ಹೌದು.. ಬದುಕಿನ ಕೆಲವೊಂದು ಸತ್ಯಗಳನ್ನು ನಮಗಿಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ವೈರಾಗಿಗಳು ಹೇಳುವಂತೆ ʼಶರೀರ ಸ್ಮಶಾನದ ಸ್ವತ್ತು, ಜೀವನ ಮೃತ್ಯುವಿನ ಸ್ವತ್ತುʼ.
ಬದುಕಿನ ಕೊನೆಯ ಘಟ್ಟದಲ್ಲಿ ಏಕಾಂತವಾಸದ ನೋವನನುಭವಿಸುತ್ತಿರುವ ವೃದ್ಧ ತಂದೆ-ತಾಯಿಗಳಿಗೆ ಈ ವೇದಾಂತದ ಮಾತು ಒಂದು ರೀತಿಯ ನೆಮ್ಮದಿ ತರಬಹುದು. ಯಾಕೆ ಹೀಗಾಯಿತು? ಅವಿಭಕ್ತ (Joint Family)ದಿಂದ ಏಕ ಕುಟುಂಬ (Single Family) ವ್ಯವಸ್ಥೆಗೆ ಒಗ್ಗಿಕೊಂಡಂದಿನಿಂದ ಈ ಸಮಸ್ಯೆ ತಲೆದೋರಲು ಆರಂಭವಾಯಿತು. ಕಹಿಯಾದರೂ ಅರಗಿಸಿಕೊಳ್ಳಬೇಕಾದ ವಿಷಯ.
ನಾವು ಮಕ್ಕಳನ್ನು ಬೆಳೆಸುತ್ತಿರುವ ರೀತಿ. ಉದಾಹರಣೆ; ನಾಗ್‌ಪುರ್ ಜಿಲ್ಲೆಯ 25 ವರ್ಷದ ಉತ್ಕರ್ಷ ಇಂಜಿನಿಯರ್ ವಿದ್ಯಾರ್ಥಿ. ದುರದೃಷ್ಟವೆಂದರೆ ಸ್ವತಃ ಹೆತ್ತವರನ್ನೇ ಆತ ಕೊಂದು ಬಿಟ್ಟ. ಇದು 2024ರ ಕೊನೆಯ ತಿಂಗಳಲ್ಲಿ ನಡೆದ ಘಟನೆ. ಕಾರಣ ಹೆತ್ತವರಿಗೆ ಆತ ಇಂಜಿನಿಯರಿಂಗ್ ಪದವೀಧರನಾಗಬೇಕಿತ್ತು. ಆದರೆ ಆತನಿಗದು ಹಿಂಸೆಯಾಗುತ್ತಿತ್ತು. ಪರಿಣಾಮ ದುರಂತ ಅಂತ್ಯಗೊಂಡಿತು.
ಬಂಡವಾಳಶಾಹಿಗಳು ಹೊಸ ವೇಷದಲ್ಲಿ ದುರ್ಬಲ ದೇಶವನ್ನು ಕೊಳ್ಳೆ ಹೊಡೆಯುವಂತೆ, ಅಶ್ಲೀಲಗಳು ಸಭ್ಯರ ಸಂಸ್ಕೃತಿಯ ರೂಪದಲ್ಲಿ ಕಾಣಸಿಗುವಂತೆ, ಧರ್ಮ, ದೇಶ ದ್ರೋಹಿಗಳು, ದೇವ ಮಾನವರ ಸೋಗಿನಲ್ಲಿ ಪ್ರತ್ಯಕ್ಷವಾಗುವಂತೆ, ವಿದ್ಯಾರ್ಥಿ ಬದುಕನ್ನು ಹಿಂಸಿಸುವ ರ‍್ಯಾಂಕ್ ಪದ್ಧತಿ ರದ್ದುಗೊಂಡು ಡಿಸ್ಟಿಂಕ್ಷನ್, ಗ್ರೇಡ್ ಪದ್ಧತಿ ಜಾರಿಗೆ ಬಂತು. ತಾಯಿ ಮಗಳು ಹೆಣ್ಣೇ ಎಂಬ ಲೋಕೋಕ್ತಿಯಂತೆ ʼರ‍್ಯಾಂಕ್ʼ ಅನ್ನು ಮಕ್ಕಳ ಭವಿಷ್ಯದ ಮಾನದಂಡವೆಂದು ಒಪ್ಪಿದ ಅವಿವೇಕಿ ತಂದೆ-ತಾಯಂದಿರು ಈ ಗ್ರೇಡನ್ನು ಅದೇ ರೀತಿ ಒಪ್ಪಿಕೊಂಡರು. ವೈಯಕ್ತಿಕ ಪ್ರತಿಷ್ಠೆಗಾಗಿ ಮೌಲ್ಯಾಧಾರಿತ ಶಿಕ್ಷಣದ ಬದಲು ಗಳಿಕೆಯಾಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟ ಕಾರಣಕ್ಕಾಗಿ ತಮ್ಮ ಜೀವವನ್ನು ಕಳೆದುಕೊಂಡರು.
