ಬಾಲಿವುಡೇತರ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ ಎಂದೇನೂ ಭಾವಿಸಬೇಕಿಲ್ಲ. ಆದರೆ ಬಾಲಿವುಡ್‌ಗೆ ಹೋಲಿಸಿದರೆ ಭಿನ್ನವಾದ ಜಾಡನ್ನು ದಕ್ಷಿಣ ಭಾರತದ ಚಿತ್ರೋದ್ಯಮ ಹಿಡಿದಿರುವಂತೆ ತೋರುತ್ತಿದೆ
2024ರ ಇಸವಿಯ ಸಿನಿಮಾಗಳ ಕುರಿತು ‘ಓರ್ಮ್ಯಾಕ್ಸ್ ಮೀಡಿಯಾ ಬಾಕ್ಸ್ ಆಫೀಸ್’ ವರದಿ ಹೊರಬಿದ್ದಿದೆ. 2024ನೇ ಇಸವಿಯು ಬಾಲಿವುಡ್ ಪಾಲಿಗೆ ಕಹಿ ಗಳಿಗೆಯೇ ಸರಿ. ಮತ್ತೊಂದೆಡೆ ಬಾಲಿವುಡೇತರ ಚಿತ್ರರಂಗಗಳು ಪುಟಿದೆದ್ದು ನಿಂತು, ದೈತ್ಯರನ್ನು ಹೆದರಿಸಿಬಿಟ್ಟಿವೆ.
ವರದಿಯ ಪ್ರಕಾರ, 2024ರಲ್ಲಿ ಭಾರತೀಯ ಸಿನಿಮಾದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 11,833 ಕೋಟಿ ರೂಪಾಯಿಗಳಾಗಿದ್ದು, 2023ರಲ್ಲಿ ಸಾಧಿಸಿದ ದಾಖಲೆಗಿಂತ ಶೇ.3ರಷ್ಟು ಕುಸಿತ ಕಂಡಿರುವುದು ಸ್ಪಷ್ಟ. 2023ರಲ್ಲಿ 12,000 ಕೋಟಿ ರೂ. ಗಳಿಕೆಯಾಗಿತ್ತು. ಈ ಪೈಕಿ ಬಾಲಿವುಡ್ ಶೇ. 13ರಷ್ಟು ಗಳಿಕೆಯನ್ನು ಕಳೆದುಕೊಂಡಿದೆ. 2023ರಲ್ಲಿ 5,380 ಕೋಟಿ ರೂ. ಗಳಿಸಿದ್ದ ಹಿಂದಿ ಸಿನಿಮಾಗಳು 2024ರಲ್ಲಿ 4,679 ಕೋಟಿ ರೂ. ಸಂಪಾದಿಸಿವೆ ಎಂದಿದೆ ‘ಹಿಂದೂ ಬಿಸಿನೆಸ್ ಲೈನ್’ ವರದಿ. ಒಟ್ಟಾರೆ ಬಾಕ್ಸ್ ಆಫೀಸ್ ಕೊಡುಗೆಯಲ್ಲಿ ಶೇ. 44ರಿಂದ ಶೇ. 40ಕ್ಕೆ ಹಿಂದಿ ಸಿನಿಮಾಗಳು ಕೆಳಗೆ ಬಿದ್ದಿವೆ.
ಮತ್ತೊಂದು ಮಹತ್ವದ ಸಂಗತಿಯನ್ನು ಗಮನಿಸಬೇಕು. ಹಿಂದಿ ಸಿನಿಮಾಗಳ ಈ ಗಳಿಕೆಯಲ್ಲಿ ಶೇ. 31ರಷ್ಟು ಪಾಲು ದಕ್ಷಿಣ ಭಾರತೀಯ ಚಲನಚಿತ್ರಗಳ ಡಬ್ಬಿಂಗ್ ಆವೃತ್ತಿಗಳಿಂದ ಬಂದಿದೆ! ಬ್ಲಾಕ್ ಬಾಸ್ಟರ್ ಸಿನಿಮಾ ‘ಪುಷ್ಪ 2: ದಿ ರೂಲ್’ನ ಹಿಂದಿ-ಡಬ್ಬಿಂಗ್ ಆವೃತ್ತಿಯೇ 889 ಕೋಟಿ ರೂ. ಗಳಿಸಿದೆ. ಡಬ್ಬಿಂಗ್ ಚಿತ್ರಗಳನ್ನು ಹೊರತುಪಡಿಸಿ, ಹಿಂದಿ ಭಾಷೆಯ ಮೂಲ ಚಲನಚಿತ್ರಗಳ ಕುಸಿತವು 37%ರಷ್ಟು ತೀವ್ರತೆಯನ್ನು ಪಡೆದುಕೊಂಡಿರುವುದಾಗಿ ಬಾಕ್ಸ್ ಆಫೀಸ್ ವರದಿ ಹೇಳುತ್ತಿದೆ.
