ಮೋದಿಗೆ ದೆಹಲಿ ಗೆಲ್ಲುವುದು ಪ್ರತಿಷ್ಠೆಯ ವಿಷಯ; ಕೇಜ್ರಿವಾಲ್ ಕೋಟೆ ಭೇದಿಸುವರೇ ಪ್ರಧಾನಿ?

Date:

Advertisements

ಭಾರತದ ಹೃದಯ ಭಾಗ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆಬ್ರವರಿ 5ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿಯನ್ನು ಕಳೆದ 11 ವರ್ಷಗಳಿಂದ ಕೇಜ್ರಿವಾಲ್ ಭದ್ರವಾಗಿ ಹಿಡಿದುಕೊಂಡಿದ್ದಾರೆ. ಇದೇ ಸಮಯದಲ್ಲಿ ಕೇಂದ್ರದ ಅಧಿಕಾರ ಹಿಡಿದ ಮೋದಿ ಅವರೂ ದೆಹಲಿಯಲ್ಲಿ ನೆಲೆಸಿದ್ದಾರೆ. ದೆಹಲಿಯನ್ನು ಎಎಪಿಯಿಂದ ಕಸಿದುಕೊಂಡು ಬಿಜೆಪಿಗೆ ಕೊಡಲು ಮೋದಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಆದರೂ, ಈವರೆಗೆ ಅದು ಸಾಧ್ಯವಾಗಿಲ್ಲ. ದೇಶವನ್ನೇ ಗೆಲ್ಲುತ್ತೇನೆ, ನಾನೇ ವಿಶ್ವಗುರು ಎನ್ನುತ್ತಿರುವ ಮೋದಿ ಅವರಿಗೆ ತಮ್ಮ ಆಡಳಿತ ಕೇಂದ್ರವಾಗಿರುವ ದೆಹಲಿಯನ್ನು ಗೆಲ್ಲಲಾಗಿಲ್ಲ. ಈ ಬಾರಿಯಾದರೂ ಗೆಲ್ಲಬೇಕೆಂದು ಮೋದಿ ಹವಣಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತು ಮೋದಿ ನಡುವೆ ಆಕ್ರಮಣಕಾರಿ ಹೋರಾಟ ನಡೆಯುತ್ತಿದೆ.

70 ಶಾಸಕರ ವಿಧಾನಸಭೆಯನ್ನು ಹೊಂದಿರುವ ದೆಹಲಿಯನ್ನು ಬಿಜೆಪಿ-ಎಎಪಿ ಯುದ್ಧಭೂಮಿಯನ್ನಾಗಿ ಮಾಡಿಕೊಂಡಿವೆ. ಪೋಸ್ಟರ್‌ಗಳು ರಾರಾಜಿಸುತ್ತಿವೆ. ಮೆರವಣಿಗೆಗಳು, ಸಮಾವೇಶಗಳು ನಡೆಯುತ್ತಿವೆ. ಎಎಪಿ ವಿರುದ್ಧ ಮೋದಿ ಭಾರೀ ಆರೋಪಗಳನ್ನು ಮಾಡುತ್ತಿದ್ದಾರೆ. ವಾಗ್ದಾಳಿ ನಡೆಸುತ್ತಿದ್ದಾರೆ. ಎಎಪಿ ಕೂಡ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡತ್ತಲೇ, ತನ್ನ ಜನಪರ ನೀತಿಗಳನ್ನು ಪ್ರಚಾರ ಮಾಡುತ್ತಿದೆ. ಈ ಎರಡೂ ಪಕ್ಷಗಳ ನಡುವೆ ಕಾಂಗ್ರೆಸ್‌, ತನ್ನ ಶಕ್ತಿಯನ್ನು ತೋರಿಸಲು, ಕಳೆದುಕೊಂಡಿರುವ ನೆಲೆಯನ್ನು ಮರಳಿ ಪಡೆಯಲು ತಂತ್ರ ರೂಪಿಸುತ್ತಿದೆ. ತನ್ನ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದೆ.