ಅಂಕಾಧಾರಿತ, ಗಳಿಕೆಯಾಧಾರಿತ ಶೈಕ್ಷಣಿಕ ರಂಗವನ್ನು ನಾವು ಕಾಣುತ್ತಿದ್ದೇವೆ. ವಿಪರ್ಯಾಸವೇನೆಂದರೆ, ಮಕ್ಕಳ ಬಗೆಗಿನ ಹೆತ್ತವರ ದೃಷ್ಟಿಕೋನವೇ ಬದಲಾಗಿದೆ. ನಾವು ಕಾಣುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರಗಳ ಮಾನದಂಡವೂ ಇದೇ ಆಗಿರುತ್ತದೆ. ಆ ಶಿಬಿರದಿಂದ ಯಾವ ರೀತಿ ನಿಮ್ಮ ಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ಯಾರಾದರೂ ಹೆತ್ತವರಲ್ಲಿ ಕೇಳಿದರೆ ನನ್ನ ಮಗ 96% ಮಾರ್ಕ್ಸ್ ಪಡೆಯಲು ಸಹಾಯವಾಯಿತೆಂದೇ ಉತ್ತರಿಸುವರು. ಇಲ್ಲವೇ ಕೇವಲ 60 ಶೇಕಡಾದಷ್ಟೇ ಗಳಿಸಿದ್ದಾನೆ, ಶಿಬಿರದಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ ಎಂದು ದೂರುವವರೂ ಕಾಣಸಿಗುತ್ತಾರೆ.

ಯಾಕೆ ಹೀಗೆ ಆಗುತ್ತೆ? ಉತ್ತರ ಸ್ಪಷ್ಟ. ಗಳಿಕೆಯಾಧಾರಿತ ಶಿಕ್ಷಣದಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಭೆ ಅನ್ನುವುದನ್ನು ಕೇವಲ ಮಾರ್ಕ್ಸ್ ಗಳಿಸುವುದಕ್ಕೋಸ್ಕರ ಉರುವಲು ಹೊಡೆದು ಪರೀಕ್ಷಾ ಕೇಂದ್ರದವರೆಗೆ ಮಾತ್ರ ಮಸ್ತಿಷ್ಕದಲ್ಲಿ ಉಳಿಸಿ ಅಂತರಾಳಕ್ಕಿಳಿಸದ ಈ ಅಭ್ಯಾಸ ಪದ್ಧತಿಯಿಂದ ಈ ವಿಪರ್ಯಾಸ ಕಾಣುತ್ತೇವೆ.
