ಭಾರತ ಅಭಿವೃದ್ಧಿಯಾಗಬೇಕಾದರೆ ಬಡವರಿಗೆ ಅನ್ನ ಹಾಗೂ ಅಕ್ಷರ(ಶಿಕ್ಷಣ)ವನ್ನು ಹರಡಬೇಕು. ಪೂಜಾರಿ, ಪೌರೋಹಿತ್ಯವನ್ನು ನಿರ್ಮೂಲನೆ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಅಭಿಪ್ರಾಯಪಟ್ಟರು.
ಹಾವೇರಿ ನಗರದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕದಿಂದ ಆಯೋಜಿಸಿದ್ದ ಯುವಜನರ ಸ್ಪೂರ್ತಿ, ಮಹಾ ಮಾನವತಾವಾದಿ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಯುವಜನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಾನವೀಯತೆಯನ್ನು ಮರೆತ ಧರ್ಮಗಳು ಸಂಘರ್ಷಕ್ಕ ದಾರಿ ಮಾಡಿಕೊಡುತ್ತಿವೆ. ಚಿಕಾಗೋ ಸಮ್ಮೇಳನದಲ್ಲಿ ಸಹೋದರ-ಸಹೋದರಿಯರೆ ಎನ್ನುವ ಮೂಲಕ ಇಡೀ ಭಾರತ ದೇಶದ ಬೌದ್ಧಿಕ ಶ್ರೀಮಂತಿಕೆ ತೆರೆದಿಟ್ಟ ವಿವೇಕಾನಂದರನ್ನು ವಿದ್ಯಾರ್ಥಿ-ಯುವಜನರು ಆದರ್ಶವಾಗಿ ತೆಗೆದುಕೊಂಡು ಅವರ ವಿಚಾರಗಳನ್ನು ಅಭ್ಯಾಸ ಮಾಡಬೇಕು” ಎಂದರು.
“ಕುವೆಂಪು ಹಾಗೂ ವಿವೇಕಾನಂದರ ವಿಚಾರಧಾರೆಗಳು ಒಂದೇ ಆಗಿದ್ದವು. ವಿವೇಕಾನಂದರ ಹೆಸರಲ್ಲಿಯೂ ಇಂದು ಕೋಮುಗಲಭೆ, ಧರ್ಮಗಳ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಕೆಲ ಮೂಲಭೂತವಾದಿಗಳು ಹೊರಟಿದ್ದಾರೆ. ಮೂಲಭೂತವಾದಿಗಳು ವಿವೇಕಾನಂದರನ್ನು ಕೇವಲ ಧರ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಹಾಗಾಗಿ ಇಂದಿನ ಯುವಜನತೆ ವಿವೇಕಾನಂದರ ನಿಜ ಇತಿಹಾಸವನ್ನು ಓದುವ ಮೂಲಕ ಮೂಲಭೂತವಾದಿಗಳಿಂದ ಅವರ ಸಿದ್ಧಾಂತಗಳನ್ನು ಬಿಡುಗಡೆಗೊಳಿಸಿ ಸೌಹಾರ್ದತೆಯನ್ನು ಕಾಪಾಡಬೇಕಿದೆ” ಎಂದು ಯುವಜನರನ್ನು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಹಾವೇರಿ | ಎತ್ತಿನಗಾಡಿಗೆ ಬೈಕ್ ಡಿಕ್ಕಿ ; ತಾಯಿ ಮಗ ಸ್ಥಳದಲ್ಲೇ ಸಾವು
ಕಾರ್ಯಕ್ರಮದಲ್ಲಿ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಮುತ್ತುರಾಜ್ ದೊಡ್ಡಮನಿ, ತಾಲೂಕು ಅಧ್ಯಕ್ಷ ಸುಲೆಮಾನ್ ಮತ್ತಿಹಳ್ಳಿ, ಹಾಸ್ಟೆಲ್ ಘಟಕ ಅಧ್ಯಕ್ಷ ಪ್ರಜ್ವಲ್ ಹರಿಜನ, ಮುಖಂಡರಾದ ವಿರೂಪಾಕ್ಷ ಕೆ, ಧನುಷ್ ದೊಡ್ಡಮನಿ, ತೇಜಸ್ ಎನ್ ಡಿ, ಮನು ಕೆ, ಅಜೇಯ ಎಚ್, ಸಂಜೀವ್ ಪಾಟೀಲ್, ಪ್ರಕಾಶ್ ಕೆ ಆರ್, ನಾಗರಾಜ ಎಲ್, ನವೀನ ಲಮಾಣಿ, ವಿನಾಯಕ ಅಸುಂಡಿ, ರಘು ಎಲ್, ಪುನೀತ್ ಲಮಾಣಿ, ಸಿಬ್ಬಂದಿಗಳಾದ ವೆಂಕಟೇಶ ಕೊರಗರ, ರವಿ ಹಾವೇರಿ, ಫಕೀರಪ್ಪ ಭಜಂತ್ರಿ ಇದ್ದರು.