ಮತ್ತೊಂದೆಡೆ ಹಾಲಿವುಡ್ ಚಲನಚಿತ್ರಗಳು ಭಾರತೀಯ ಮಾರುಕಟ್ಟೆಯಲ್ಲಿ 17% ರಷ್ಟು ತೀವ್ರವಾಗಿ ಕುಸಿತ ಕಂಡಿದ್ದು, 2023ರಲ್ಲಿ 1,139 ಕೋಟಿ ರೂ.ಗಳಷ್ಟಿದ್ದ ಅವುಗಳ ಒಟ್ಟು ಸಂಗ್ರಹವು 2024ರಲ್ಲಿ 941 ಕೋಟಿ ರೂ.ಗಳಿಗೆ ಇಳಿದಿದೆ. ‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾ ಹಾಲಿವುಡ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, 172 ಕೋಟಿ ರೂ.ಗಳನ್ನು ಗಳಿಸಿತು ಮತ್ತು ಒಟ್ಟಾರೆ ಬಾಕ್ಸ್ ಆಫೀಸ್ ಶ್ರೇಯಾಂಕದಲ್ಲಿ 11 ನೇ ಸ್ಥಾನವನ್ನು ಪಡೆದುಕೊಂಡಿತು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರಿಗೆ ರೂ. 10 ಸಾವಿರ ಸಂಭಾವನೆ; ಭರವಸೆ ಹುಸಿಯಾಗದಿರಲಿ
ದಕ್ಷಿಣ ಭಾರತದ ಸಿನಿಮಾದ ‘ಪುಷ್ಪ 2’ ಪ್ರಾಬಲ್ಯ ಸಾಧಿಸಿದೆ. 2024ನೇ ಇಸವಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊಮ್ಮುವ ಜೊತೆಗೆ ಜಾಗತಿಕವಾಗಿ 1,403 ಕೋಟಿ ರೂ.ಗಳನ್ನು ಗಳಿಸಿತು. ಇದರ ಹಿಂದಿ-ಡಬ್ಬಿಂಗ್ ಆವೃತ್ತಿಯು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ‘ಹಿಂದಿ’ ಚಿತ್ರವಾಗಿ ದಾಖಲೆ ನಿರ್ಮಿಸಿತು.
ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ ‘ಕಲ್ಕಿ 2898 AD’ (ರೂ. 747 ಕೋಟಿ), ಹಾರರ್ ಸಿನಿಮಾ ‘ಸ್ತ್ರೀ 2’ (ರೂ. 674 ಕೋಟಿ) ಉತ್ತಮ ಗಳಿಕೆ ಮಾಡಿದ ಹಿಂದಿ ಸಿನಿಮಾಗಳಾಗಿವೆ. ತಮಿಳು ಆಕ್ಷನ್ ಥ್ರಿಲ್ಲರ್ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’, ತೆಲುಗು ಆಕ್ಷನ್ ಡ್ರಾಮಾ ‘ದೇವರ – ಭಾಗ 1’ ಮತ್ತು ಹಿಂದಿ ಹಾರರ್ ಜಾನರ್ ‘ಭೂಲ್ ಭುಲೈಯಾ 3’ ಸಹ ಉತ್ತಮ ಪ್ರದರ್ಶನ ನೀಡಿ, ತಲಾ 300 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಕೆ ಮಾಡಿವೆ.
ಮತ್ತೊಂದೆಡೆ ಪ್ರಾದೇಶಿಕ ಚಿತ್ರೋದ್ಯಮಗಳು ಗಣನೀಯ ಸಾಧನೆ ಮಾಡಿವೆ. ಮಲಯಾಳಂ ಸಿನಿಮಾಗಳು 2023ಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 5ರಷ್ಟು ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿವೆ. ಮೊದಲ ಬಾರಿಗೆ 1,000 ಕೋಟಿ ರೂ. ಗಳಿಸಿದ ಖ್ಯಾತಿಗೆ ಮಲಯಾಳಂ ಚಿತ್ರರಂಗ ಒಳಗಾಗಿದೆ. ಥ್ರಿಲ್ಲರ್ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ ಒಂದೇ ಜಾಗತಿಕವಾಗಿ ರೂ. 164 ಕೋಟಿ ಸಂಪಾದಿಸಿದೆ. ತಮಿಳು ಮತ್ತು ತೆಲುಗು ಸಿನಿಮಾಗಳು ಕ್ರಮವಾಗಿ 15% ಮತ್ತು 20% ಮಾರುಕಟ್ಟೆ ಪಾಲನ್ನು ಹೊಂದಿರುವ ಮೂಲಕ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿಕೊಂಡಿವೆ.
ಈ ಅಂಕಿ- ಅಂಶಗಳು ಬಾಲಿವುಡ್ ಪಾಲಿಗೆ ಒಳ್ಳೆಯದ್ದನ್ನು ಸೂಚಿಸುವುದಿಲ್ಲ. ಈ ಬೆಳವಣಿಗೆಯ ಹಿಂದಿನ ಕಾರಣಗಳನ್ನು ಅರಿತು ಮುಂದಡಿ ಇಡುವ ಕೆಲಸವನ್ನು ಬಾಲಿವುಡ್ ಮಾಡಬೇಕಿದೆ. ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿ ಚಿತ್ರಮಂದಿರಗಳನ್ನು ಮುಚ್ಚಿದ್ದರಿಂದ ಪ್ರೇಕ್ಷಕರು ಒಟಿಟಿಯತ್ತ ಹೊರಳಿದರು. ಒಟಿಟಿಗಳು ನಿರೀಕ್ಷೆಗೂ ಮೀರಿ ಜನರ ಮನೆ ತಲುಪಿದವು. ಕಡಿಮೆ ವೆಚ್ಚದಲ್ಲಿ ಸಿನಿಮಾ ನೋಡಲು ಅವಕಾಶ ಸಿಕ್ಕಿದ್ದು ಒಂದು ಕಡೆಯಾದರೆ, ‘ಜಾಹೀರಾತು ಆದಾಯ ಮಾದರಿ’ಯಲ್ಲಿ ‘ಅಮೆಜಾನ್- ಮಿನಿಟಿವಿ’ ಥರದ ಒಟಿಟಿಗಳು ಉಚಿತ ಸಿನಿಮಾಗಳನ್ನೂ ನೀಡಿದವು. ಅಮೆಜಾನ್ ಮಿನಿಟಿವಿ ಜೊತೆಗೆ ಎಂಎಕ್ಸ್ ಪ್ಲೇಯರ್ ವಿಲೀನ ಮಾಡಲಾಯಿತು. ಜಾಹೀರಾತು ಆದಾಯ ಮಾದರಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಕೇವಲ ಹಳೆಯ ಕ್ಲಾಸಿಕ್ ಸಿನಿಮಾಗಳನ್ನಷ್ಟೇ ಉಚಿತವಾಗಿ ನೀಡಲಿಲ್ಲ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೋಜ್‌ಪುರಿ, ಪಂಜಾಬಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳು ಕೈಗೆ ತಲುಪಿದವು. ಬಾಲಿವುಡ್‌ನ ಹಲವು ಸಿನಿಮಾಗಳಷ್ಟೇ ಅಲ್ಲ, ಬೇರೆ ಬೇರೆಯ ಷೋಗಳು ಡಬ್ ಆಗಿ ಪ್ರೇಕ್ಷಕರಿಗೆ ಸಿಕ್ಕವು. ಒಂದು ಕಡೆ ಅಂತಾರಾಷ್ಟ್ರೀಯ ಸಿನಿಮಾಗಳು, ಮತ್ತೊಂದು ಕಡೆ ಹಿಂದಿಯೇತರ ಭಾಷೆಗಳ ಸಿನಿಮಾಗಳು ಪ್ರೇಕ್ಷಕರಿಗೆ ಸುಲಭವಾಗಿ ದಕ್ಕಿದ ಮೇಲೆ ಬಾಲಿವುಡ್‌ನವರು ತೀವ್ರ ಸ್ಫರ್ಧೆ ಎದುರಿಸಬೇಕಾಯಿತು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ
ಹೊಸತನಕ್ಕೆ ತೆರೆದುಕೊಳ್ಳದಿರುವುದು, ಹಳೆಯ ಮಾದರಿ ಆಕ್ಷನ್ ಸಿನಿಮಾಗಳ ಮೊರೆ ಹೋಗಿದ್ದು, ಸೂಪರ್ ಹಿಟ್ ಸಿನಿಮಾಗಳ ರೀಮೇಕ್ ಬೆನ್ನು ಹತ್ತಿದ್ದು, ಕತೆ, ಚಿತ್ರಕತೆ ಎಲ್ಲವನ್ನೂ ಹಾಲಿವುಡ್ ಸಿನಿಮಾಗಳಿಂದ ನಕಲು ಮಾಡಲು ಶುರು ಮಾಡಿದ್ದು ಸೇರಿದಂತೆ ಹಲವು ಸಂಗತಿಗಳು ಬಾಲಿವುಡ್ ಪತನಕ್ಕೆ ಮುನ್ನಡೆ ಬರೆದವು. ವಿಚಾರವನ್ನು ಉದ್ದೀಪಿಸುವ ಸಿನಿಮಾಗಳು ಕಡಿಮೆಯಾದವು. ಒಮ್ಮೆ ನೋಡಿದ ಮೇಲೆ ಮತ್ತೆ ಚಿತ್ರಮಂದಿರಕ್ಕೆ ಹೋಗಬೇಕಿಸುವ ಸಿನಿಮಾಗಳ ಸಂಖ್ಯೆ ಇಳಿಮುಖವಾಯಿತು. ದೊಡ್ಡದೊಡ್ಡ ಸ್ಟಾರ್‌ಗಳ ವೈಭವೀಕರಣ, ಅದ್ಧೂರಿ ಸೆಟ್‌ಗಳು, ದೊಡ್ಡ ಬಜೆಟ್, ವಿಎಫ್‌ಎಕ್ಸ್ ರಾರಾಜಿಸಿದವು. ಸಿನಿಮಾ ಮಾರ್ಕೆಟಿಂಗ್‌ಗೆ ದೊಡ್ಡ ಹಣ ಸುರಿಯಬೇಕಾಯಿತು. ”ಸಿನಿಮಾಗಳು ಚಿಂತನೆಗೆ ಹಚ್ಚುವಂತಿದ್ದರೆ ಮಾತ್ರ ಪ್ರೇಕ್ಷಕ ಮತ್ತೆ ಮತ್ತೆ ನೋಡುತ್ತಾನೆ” ಎನ್ನುವ ಯೂಟ್ಯೂಬರ್ ಧ್ರುವ್ ರಾಥಿ, ಇಂತಹ ಹಲವು ಕಾರಣಗಳನ್ನು ತಮ್ಮ ವಿಡಿಯೊವೊಂದರಲ್ಲಿ ಇತ್ತೀಚೆಗೆ ವಿವರಿಸಿದ್ದರು. ಇದರ ಜೊತೆಗೆ ಬಾಲಿವುಡ್ ಮಂದಿಯ ದರ್ಪ, ತಾವು ಮೇಲಿದ್ದೇವೆ ಎಂಬ ಮನೋಭಾವ- ಇವೆಲ್ಲವೂ ಹಿಂದಿ ಚಿತ್ರರಂಗದ ಮೇಲೆ ಜನರಿಗೆ ಉಂಟಾಗಿರುವ ಭ್ರಮನಿರಸನವನ್ನು ತೋರಿಸುತ್ತಲೂ ಇರಬಹುದು.
ಬಾಲಿವುಡೇತರ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ ಎಂದೇನೂ ಭಾವಿಸಬೇಕಿಲ್ಲ. ಆದರೆ ಬಾಲಿವುಡ್‌ಗೆ ಹೋಲಿಸಿದರೆ ಭಿನ್ನವಾದ ಜಾಡನ್ನು ದಕ್ಷಿಣ ಭಾರತದ ಚಿತ್ರೋದ್ಯಮ ಹಿಡಿದಿರುವಂತೆ ಕಾಣುತ್ತಿದೆ. ಮಾಫಿಯಾಗಳನ್ನು ವೈಭವೀಕರಿಸುತ್ತಿರುವ ‘ಪುಷ್ಪ-2’ ಥರದ ಸಿನಿಮಾಗಳ ಯಶಸ್ಸು ಏನೇ ಇರಲಿ, ದಕ್ಷಿಣ ಸಿನಿಮಾಗಳು ಬಾಲಿವುಡ್‌ಗಿಂತ ಹೆಚ್ಚಿನ ಜನಮೆಚ್ಚುಗೆ ಗಳಿಸಿರುವುದು ಶ್ಲಾಘನೀಯ ಸಂಗತಿ. ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಆಗುತ್ತಿರುವ ಪ್ರಯೋಗಗಳು ವಿವಿಧ ರಾಜ್ಯಗಳಲ್ಲಿ ಚರ್ಚೆಗೆ ಒಳಗಾಗುತ್ತಿವೆ. ಬಹುದೊಡ್ಡ ಉದ್ಯಮವಾದ ಬಾಲಿವುಡ್ ಚಿತ್ರರಂಗ ಮುಂದಾದರೂ ತನ್ನ ಹಾದಿಯನ್ನು ತಿದ್ದಿಕೊಂಡು, ಮರುಜೀವ ಪಡೆಯುವತ್ತ ಹೆಜ್ಜೆ ಇಡಲಿ.