ಹೆಚ್ಚು ಅಂಕಗಳಿಸಿದರೆ ಬದುಕಿನಲ್ಲಿ ಸೆಟ್ಲ್ ಆಗುತ್ತೀಯ, ಕಡಿಮೆ ಗಳಿಸಿದರೆ ಜೀವನದುದ್ದಕ್ಕೂ ದುರ್ಬಲ ಬದುಕು ನಿನ್ನದಾಗುತ್ತದೆ ಎಂಬ ‘ಅಹಿತೋಪದೇಶ’ ಹೆತ್ತವರಿಂದ ಉಳಿದು ಬಿಡುತ್ತವೆ. ಆದರ್ಶ ಪುರುಷರು ಮಾಯವಾದಂತೆ ಆದರ್ಶಗಳ ಮಾನದಂಡವು ಬದಲಾಗುತ್ತಿರುವುದು ದುರಂತವೇ ಎಂದು ಹೇಳಬಹುದು. ಗುಣವಂತ ಆದರ್ಶವನ್ನು ಹೆತ್ತವರು ಹೇಳುವುದು ವಿರಳವಾಗಿವೆ. ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಶ್ರೀಮಂತರ ಕಡೆ ಬೆರಳು ತೋರಿಸಿ ಅವರಂತಾಗಬೇಕೆಂದು ಬೋಧಿಸುತ್ತಾರೆ. ಇಲ್ಲಿ ನಿಜಕ್ಕೂ ಆಟಗಾರರು, ಲಜ್ಜೆಯಿಲ್ಲದ ನಟಿಯರು ಯಾರಿಗೋ ಪಂಗನಾಮ ಹಾಕಿ ಸಿರಿವಂತರಾದವರು ಗುಣವಂತರೇ? ಖಂಡಿತ ಇಲ್ಲ. ಇವರ್ಯಾರಲ್ಲೂ ಗುಣವಂತಿಕೆ ಕಂಡು ಬರುವುದು ವಿರಳ. ಹಣ ಸಂಪಾದನೆಯ ಪೈಪೋಟಿಯೇ ಈ ಜನರ ಮುಖ್ಯ ಲಕ್ಷಣ.
ಸರ್ವರಿಗೊಂದು ವಚನ ಕಲಿತು ಸರ್ವಜ್ಞನಾದ. ವಿದ್ಯೆಯ ಮೇರು ಪರ್ವತನಾದ ಎಂದು ಸರ್ವಜ್ಞನ ಬಗ್ಗೆ ಹೇಳುವುದಿದೆ. ಅದೇ ಸರ್ವಜ್ಞನನ್ನು ಮುಂದಿಟ್ಟು ಪಿ.ಎಚ್.ಡಿ. ಗಳಿಸಿದ ಮಂದಿ ಮೈಯಲ್ಲಿ ಮತ್ಸರ ತುಂಬಿಕೊಂಡು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಛೂ ಬಿಟ್ಟು ಜಾತಿ ರಾಜಕೀಯ, ವರ್ಣ, ಭಾಷೆಗಳಲ್ಲಿ ರಾಜಕೀಯ ಮಾಡುವುದನ್ನು ಕಾಣುತ್ತಿದ್ದೇವೆ. ಸರಳತೆ, ಸಾಮರಸ್ಯ, ಗಾಢ ಅಧ್ಯಯನ, ಇವೆಲ್ಲದರ ಪಾಠ ಇಂದು ಮಾಯವಾದಂತೆ ಕಾಣುತ್ತದೆ. ವಾಹನ ರಿಪೇರಿ ಮಾಡಲು ಗ್ಯಾರೇಜಿನವರು ಮನುಷ್ಯರನ್ನು ರಿಪೇರಿ ಮಾಡಲು ವೈದ್ಯಕೀಯ ಸಂಸ್ಥೆಗಳು ವೈದ್ಯರನ್ನು ತರಬೇತುಗೊಳಿಸುತ್ತಿದೆ.
ಹಣವೊಂದಿದ್ದರೆ ಸಾಕು, ಪೆದ್ದನಿಗೂ ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ವೈದ್ಯಕೀಯ, ತಾಂತ್ರಿಕ ಮಹಾ ವಿಶ್ವವಿದ್ಯಾಲಯದಲ್ಲಿ ಸೀಟು ದೊರಕುವುದನ್ನು ನಾವು ಕಾಣುತ್ತಿದ್ದೇವೆ. ಸರಳ ವ್ಯಕ್ತಿತ್ವದ, ನೇರ ಮಾತಿನ, ಯಾರೆದುರೂ ಕೈ ಚಾಚದ ಬೆರಳೆಣಿಕೆಯ ಪ್ರಾಚಾರ್ಯರು ಈ ರೀತಿ ಬಂದ ವಿದ್ಯಾರ್ಥಿಗಳಿಂದ ಕಿರುಕುಳ ಅನುಭವಿಸುತ್ತಿರುವುದು ವಿಶ್ವವಿದ್ಯಾನಿಲಯಗಳ ಸಾಮಾನ್ಯ ದೃಶ್ಯವಾಗಿದೆ.
