ದೆಹಲಿಯಲ್ಲಿ ರೈತರು ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪವಾಸ ಹೋರಾಟ ನಡೆಸುತ್ತಿದ್ದು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಯಚೂರು ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಟಿಪ್ಪುಸುಲ್ತಾನ್ ಉದ್ಯಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವರ ಪ್ರತಿಕೃತಿ ದಹಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
“ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ಪ್ರಾಣ ಉಳಿಸಲು ಕ್ರಮ ವಹಿಸಬೇಕು. ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನಾಯಕತ್ವದ ಜತೆ ಹಾಗೂ ದೆಹಲಿ ಗಡಿಗಳಲ್ಲಿ ಹೋರಾಟ ನಿರತರ ಜತೆಗೆ ಮಾತುಕತೆ ಆರಂಭಿಸಬೇಕು. ಎಲ್ಲ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
“ಎಲ್ಲ ರೈತರ ಎಲ್ಲ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ವಿವಿಧ ಕಡೆ ನಡೆಯುತ್ತಿರುವ ಖಾಸಗೀಕರಣ ಹಾಗೂ ಪಂಪ್‌ಸೆಟ್ ಮೀಟರೀಕರಣದ ಪ್ರಯತ್ನ ಕೂಡಲೇ ನಿಲ್ಲಿಸಬೇಕು. 60 ವರ್ಷ ದಾಟಿರುವ ಎಲ್ಲ ಕೃಷಿಕರಿಗೆ ₹5,000 ಮಾಸಿಕ ಪಿಂಚಣಿ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಠಾಧೀಶರು, ರಾಜಕಾರಣಿಗಳು ಇರುವವರೆಗೂ ಜಾತಿ ನಿರ್ಮೂಲನವಾಗುವುದಿಲ್ಲ: ಸಾಹಿತಿ ಡಾ. ಬಿ ಎಲ್ ವೇಣು
“ಐತಿಹಾಸಿಕ ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಯು ಬಸವರಾಜ, ಸಂಯುಕ್ತ ಕಿಸಾನ್ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕ ಕೆ ಜಿ ವಿರೇಶ, ಕರಿಯಪ್ಪ ಅಚ್ಚೊಳ್ಳಿ, ಮಾರೆಪ್ಪ ಹರವಿ, ರಂಗನಾಥ ಮಾಸ್ತರ್, ಖಾಜಾ ಅಸ್ಲಂ, ಬಡೇಸಾಬ್ ಬಸಲಿಂಗಪ್ಪ, ಆಂಜನೇಯ ಕುರುಬದೊಡ್ಡಿ, ಈ ರಂಗನಾಥ ಕೊತ್ತದೊಡ್ಡಿ, ನರಸಣ್ಣ ನಾಯಕ, ಶಿವಾರ್ಜುನ ನಾಯಕ, ಹನುಮಂತ ಗುರಿಕಾರ, ಗೋವಿಂದ ದಾಸ್, ಡಿ ವೀರನಗೌಡ, ಹನುಮಂತ ಸೇರಿದಂತೆ ಬಹುತೇಕರು ಇದ್ದರು.