ಕಳೆದ 2 ಸರ್ಕಾರಗಳ ಅವಧಿಯಲ್ಲಿ ಎಎಪಿ ಉತ್ತಮ ಕೆಲಸಗಳನ್ನು ಮಾಡಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದಾಗ್ಯೂ, ದೆಹಲಿಯ ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು, ಉದ್ಯಾನವನಗಳು ಹಾಗೂ ಆಟದ ಮೈದಾನಗಳು ನಾನಾ ರೀತಿಯ ಸಮಸ್ಯೆಯಲ್ಲಿವೆ. ಯುಮುನಾ ನದಿ ಕಲುಷಿತಗೊಂಡಿದೆ. ಅಪರಾಧಗಳು ಹೆಚ್ಚುತ್ತಿವೆ. ಮಹಿಳೆಯರು ರಾತ್ರಿ ವೇಳೆ ಒಂಟಿಯಾಗಿ ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಜೊತೆಗೆ, ಚಳಿಗಾಲದ ಸಮಯದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ನಗರದ 3 ಕೋಟಿ ಜನರು ಉಸಿರಾಟ ಸಮಸ್ಯೆ ಆತಂಕ ಎದುರಿಸುತ್ತಿದ್ದಾರೆ. ಹಲವರು ದೆಹಲಿ ತೊರೆಯಲು ಎದುರು ನೋಡುತ್ತಿದ್ದಾರೆ.

Advertisements

ಆದರೆ, ಈ ವಿಚಾರಗಳ ಬಗ್ಗೆ ಆಡಳಿತ ಪಕ್ಷವಾಗಲೀ, ಪ್ರತಿಸ್ಪರ್ಧಿ ಪಕ್ಷಗಳಾಗಲೀ ಹೆಚ್ಚು ಮಾತನಾಡುತ್ತಿಲ್ಲ. ಅದರಲ್ಲೂ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿರುವ ಬಿಜೆಪಿ ದೆಹಲಿಯ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿ, ಆಡಳಿತಾರೂಢ ಎಎಪಿ ವಿರುದ್ಧ ಕೆಟ್ಟ-ಕೊಳಲು ಪ್ರಚಾರಗಳನ್ನು ಮಾಡುವಲ್ಲಿ ನಿರತವಾಗಿದೆ. ಈ ಚುನಾವಣೆಯ ಹೋರಾಟ ಪಕ್ಷಗಳ ನಡುವೆಯಲ್ಲ. ಇಬ್ಬರು ವ್ಯಕ್ತಿಗಳ (ಮೋದಿ-ಕೇಜ್ರಿವಾಲ್) ನಡುವೆ ನಡೆಯುತ್ತಿದೆ ಎಂದು ಬಿಂಬಿತವಾಗಿದೆ. ದೆಹಲಿಯಲ್ಲಿ ಸ್ಥಳೀಯ ನಾಯಕತ್ವ ಹೊಂದಿಲ್ಲದ ಬಿಜೆಪಿ, ಪ್ರಧಾನಿ ಮೋದಿ ಮೇಲೆ ಅವಲಂಬಿತವಾಗಿದೆ.

ಬಿಜೆಪಿ ನಾಯಕರು ದೆಹಲಿ ಚುನಾವಣೆಯನ್ನು ‘ಮಾಡು ಇಲ್ಲವೇ ಮಡಿ’ ಎಂಬಂತೆ ನೋಡುತ್ತಿದ್ದಾರೆ. ಏನೇ ಆದರೂ, ಏನನ್ನಾದರೂ ಮಾಡಿ ದೆಹಲಿಯನ್ನು ವಶಕ್ಕೆ ಪಡೆಯಬೇಕೆಂದು ಬಿಜೆಪಿಗರು ನಿರ್ಧರಿಸಿದ್ದಾರೆ. ಇತರ ಪಕ್ಷಗಳನ್ನು ತೊರೆದು ಬಿಜೆಪಿ ಬಂದವರಿಗೆ ಮತ್ತು ತನ್ನದೇ ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೊಂದಿಲ್ಲದ ಬಿಜೆಪಿ, ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಮಂತ್ರ ಪಠಿಸುತ್ತಿದೆ.