ತರಬೇತಿಯ ಭಾಗವಾಗಿ ವೃದ್ಧಾಶ್ರಮಕ್ಕೆ ಭೇಟಿ ನಿಡಿದ ಸಂದರ್ಭದಲ್ಲಿ ಅಲ್ಲಿದ್ದ ನಿವೃತ್ತ ಪೋಷಕರೊಬ್ಬರನ್ನು ಭೇಟಿಯಾದಾಗ ಉಭಯ ಕುಶಲೋಪರಿಯ ಬಳಿಕ ಅಂತರಾಳದ ನೋವೊಂದನ್ನು ಹೇಳಿದಾಗ ಕರಳು ಕಿತ್ತು ಬಂದಂತಾಯಿತು. ಇಬ್ಬರು ಮಕ್ಕಳು, ಒಬ್ಬ ಇಂಜಿನಿಯರ್, ಇನ್ನೊಬ್ಬ ವೈದ್ಯ. ಮಾತು ಮುಗಿಸುವಾಗ ಅವರ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಛೇ ಕೆದಕಬಾರದೆಂದೆನಿಸಿತು. ಆದರೂ ಗಳಿಕೆಯಾಧಾರಿತ ಶಿಕ್ಷಣದ ಕಠೋರತೆಯ ದರ್ಶನವಾಗಿತ್ತು. ಅವರ ಮಾತಲ್ಲೇ ಹೇಳುವುದಾದರೆ.. ʼವಿದ್ಯೆ ಕೊಟ್ಟೆ, ರಕ್ತವನ್ನ ಬೆವರನ್ನಾಗಿಸಿ ಗಳಿಸಿ ಹಣವನ್ನೆಲ್ಲಾ ಅವರಿಗೆ ಮೀಸಲಿರಿಸಿದೆ. ಪ್ರತಿ ತರಗತಿಯಲ್ಲೂ ಹೆಚ್ಚೆಚ್ಚು ಅಂಕ ಗಳಿಸಲು ಟ್ಯೂಷನ್ ವ್ಯವಸ್ಥೆಯನ್ನೂ ಮಾಡಿದೆ. ಪದವಿ ದೊರೆತಾಗ ಹೆಮ್ಮೆಪಟ್ಟೆ. ಗೋಡೆಯಾವರಣದ ಹೊರಗೆ ಅವರ ಪದವಿಯನ್ನು ಶಿಲಾವರಣದಲ್ಲಿ ಬರೆಸಿದೆ. ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಹೋದರು. ನಮ್ಮನುಮತಿಯನ್ನೂ ಪಡೆಯದೆ ಅವರದೇ ರೀತಿಯಲ್ಲಿ ವೈವಾಹಿಕ ಬದುಕು ಸಾಗಿಸುತ್ತಿದ್ದಾರೆʼ. ನೋವು ಅಸಹನೀಯವಾಗಿ ಕಾಡಿದಾಗ ಗತ್ಯಂತರವಿಲ್ಲದೆ ಕೇಳಿದೆ: ಯಾಕೆ ಹೀಗ್ ಮಾಡಿದ್ರು ಮಕ್ಳು? ಎಂದದ್ದಕ್ಕೆ ಏನಪ್ಪ.. ವಿದ್ಯಾವಂತನಾಗಿ ಹಳೆಯ ಕಾಲದ ಸಂಸ್ಕೃತಿಗೆ ಒಗ್ಗಿಕೊಂಡಿದ್ದೀಯ! ಜನರೇಷನ್ ಗ್ಯಾಪ್(Generation Gap) ಗೆ ಹೊಂದಿಕೊಳ್ಳಬೇಕೆಂದು ನನಗೆ ತಿಳಿ ಹೇಳಿದರು.
