಯಾಲಯದ ಕಟ್ಟೆ ಏರಿದ್ದರಿಂದ ಚುನಾವಣೆ ಮೂಂದೂಡಲಾಗಿತ್ತು. ನ್ಯಾಯಾಲಯ ಅರ್ಜಿದಾರರ ಮತ್ತು ಸರ್ಕಾರದ ವಾದ ಆಲಿಸಿ ಕೊನೆಗೆ ಆಗಸ್ಟ್ ತಿಂಗಳಲ್ಲಿನ ಮೀಸಲಾತಿಯನ್ವಯ ಇದೇ ತಿಂಗಳು 13ರಂದು ಚುನಾವಣೆಗೆ ಮೂಹರ್ತ ನಿಗದಿಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಇಂಗ್ಲಿಷ್ ಜ್ಞಾನದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು: ಪ್ರೊ. ಬಿ ಈಶ್ವರಪ್ಪ
ರಾಮದುರ್ಗ ಪುರಸಭೆಯಲ್ಲಿ ಕಳೆದ ಎರಡು ಅವಧಿಯಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿಗೆ ಈ ಬಾರಿ ಅಧಿಕಾರ ದೊರೆಯುವುದು ಅಷ್ಟು ಸುಲಭ ಮಾತಲ್ಲ. ಬಿಜೆಪಿ ಬಣ ಬಡಿದಾಟದ ಲಾಭ ಪಡೆದು ಶಾಸಕ ಅಶೋಕ ಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದುಕೊಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಆರು ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.