ಈಗಾಗಲೇ, ಕೇಂದ್ರದ ಮೋದಿ ಸರ್ಕಾರವು ಲೆಫ್ಟಿನೆಂಟ್ ಗವರ್ನರ್‌ ಮೂಲಕ ಎಎಪಿ ಸರ್ಕಾರದ ಅಧಿಕಾರದ ಮೇಲೆ ಕೊಕ್ಕೆ ಹಾಕುತ್ತಿದೆ. ಮಹತ್ವದ ಅಧಿಕಾರಗಳನ್ನು ಕಸಿದುಕೊಂಡಿದೆ. ಆದರೂ, ದೆಹಲಿಯ ಎಲ್ಲ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಾಷ್ಟ್ರ ರಾಜಧಾನಿಯನ್ನು ಗೆಲ್ಲಬೇಕೆಂದು ಎಲ್ಲ ಪ್ರಯತ್ನಗಳನ್ನು ಮಾಡುತ್ತಿಲ್ಲ.

ಅಂದಹಾಗೆ, ಕಳೆದ 27 ವರ್ಷಗಳಿಂದ ಬಿಜೆಪಿ ದೆಹಲಿಯಲ್ಲಿ ಅಧಿಕಾರ ರಚಿಸಲು ಸಾಧ್ಯವಾಗಿಲ್ಲ. 2014ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಬ್ಬರದ ಭಾಷಣ ಮಾಡಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ/ಬಿಜೆಪಿ ದೆಹಲಿಯನ್ನೂ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ, ಅದೇ ಸಮಯದಲ್ಲಿ, ಅದೇ ಭ್ರಷ್ಟಾಚಾರದ ವಿರುದ್ಧ ಇನ್ನೂ ಬಲಿಷ್ಠವಾಗಿ ಹೋರಾಟ ರೂಪಿಸಿ, ಅದೇ ಹೋರಾಟದೊಂದಿಗೆ ತೇಲಿಕೊಂಡು ಕೇಜ್ರಿವಾಲ್ ದೆಹಲಿಯ ಗದ್ದುಗೆ ಹಿಡಿದರು. ಹೀಗಾಗಿ, ಮೋದಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮುಳ್ಳಾಗಿ ಪರಿಣಮಿಸಿದ್ದಾರೆ. ಅವರ ಜನಪ್ರಿಯತೆ ಬಿಜೆಪಿಗೆ ಅರಗಿಸಿಕೊಳ್ಳಲಾದ ತುತ್ತಾಗಿದೆ.

ದೆಹಲಿ ಜನರು ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಭಾರೀ ಬಹುಮತ ನೀಡುತ್ತಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ದೆಹಲಿಯಲ್ಲಿ ಬಿಜೆಪಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೆ, ವಿಧಾನಸಭೆಯಲ್ಲಿ ಬಿಜೆಪಿಯ ಆಟ ನಡೆಯುತ್ತಿಲ್ಲ. ಅದೇ ಜನರು ವಿಧಾನಸಭೆಗೆ ಎಎಪಿಯನ್ನು ಅಷ್ಟೇ ಬಹುಮತದೊಂದಿಗೆ ಗೆಲ್ಲಿಸುತ್ತಿದ್ದಾರೆ.

ದೆಹಲಿ ಮಾದರಿಯನ್ನು ಬಳಸಿಕೊಂಡು ಬಿಜೆಪಿಗೆ ಸರಿಸಾಠಿಯಾಗಿ ಕೇಜ್ರಿವಾಲ್ ಬೆಳೆಯುತ್ತಿದ್ದಾರೆ. ಕೇಜ್ರಿವಾಲ್ – ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿದ್ದಾರೆ. 117 ಶಾಸಕರ ಸಂಖ್ಯಾಬಲ ಹೊಂದಿರುವ ಪಂಬಾಜ್‌ನಲ್ಲಿ 92 ಸ್ಥಾನಗಳನ್ನು ಗೆದ್ದು ಎಎಪಿ ಸರ್ಕಾರ ರಚಿಸಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನೂ ಪಡೆದಿದೆ. ಎಎಪಿ, ಅದರಲ್ಲೂ ಕೇಜ್ರಿವಾಲ್ ಬೆಳವಣಿಗೆಯ ಸಾಮರ್ಥ್ಯವು ಬಿಜೆಪಿಯನ್ನು ಗಂಭೀರವಾಗಿ ಕಾಡುತ್ತಿದೆ. ರಾಷ್ಟ್ರವ್ಯಾಪಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಕೇಜ್ರಿವಾಲ್, ಮೋದಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು: ಜಗತ್ತು ಕಲಿಯಬೇಕಾದ ಪಾಠವೇನು?

ಎಎಪಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸ್ಥಾನವನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ನಿಂದ ತೆರವಾಗುತ್ತಿರುವ ಸ್ಥಾನಗಳನ್ನು ಎಎಪಿ ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ, ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಬದಲಿಗೆ ಕೇಜ್ರಿವಾಲ್ ಅವರೊಂದಿಗೆ ವ್ಯವಹರಿಸಲು ಮುಂದಾಗಿವೆ. ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿ, ಸಂತ್ರಸ್ತನಂತೆ ಕಾಣಿಸಿಕೊಳ್ಳುತ್ತಿರುವ ಕೇಜ್ರಿವಾಲ್‌ಗೆ ದೆಹಲಿ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ, ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ಅಖಿಲೇಶ್ ಯಾದವ್ ಬೆಂಬಲ ನೀಡಿದ್ದಾರೆ.

ಪ್ರಮುಖ ಮಾಧ್ಯಮಗಳ ಕೇಂದ್ರವೂ ಆಗಿರುವ ದೆಹಲಿಯಲ್ಲಿ ಮಾಧ್ಯಮಗಳ ಚಿತ್ತವನ್ನು ತಮ್ಮತ್ತ ಇರಿಸಿಕೊಳ್ಳಲು ಕೇಜ್ರಿವಾಲ್ ಎಲ್ಲ ರೀತಿಯ ತಂತ್ರಗಳನ್ನು ಎಣೆಯುತ್ತಿದ್ದಾರೆ. ಅವರ ಪ್ರಚಾರದ ಪ್ರವೃತ್ತಿಯನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ, ಕೇಜ್ರಿವಾಲ್ ಅವರು ಆಡಂಬರವಿಲ್ಲದ ಜೀವನಶೈಲಿಯು ದೆಹಲಿಯಲ್ಲಿ ಮತ್ತಷ್ಟು ಸ್ವೀಕಾರಾರ್ಹತೆಯನ್ನು ಪಡೆದಿದೆ. ಆದಾಗ್ಯೂ, ಭ್ರಷ್ಟಾಚಾರ ಆರೋಪ ಮತ್ತು ಜೈಲಿಗೆ ಹೋಗಿ ಬಂದದ್ದು ಕೇಜ್ರಿವಾಲ್ ಜನಪ್ರಿಯತೆಯನ್ನು ಕುಸಿಯುವಂತೆ ಮಾಡುತ್ತದೆ ಎಂದು ಬಿಜೆಪಿ ಎಣಿಸುತ್ತಿದೆ. ಆದರೆ, ತಮ್ಮನ್ನು ಸಂತ್ರಸ್ತರಂತೆ ಪ್ರಚಾರ ಮಾಡುತ್ತಿರುವ ಕೇಜ್ರಿವಾಲ್, ಜನರಿಗೆ ಮತ್ತಷ್ಟು ಹತ್ತಿರವಾಗಲು ಯತ್ನಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 3ನೇ ಹಿನಾಯ ಸೋಲನ್ನು ತಪ್ಪಿಸುವ ಸವಾಲು ಮೋದಿ ಹೆಗಲಿಗಿದೆ. ಈಗಾಗಲೇ, ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಕಳಪೆ ಪ್ರದರ್ಶನ ನೀಡಿದ್ದು, ಎನ್‌ಡಿಎ ಮೈತ್ರಿಯ ಕೃಪೆಯೊಂದಿಗೆ ಮೋದಿ ಪ್ರಧಾನಿಯಾಗಿದ್ದಾರೆ. ಇಂತಹ ಸಮಯದಲ್ಲಿ ದೆಹಲಿಯನ್ನು ಗೆಲ್ಲುವುದು ಮತ್ತುಜ ತಮ್ಮನ್ನು ಸಾಮ್ರಾಟ್‌ ಎಂಬಂತೆ ಬಿಂಬಿಸಿಕೊಳ್ಳುವುದು ಮೋದಿಗೆ ಸವಾಲಾಗಿದೆ. ಈ ಸವಾಲನ್ನು ಜಯಿಸಲು ಮೋದಿ ನಾನಾ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಅದು ಫಲ ನೀಡುವುದೇ? ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X