ವಿವೇಕಿ ಹಾಗೂ ಅವಿವೇಕಿ ನಡುವಿನ ಅಂತರವರಿಯದೇ ಪಾಪ ಆ ಹಿರಿಯರು ಮಕ್ಕಳನ್ನು ಅಕ್ಷರಸ್ಥರನ್ನಾಗಿಸಿದರು. ಮೌಲ್ಯಾಧಾರಿತ ಶಿಕ್ಷಣದ ಬದಲು ಗಳಿಕೆಯಾಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟದ್ದು ಅವರೊಂದಿಗಿನ ಮಾತುಕತೆಯಲ್ಲಿ ತಿಳಿದು ಬಂತು. ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ಸಮಾಜದಲ್ಲಿ ಅಂತರ ಹುಟ್ಟಿಸುತ್ತದೆ. ಮಾತ್ರವಲ್ಲ ಕೌಟುಂಬಿಕ ಜೀವನವನ್ನು ಶಿಥಿಲಗೊಳಿಸುತ್ತದೆ.
ಎಲ್ಲೋ ಒಂದೋ ಎರಡೋ ಅಪವಾದ ಎಂಬ ರೀತಿಯಲ್ಲಿ ಈ ವಿಚಾರವನ್ನು ತಿರಸ್ಕರಿಸಬಹುದು. ಆದರೆ ಬಡವನಾರೆಂದು ಗುರುತಿಸುವುದಾದಲ್ಲಿ ಬಿಪಿಎಲ್ ಕಾರ್ಡ್ ನೋಡುವ ಅವಶ್ಯಕತೆ ಕಂಡು ಬರಲಾರದು. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಸೋರಿದ ಹಂಚಿನ ಛಾವಣಿಯಡಿಯಲ್ಲಿ ನೆಲದಲ್ಲಿ ಕೂತು ಮಣ್ಣನ್ನು ಕೆದಕುತ್ತಾ ಮೂಗಿನಲ್ಲಿರುವ ಸಿಂಬಳ ನೆಕ್ಕುತ್ತಾ ಇರುವ ಮಕ್ಕಳನ್ನೊಮ್ಮೆ ನೋಡಿದರೆ ಬಿಪಿಎಲ್ ಪಟ್ಟಿ ತಯಾರಿಸಲು ಸುಲಭವಾಗಬಹುದು. ಇನ್ನು ಈ ಸತ್ಯವನ್ನು ಅರಗಿಸಲು ನಮ್ಮ ಮಾತೃ ಭಾಷಾ ವ್ಯಾಮೋಹಿಗಳಿಗೆ ಇನ್ನೂ ಕಷ್ಟ. ಖಾಸಗಿ ಶಾಲೆಗೆ ಪರವಾನಿಗೆ, ಫರ್ಮಾನು ಛಾವಣಿ ಹಂಚಿನದ್ದಾಗಿರದೆ ಟಾರಸಿಯದ್ದಾಗಿರಬೇಕು. ಆದರೆ, ಪೂರ್ವಗ್ರಹ ಪೀಡಿತಳಾಗಿ ಈ ವಿಚಾರ ಪ್ರಸ್ತಾವನೆ ಮಾಡುವುದಲ್ಲ. ಬದಲಾಗಿ ಈಗಲೂ ಕರ್ನಾಟಕದಾದ್ಯಂತ ಒಂದು ಸುತ್ತು ಹೊಡೆದರೆ ಬರಲಿರುವ ಸಮಾಜದ ಚಿಂತನೆಗಳು ಯಾವ ದಿಕ್ಕಿನಲ್ಲಿ ಸಾಗಬಹುದೆಂಬ ಭೀತಿಯಿಂದ ಇದನ್ನು ಉಲ್ಲೇಖಿಸಬೇಕಾಗುತ್ತದೆ. ಎಲ್ಲಿಯವರೆಗೆ ವಿದ್ಯಾವಂತರೆನಿಸಿರುವ ಅಕ್ಷರಸ್ಥರು ಸಮಾಜದ ಆಗುಹೋಗುಗಳನ್ನು ನಿರ್ಲಕ್ಷಿಸುತ್ತಾರೆ. ಎಲ್ಲಿಯವರೆಗೆ ವಿದ್ಯಾವಂತರೆನಿಸಿರುವ ಅಕ್ಷರಸ್ಥರು ಸಮಾಜದ ಆಗುಹೋಗುಗಳನ್ನು ನಿರ್ಲಕ್ಷಿಸುತ್ತಾರೆ ಅಲ್ಲಿಯವರೆಗೆ ಇಂತಹ ಬೆಳವಣಿಗೆಗಲು ನಡೆಯುತ್ತಲೇ ಇರುತ್ತವೆ.
