ಕಾಮುಕನೊಬ್ಬ ಅಂಗನವಾಡಿಗೆ ನುಗ್ಗಿ ಶಿಕ್ಷಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ. ಆರೋಪಿಯನ್ನು ಅದೇ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸಿದ್ರಾಯಿ ಕರ್ಲಟ್ಟಿ ಎಂದು ಹೇಳಲಾಗಿದೆ.
ಅಂಗನವಾಡಿ ಕೇಂದ್ರದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ತನ್ನ ಪತ್ನಿಗೆ ಶಿಕ್ಷಕಿ ಆದೇಶಿಸಿದ್ದಕ್ಕೆ ಈ ಕೃತ್ಯ ಎಸಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಡುಗೆ ಸಹಾಯಕಿ ಸಾವಿತ್ರಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಶಿಕ್ಷಕಿ ಆದೇಶಿಸಿದ್ದಾರೆ. ಆ ಬಗ್ಗೆ ಸಾವಿತ್ರಿ ತನ್ನ ಪತಿ ಸಿದ್ರಾಯಿಗೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಸಿದ್ರಾಯಿ ಅಂಗನವಾಡಿಗೆ ನುಗ್ಗಿ ಶಿಕ್ಷಕಿಯನ್ನು ಅಶ್ಲೀಲ ಮತ್ತು ಅವಾಚ್ಯವಾಗಿ ನಿಂದಿಸಿದ್ದಾನೆ.
ಅಲ್ಲದೆ, ಶಿಕ್ಷಕಿಯ ಸೀರೆ ಎಳೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ನೊಂದ ಶಿಕ್ಷಕಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಶಿಕ್ಷಕಿಯ ತಾಯಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.