ಕೇಂದ್ರ, ರಾಜ್ಯ ಸರ್ಕಾರಗಳ ಭೂನೀತಿಗಳನ್ನು ಖಂಡಿಸಿ ಫೆ.10ರಿಂದ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, 10,000ಕ್ಕೂ ಅಧಿಕ ಮಂದಿ ರೈತರು, ಕಾರ್ಮಿಕರು, ಭೂ ಹಕ್ಕುಗಳಿಂದ ವಂಚಿತರಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಸರ್ಕಾರಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಈಗ ಹಕ್ಕುಪತ್ರಕ್ಕಾಗಿ ಆಗ್ರಹಿಸುತ್ತಿರುವ ರೈತರಿಗೆ ಭೂಮಿ ನೀಡಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಕೊಡುವುದಕ್ಕೆ ಮುಂದಾಗಿರುವುದು ಬಹುರಾಷ್ಟ್ರೀಯ ಕಂಪನಿಯ ಕೃಷಿಯತ್ತ ಗಮನಹರಿಸಿದಂತೆ ಕಾಣುತ್ತಿದೆ. ಇದನ್ನು ನಾವು ವಿರೋಧಿಸಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡಲು ಉದ್ದೇಶಿಸಿರುವ ಭೂಮಿಯನ್ನು ಭೂಹೀನರಿಗೆ ನೀಡಬೇಕು” ಎಂದು ಆಗ್ರಹಿಸಲಾಗುವುದು.
“ಸಾಗುವಳಿ ಮಾಡುತ್ತಿರುವವರ ವಿಚಾರದಲ್ಲಿ ಅಕ್ರಮ-ಸಕ್ರಮ ಸಮಿತಿ ರಚಿಸಿ ಸಭೆಗಳನ್ನು ಮಾಡಿ ಕಂದಾಯ ಇಲಾಖೆಯಿಂದ ಸರ್ವೆ ಮಾಡಿಸಿ ಕಾನೂನಾತ್ಮಕವಾಗಿ ಭೂಮಿ ಹಂಚುವ ಕ್ರಿಯೆಗೆ ಚಾಲನೆ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಕ್ಕಳ ರಕ್ಷಣೆ ಕಾರ್ಯಾಚರಣೆ ಬಿರುಸು; 22 ಮಕ್ಕಳ ರಕ್ಷಣೆ, ಹೊಲದ ಮಾಲೀಕರ ವಿರುದ್ಧ ಪ್ರಕರಣ ದಾಖಲು
“ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಅಲ್ಲದೆ ಸರ್ಕಾರಿ ಯೋಜನೆಗಳಿಗೆ ಕೃಷಿಕರಿಂದ ಒತ್ತಾಯಪೂರ್ವಕವಾಗಿ ಭೂಮಿಯನ್ನು ಕಿತ್ತುಕೊಳ್ಳುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದು ಅವರ ಆತಂಕವನ್ನು ದೂರ ಮಾಡಿ ಭೂಮಿ ಪಡೆದು ಅಭಿವೃದ್ಧಿ ಪೂರಕ ಕೆಲಸ ಮಾಡಬೇಕೆನ್ನುವುದು ನಮ್ಮ ಹಕ್ಕೊತ್ತಾಯ. ಈ ವಿಚಾರವನ್ನು ಮುಂದಿಟ್ಟುಕೊಂಡು ಬೆಂಗಳೂರಿನ ವಿಧಾನಸೌಧದ ಎದುರು ಫೆಬ್ರುವರಿ 10ರಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಜಿ ವಿರೇಶ, ನರಸಣ್ಣ ನಾಯಕ, ಕರಿಯಪ್ಪ ಹಚ್ಚೊಳ್ಳಿ ಇದ್ದರು.