ಅಂಬಿಗ ಮತ್ತು ಪಂಡಿತರ ಕಥೆ ಗೊತ್ತಿರಬಹುದು. ವೇದ ಗೊತ್ತಿರದ ಅಂಬಿಗನನ್ನು ಕಂಡು ʼನಿನ್ನ ಜೀವನ ನರಕ ಸದೃಶʼ ಎನ್ನುತ್ತಾರೆ ಪಂಡಿತರು. ಇತ್ತ ಮುಳುಗುತ್ತಿರುವ ದೋಣಿಯನ್ನು ಕಂಡು ಅಂಬಿಗ.. ಈಜಲು ಬರುತ್ತದೆಯೇ ಪಂಡಿತರೇ ಎಂದಾಗ `ಇಲ್ಲ’ ಎನ್ನುತ್ತಾರೆ ಪಂಡಿತರು. ಈಜಿ ದಡ ಸೇರಿ ಪಂಡಿತರೇ ಎನ್ನುತ್ತಾನೆ ಅಂಬಿಗ. ಈ ಕಥೆಯ ಸಾರಾಂಶ ಪಂಡಿತ ಮುಳುಗಿ ಸತ್ತ, ಪಾಮರ ಈಜಿ ದಡ ಸೇರಿದ ಎಂಬಂತೆ ಇದು ಅಂದಿನ ಕಥೆಯಾದರೆ ಇಂದಿಗೆ ಅವಿದ್ಯಾವಂತರೆನಿಸುವ ಹಳ್ಳಿಗರೋ, ಪಟ್ಟಣಿಗರೋ, ಅವರ ಸಂಸ್ಕಾರ, ಕುಟುಂಬದೊಂದಿಗಿನ, ಮಾತಾಪಿತರೊಂದಿಗಿನ ವರ್ತನೆಗಳು ವಿದ್ಯಾವಂತರೂ ನಾಚಿಕೊಳ್ಳುವ ರೀತಿಯಲ್ಲಿದೆ. ಈಗಲೂ ಆಧುನಿಕ ವಿದ್ಯಾಭ್ಯಾಸ ಗಳಿಸಿದವರಲ್ಲಿ ಹೆಚ್ಚಿನವರು ಕ್ರೀಡೆಯ ಹೆಸರಿನಲ್ಲೂ, ಫ್ಯಾಶನ್ ಹೆಸರಿನಲ್ಲೂ, ಪಾರ್ಟಿ ಜೂಜಿನಲ್ಲಿ ಮುಳುಗಿ ಭ್ರಷ್ಟಾಚಾರಿಯೆಂದೋ, ಮನೆ ಮುರುಕರೆಂದೋ ಹೆಸರು ಗಳಿಸುವುದನ್ನು ಕಾಣುತ್ತಿದ್ದೇವೆ.
ಎದೆಗವುಚಿ ಮಕ್ಕಳೊಂದಿಗೆ ʼಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದʼ ಎಂದು ಕತೆ ಆರಂಭಿಸುತ್ತಿದ್ದಂತೆಯೇ ಮಗು Diana and Roma ಇಡು ಎನ್ನುತ್ತದೆ. ಹೆತ್ತವರಿಗೂ ಅದೇ ಬೇಕಾಗಿತ್ತು. ತಮ್ಮ ಕೆಲಸಕ್ಕೆ ಅಡ್ಡಿಯಾಗದಿರಲಿಕ್ಕಾಗಿ Diana and Roma ತೋರಿಸಿ ತಾವು ತಮ್ಮ ಕೆಲಸದಲ್ಲಿ ಮಗ್ನರಾಗಲು ಮಕ್ಕಳು ಅವರಷ್ಟಕ್ಕೆ ಕಾಲ್ಪನಿಕ ಜಗತ್ತಿನೊಂದಿಗೆ ಜೋಡಿಸುವ ಸಂದರ್ಭವನ್ನು ಸೃಷ್ಟಿಸುತ್ತೇವೆ. ಅಡುಗೋಲಜ್ಜಿಯ ಕಥೆ ಮಾಯವಾಗಿದೆ. ಅದೆಷ್ಟೋ ಸರಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು ಬಣ್ಣ ಕಾಣದೆ ಛಾವಣಿಯ ಹೆಂಚು ಒಡೆದು ಬಿಸಿಲು ಮಳೆಗೆ ಮೈಯೊಡ್ಡುವ ಮಕ್ಕಳ ದೃಶ್ಯ ಸಾಮಾನ್ಯವಾಗಿದೆ.

ಎಲ್ಲೋ ಅಪ್ಪಿತಪ್ಪಿ ಒಂದಿಬ್ಬರು ಐ.ಪಿ.ಎಸ್, ಐ.ಎ.ಎಸ್ ಅಥವಾ ವೈದ್ಯರೋ ಇಂಜಿನಿಯರೋ ಆದರೆ ಅದನ್ನು ಹತ್ತನೇ ಅದ್ಭುತವೆಂಬ ರೀತಿಯಲ್ಲಿ ಜನರಾಡುತ್ತಿರುವ ಮಾಮೂಲು ಸನ್ನಿವೇಶಕ್ಕೆ ಒಗ್ಗಿಕೊಂಡಿದ್ದೇವೆ.
ಮೂಲ ಶೀರ್ಷಿಕೆಗೆ ಸಂಬಂಧವಿಲ್ಲದೆ ಎಲ್ಲಿಂದೆಲ್ಲಿಗೋ ಓಡುತ್ತಿದೆಯಲ್ಲ ಈ ಲೇಖನ ಎಂದು ಭಾವಿಸಬೇಡಿ. ಖಂಡಿತ ಒಂದಕ್ಕೊಂದು ಸಂಬಂಧಪಟ್ಟು ಮೂಲ ಆಶಯವನ್ನು ಪ್ರತಿಪಾದಿಸುತ್ತಿದ್ದೇನೆ. ಮಹಾ ನಗರಿಯಲ್ಲಿ ಕಾಣ ಸಿಗುವ ರಂಗುರಂಗಿನ ವೀಕ್ ಎಂಡ್ (ಶನಿವಾರ) ಸಮಾರಂಭಗಳು, ಪಬ್ ಬಾರ್‌ಗಳಲ್ಲಿ, ಎಲ್ಲಿಂದರಲ್ಲಿ ನಾಚಿಕೆಯೆಂಬ ಪದದ ಅರ್ಥವಿಲ್ಲದೆ ಸ್ವಚ್ಛಂದವಾಗಿ ವಿಹರಿಸುವ ಯುವ ಅಕ್ಷರಸ್ಥರನ್ನೇ ಕಣ್ಣಾರೆ ಕಂಡು ಇವರನ್ನು ವಿದ್ಯಾವಂತರೆಂದು ಹೇಳಿಕೊಳ್ಳಲು ಅಸಹ್ಯವೆನಿಸಿ ಕೇವಲ ನಿರ್ದಿಷ್ಟ ವಿಷಯಾಧಾರಿತ ಅಕ್ಷರಸ್ಥರೆನ್ನಬಹುದೆಂಬ ತೀರ್ಮಾನಕ್ಕೆ ಬಂದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವೆಂದೆನಿಸಿದರೂ ಎಲ್ಲೋ ಮೂಲೆಯಲ್ಲಿ ಸತ್ಯದ ಕಹಿ ವಾಸನೆ ಬಡಿಯದಿರಲಾರದು.
ಇದನ್ನು ಓದಿದ್ದೀರಾ? ಕೇರಳ | ಹೃದಯ ವಿದ್ರಾವಕ ಘಟನೆ: ಪಿಸ್ತಾದ ಸಿಪ್ಪೆ ಶ್ವಾಸಕೋಶದಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತ್ಯು
ಮೈಗೆ ಮೆತ್ತಿಗೊಂಡ ಬಟ್ಟೆ, ಶರೀರದ ಅಂಗವೆಲ್ಲಾ ಪ್ರದರ್ಶನಕ್ಕಿಟ್ಟಂತೆ ಎಂದು ತೋರುತ್ತಿರುವ ಲಲನೆಯರು ಇಂದು ಪದವಿಗಾಗಿ ವಿಶ್ವವಿದ್ಯಾನಿಲಯದಲ್ಲಿ ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಉದ್ದೇಶವೇನೆಂದು ಕೇಳಿದರೆ ಸ್ಪಷ್ಟವಾಗಿ ಕೋಮು ಕಂಠದಲ್ಲಿ ಉಳಿಯುತ್ತಾರೆ. ಪ್ರಮೋಷನ್‌ಗೆ ಹೆಚ್ಚು ಅಂಕ ಗಳಿಸಲಿಕ್ಕೆ ಇದು ಅಗತ್ಯ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿ ಅದೆಷ್ಟು ವರ್ಷಗಳನ್ನು ಸವೆಸಿ ಗುಡ್ಡಗಾಡುಗಳಲ್ಲಿ ಅಲೆದು ಜನರೊಂದಿಗೆ ಬೆರೆತು ಕಲಿತು ಹರಿದ ಕೋಟು, ತೂತು ಜೋಳಿಗೆಯಲ್ಲಿ ಬರೆಯಲು ಪೇಪರಿಲ್ಲದಕ್ಕೆ ರದ್ದಿ ಪೇಪರ್ ಮಾರಿ ಪಿ.ಎಚ್.ಡಿ. ಪಡೆದ ಅದೆಷ್ಟೋ ಹಿರಿಯ ಮುತ್ಸದ್ಧಿಗಳಿಗೆ ಇಂದು ಇಂಟರ್‌ನೆಟ್‌ನೆದುರು ಕೂತು ಚಿಪ್ಸ್ ಜಗಿಯುತ್ತಾ, ಪೆಪ್ಸಿ ಕೋಲಾ ಕುಡಿಯುತ್ತಾ ಪಿ.ಎಚ್.ಡಿ. ಪಡೆಯುವವರನ್ನು ಕಾಣುವಾಗ ಕಣ್ಣಲ್ಲಿ ನೀರು ಬರೆದಿರಲಾದಿತೇ? ಜನಸಾಮಾನ್ಯರ ಬದುಕಲ್ಲಿ ಈ ಪಿ.ಎಚ್.ಡಿ.ಗಳು ಬದಲಾವಣೆ ತಂದು ಸರಕಾರವೂ ಈ ಬಗ್ಗೆ ಆಲೋಚಿಸಿ ಯೋಜನೆಯನ್ನು ಕಾರ್ಯಗತಗೊಳಿಸಿದ ಅದೆಷ್ಟೋ ಉದಾಹರಣೆಗಳಿರುವಾಗ, ಪೈಪೋಟಿ ಹಾಗೂ ಮತ್ಸರ ಪೀಡಿತ ಗಳಿಕೆಯಾಧಾರಿತ ಸ್ನಾತಕೋತ್ತರ ಪದವಿಗಳಿಂದ ಸಮಾಜದಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು? ಸ್ವಸ್ಥ ಸಮಾಜಕ್ಕೆ ನಮ್ಮ ಯೋಜನೆಗಳೂ ಬದಲಾಗಬೇಕು. ತಾನೇ ಒಮ್ಮೆ ಯೋಚಿಸಿ ನೋಡಿ!
ಬರಹ: ಖತೀಜ ಇಕ್ಲೀಮ ಕೆ.ಪಿ, B.sc B.ed (ಪ್ರಶಿಕ್ಷಣಾರ್ಥಿ), ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು
