ಮೈಸೂರು | ಅಲೆಮಾರಿ ಕೊರಚ ಸಮುದಾಯದ 40 ಕುಟುಂಬಗಳಿಗೆ ಶಾಶ್ವತ ನೆಲೆಯೇ ಇಲ್ಲ!

Date:

Advertisements

ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಲೆಮಾರಿ ಕೊರಚ ಸಮುದಾಯದ ಸರಿ ಸುಮಾರು ನಲವತ್ತು ಕುಟುಂಬಗಳಿಗೆ ಸೇರಿದ ಇನ್ನೂರಕ್ಕು ಅಧಿಕ ಜನರಿಗೆ ಶಾಶ್ವತ ನೆಲೆಯಿಲ್ಲದೆ ಬದುಕು ಅತಂತ್ರವಾಗಿದೆ. ಇರಲು ಸೂರಿಲ್ಲದೆ, ಬಾಡಿಗೆ ನಿವೇಶನದಲ್ಲಿ ಟಾರ್ಪಲ್‌ ಕಟ್ಟಿದ ನೆರಕೆಯಲ್ಲಿ ಜೀವನ ನಡೆಸುವುದಾಗಿದೆ. ಅಲ್ಲದೆ ಇದ್ದ ಜಾಗದಲ್ಲೆಲ್ಲ ಯಾವುದಾದರು ಕಾರಣವೊಡ್ಡಿ ಒಕ್ಕಲು ಎಬ್ಬಿಸುತ್ತಿದ್ದಾರೆ. ಉಳ್ಳವರ ಹೊಡೆತಕ್ಕೆ ಸಿಲುಕಿ ಎಲ್ಲಿಯೂ ಜೀವನ ನಡೆಸಲಾಗದೆ ಹೈರಾಣಾಗಿದ್ದಾರೆ.

ಇವರೆಲ್ಲ ಮೂಲತಃ ದಾವಣಗೆರೆ ಮೂಲದವರಾಗಿದ್ದು, ಸುಮಾರು ಐವತ್ತು ವರ್ಷಗಳ ಹಿಂದೆ ಟಿ ನರಸೀಪುರಕ್ಕೆ ಬಂದು ನೆಲೆಸಿದ್ದಾರೆ. ಇಲ್ಲಿ ತಲೆ ಕೂದಲಿಗೆ ಪಿನ್ನ, ಹಣೆಬೊಟ್ಟು, ಚಿಕ್ಕಪುಟ್ಟ ಪಾತ್ರೆ, ಬಾಚಣಿಗೆ ಮಾರಿ ದೈನಂದಿನ ಜೀವನ ನಡೆಸುವ ಕುಟುಂಬಗಳಾಗಿವೆ. ಮೈಸೂರು ಜಿಲ್ಲೆಯ ಟಿ ನರಸೀಪುರದ ಹೊಸ ಬಸ್ ನಿಲ್ದಾಣದ ಮುಂದೆ ಹಾಗೋ ಹೀಗೋ ಎಲ್ಲರೂ ಕೂಡಿ ಒಂದಷ್ಟು ಹಣ ಸೇರಿಸಿಕೊಂಡು ಜಾಗ ಕೊಂಡು ಅಲ್ಲಿಯೇ ವಾಸ ಮಾಡುತ್ತಿದ್ದರು. ಆದರೆ ಹೊಸದಾಗಿ ಕಬಿನಿ ನದಿಗೆ ಸೇತುವೆ ನಿರ್ಮಾಣ ಹಾಗೂ ಮೇಲುಸೇತುವೆ ಯೋಜನೆ ಕೈಗೊಂಡಾಗ ಅಲೆಮಾರಿ ಕೊರಚ ಸಮುದಾಯದ ಜಾಗ ಈ ಯೋಜನೆಗೆ ಒಳಗೊಂಡಿತು. ಈ ಜನಗಳಿಗೆ ತಾಲೂಕು ಆಡಳಿತ, ಇಲಾಖೆಗಳು ಒಂದಷ್ಟು ಪುಡಿಗಾಸು ಕೊಟ್ಟರೇ ವಿನಃ ಪುನರ್ವಸತಿ ಕಲ್ಪಿಸದೆ ಬೀದಿಪಾಲು ಮಾಡಿ ನೆಲ ಬಾಡಿಗೆ ಕಟ್ಟಿಕೊಂಡು, ಇಲ್ಲವೇ ಸಿಕ್ಕ ಸಿಕ್ಕಲ್ಲಿ ಗುಡಾರ ಹೂಡಿ ಬದುಕು ನಡೆಸುವಂತ ಹೀನ ಸ್ಥಿತಿಗೆ ದೂಡಿದವು.

WhatsApp Image 2025 01 13 at 4.06.46 PM

ಒಂದಲ್ಲ ಎರಡಲ್ಲ ನಲವತ್ತು ಕುಟುಂಬಗಳಿಗೆ ಆಧಾರ್, ವೋಟರ್ ಐಡಿ, ರೇಷನ್ ಕಾರ್ಡ್ ಹೀಗೆ ಎಲ್ಲ ದಾಖಲೆ ಇದ್ದರೂ ಪುರಸಭೆ ಮಾತ್ರ ನಿವೇಶನ ನೀಡಲು ಹಿಂದೇಟು ಹಾಕುತ್ತಿದೆ. ಯಾರಾದರೂ ಅರ್ಜಿ ಕೊಟ್ಟರೆ ನಿಮಗೆ ಯಾವುದೇ ದಾಖಲೆಯಿಲ್ಲ ಅನ್ನುವ ಮಾತುಗಳನ್ನೂ ಆಡಿದ್ದಾರೆ. ಆದರೆ ಇರುವ ದಾಖಲೆ ಪರಿಶೀಲನೆ ಮಾಡಲು ಅಗತ್ಯ ಕ್ರಮ ಕೈಗೊಂಡಿಲ್ಲ.

Advertisements

ಸಮಾಜ ಕಲ್ಯಾಣ ಇಲಾಖೆ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಇರುವುದಾದರೆ ರಾಜ್ಯದಲ್ಲಿನ ಬಡ ಜನರ ಸ್ಥಿತಿ ಊಹಿಸಲೂ ಸಾಧ್ಯವಿಲ್ಲ. ಇದೇ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ಸರಿ ಸುಮಾರು 14 ವರ್ಷಗಳಿಂದ ಹೋರಾಟ ಮಾಡಿದೆ. ಅಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆಗೆ ಅರ್ಜಿ ಹಾಕಿ ಶಾಶ್ವತ ನೆಲೆ ಕಲ್ಪಿಸಬೇಕು, ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದೆ. 2013ನೇ ಸಾಲಿನಲ್ಲಿ ಪತ್ರ ವ್ಯವಹಾರ ನಡೆಸಿದ್ದು, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳೂ ಕೂಡಾ ಪೂರಕವಾಗಿ ಮಾಹಿತಿ ಒದಗಿಸಿದ್ದಾರೆಂದು ಉಲ್ಲೇಖ ಮಾಡಿದ್ದಾರೆ.

WhatsApp Image 2025 01 13 at 4.06.46 PM 1

ಆದರೆ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಬಡ ಜನಗಳಿಗೆ ಸೂರು ಕಲ್ಪಿಸುವಲ್ಲಿ ವಿಫಲವಾಗಿದೆ. ಮಾತುಗಳೆಲ್ಲ ಕೇವಲ ಪತ್ರ ವ್ಯವಹಾರದಲ್ಲಿ ನಿಂತಿವೆಯೇ ಹೊರತು ಅನುಷ್ಠಾನದ ಕ್ರಮಗಳು ಆಗಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಬಡ ಜನರ ಬದುಕಿಗೆ ಉರುಳಾಗಿದೆ. ಯಾವುದೇ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡುವುದಿಲ್ಲ, ಕ್ರಮ ವಹಿಸುವುದಿಲ್ಲ. ಕನಿಷ್ಟ ಮಾನವೀಯತೆಯನ್ನೂ ಉಳಿಸಿಕೊಂಡಿಲ್ಲ. ಅಧಿಕಾರಿಗಳು ತಮ್ಮ ಸ್ವಂತ ಹಣದಿಂದ ಮಾಡುವ ವ್ಯವಸ್ಥೆಯಲ್ಲ, ಸರ್ಕಾರದ ಅನುದಾನ ಬಳಸಿ ನಿವೇಶನ ರಹಿತರಿಗೆ ಅಗತ್ಯ ವ್ಯವಸ್ಥೆ ಮಾಡುವಂಥದ್ದು. ಆದರೆ ಅಧಿಕಾರಿಗಳಿಗೆ ಇದರ ಅರಿವೂ ಇಲ್ಲ. ಜಾಗ ಇಲ್ಲವೆಂದರೆ ನಿವೇಶನ ಖರೀದಿ ಮಾಡಿ ಸೂರು ಕಲ್ಪಿಸಬೇಕು. ತಾಲೂಕಿನಲ್ಲಿರುವ ನಿವೇಶನ ರಹಿತರ ಪಟ್ಟಿ ಮಾಡಿ ಅಗತ್ಯ ಅನುಸಾರ ಕ್ರಮವಹಿಸಬೇಕಿತ್ತು. ಆದರೆ ಅಧಿಕಾರಿಗಳು ನಮಗೂ ನಿರ್ಗತಿಕ ಕುಟುಂಬಗಳಿಗೂ ಸಂಬಂಧವೇ ಇಲ್ಲ ಅನ್ನುವಂತೆ ವರ್ತಿಸುತ್ತಿದ್ದಾರೆ.

ಸರ್ಕಾರಗಳು ಪುಂಖಾನು ಪುಂಖವಾಗಿ ಘೋಷಣೆ ಮಾಡುತ್ತವೆ. ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ʼ2022ರ ಹೊತ್ತಿಗೆ ಯಾರೊಬ್ಬರೂ ಮನೆ ಇಲ್ಲ ಎನ್ನುವಂತಾಗಬಾರದು. ಎಲ್ಲರಿಗೂ ಮನೆ ಕಲ್ಪಿಸಲಾಗುವುದು ಇದೇ ನಮ್ಮ ಗುರಿʼ, ʼನಮ್ಮ ಶೌಚ ನಮ್ಮ ಗೌರವʼ ಅಂತ ರಾಜ್ಯ ಸರ್ಕಾರಗಳು ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮ ಮಾಡುತ್ತವೆ. ಯಾರಿಗೆ ಎಲ್ಲಿ ದೊರಕಿದೆ? ಶೌಚ ಮುಕ್ತ ಭಾರತ ಅಂತೀರಿ ಇರಲು ಮನೆಯೇ ಇಲ್ಲ. ಇನ್ನ ಶೌಚಾಲಯ ಎಲ್ಲಿದೆ ಬಡವರಿಗೆ. ಈಗಲೂ ಸಮಾಜ ಕಲ್ಯಾಣ ಇಲಾಖೆ ಸಚಿವರ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಬಯಲಿಗೆ ಹೋಗಬೇಕೆಂದರೆ ಯೋಚಿಸಬೇಕಾದ ವಿಷಯ.

ಇಸ್ಪೀಟ್ ಆಡುವವರು, ಕುಡುಕರ ಹಾವಳಿ ಮಧ್ಯೆ ಯಾವುದೇ ಭದ್ರತೆ ಇರದೆ ಬಹಿರ್ದೆಸೆಗೆ, ಸ್ನಾನಕ್ಕೆ ಬಯಲನ್ನೇ ಅವಲಂಬಿಸುವ ಪರಿಸ್ಥಿತಿ ಇದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಅಧಿಕಾರಿಗಳು ಕೇವಲ ಕಾರ್ಯಕ್ರಮಕ್ಕೆ ಮೀಸಲಾಗಿದ್ದಾರೆಯೇ ಹೊರತು ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

WhatsApp Image 2025 01 13 at 4.06.47 PM

ಈದಿನ ಡಾಟ್‌ ಕಾಮ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ ಅವರಿಗೆ ಕರೆ ಮಾಡಿ ಈ ಕುರಿತಾಗಿ ಕೇಳಿದರೆ ಉತ್ತರಿಸಲು ಸಿದ್ದವೇ ಇಲ್ಲ. ಪ್ರತಿಕ್ರಿಯೆ ಕೇಳಿದರೆ ಎಲ್ಲವೂ ಆಗಿದೆ. ಜಾಗ ಗುರುತಿಸಿದ್ದು, ಕೊರಚ ಸಮುದಾಯಕ್ಕೆ ಕೊಡುವುದಷ್ಟೇ ಬಾಕಿ ಎನ್ನುವಂತೆ ಮಾತನಾಡುತ್ತಾರೆ. ಆಗ ಈಗ, ಮತ್ತೊಂದು ದಿನ ಸಿಗುವುದಾಗಿ, ಆ ಸಭೆ ಈ ಸಭೆ, ಎಲ್ಲಿಲ್ಲದ ತರಬೇತಿ ಎನ್ನುವ ಮಾತುಗಳನ್ನು ಆಡುತ್ತಾರೆಯೇ ಹೊರತು ಸರಿಯಾದ ಅಂಕಿ ಅಂಶಗಳ ಸಹಿತ, ದಾಖಲೆಯೊಡನೆ ಮಾತನಾಡುವುದಿಲ್ಲ. ಸ್ಥಳಕ್ಕೆ ಭೇಟಿಯನ್ನೂ ನೀಡುವುದಿಲ್ಲ.

ಪುರಸಭೆ ಮುಖ್ಯಾಧಿಕಾರಿ ವಸಂತ ಅವರನ್ನು ಸಂಪರ್ಕಿಸಿದ್ದು, ಅವರು ಕರೆಗೆ ಲಭ್ಯವಾಗಿಲ್ಲ. ಹೀಗಾದರೆ ಬಡವರಿಗೆ ಸಾಮಾಜಿಕ ನ್ಯಾಯ ಸಿಗುವುದು ಯಾವಾಗ? ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳನ್ನು ಪಡೆಯುವುದು ಯಾವಾಗ? ಅಧಿಕಾರಿಗಳಿಂದಾಗಿ ಸರ್ಕಾರಗಳ ಕಾರ್ಯಕ್ರಮಗಳು ಹಳ್ಳ ಹಿಡಿಯುತ್ತಿವೆ. ಕೇವಲ ಘೋಷಣೆಯಾಗಿವೆಯೇ ಹೊರತು ಜನಪರ ಕೆಲಸವಾಗಿ ಉಳಿದಿಲ್ಲ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್ ಈದಿನ ಡಾಟ್‌ ಕಾಮ್ ಜತೆಗೆ ಮಾತನಾಡಿ, “ಸರಿ ಸುಮಾರು ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅಧಿಕಾರಿಗಳ ಬಳಿ ಹೋದರೆ, ʼನಿವೇಶನ ಗುರುತಿಸಲಾಗಿದೆ, ಈಗಾಗಲೇ ವರದಿ ಸಲ್ಲಿಸಲಾಗಿದೆ, ಪ್ರಗತಿಯಲ್ಲಿದೆʼ, ಹಾಗೆ ಹೀಗೆ ಅಂತೆ ಕಂತೆಗಳ ಸರಮಾಲೆ ಬಿಚ್ಚಿಡುತ್ತಾರೆ. ಆದರೆ ಅಸಲಿಗೆ ಈವರೆಗೆ ಯಾವುದೇ ಕೆಲಸ ಮಾಡಿಲ್ಲ” ಎಂದರು.

WhatsApp Image 2025 01 13 at 4.06.47 PM 1

“ಅಲಗೂಡು ಸರ್ವೇ ನಂಬರ್ 462ರ ಶಿವಪಾರ್ವತಿ ನಗರದಲ್ಲಿ 26 ಎಕರೆ ಭೂಮಿಯಿದೆ. ಅಲ್ಲದೆ 12 ಎಕರೆ ಭೂಮಿಯನ್ನು ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಬಂಗಾರಪ್ಪ ಬಡಾವಣೆ ಮಾಡಿ ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಲಾಗಿತ್ತು. ಅದು ಅಂದಿಗೆ ಹಳ್ಳಿ ವ್ಯಾಪ್ತಿಗೆ ಸೇರಿದ್ದರಿಂದ ಈವರೆಗೆ ಒಬ್ಬರೇ ಒಬ್ಬರು ಮನೆ ಕಟ್ಟಲಿಲ್ಲ. ಹೀಗಿರುವಾಗ ಇದೇ ಜಾಗದಲ್ಲಿ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳು ವಾಸ ಮಾಡಲು ಆರಂಭಿಸಿದಾಗ, ಗುಡಿಸಿಲು ಕೀಳುವುದು ತಂತಿ ಬೇಲಿ ಹಾಕುವುದು ಮಾಡಿ ಮನೆ ಕಟ್ಟಲು ಆರಂಭಿಸಿದ್ದಾರೆ. ಈಗ ಪುರಸಭೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಓಡಾಡುವ ರಸ್ತೆ, ಕುಡಿಯುವ ನೀರು, ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಬೇಕಿರುವ ಎಲ್ಲ ವ್ಯವಸ್ಥೆ ನಡೆಸಲಾಗುತ್ತದೆ. ಹೆಚ್ಚು ಕಡಿಮೆ ಅಂದರೂ ಐದಾರು ಎಕರೆ ಭೂಮಿ ಇದೆ. ಆದೆ ಈ ಜಾಗವನ್ನು ತಾಲೂಕು ಆಡಳಿತ, ಪುರಸಭೆ ಈ ಬಡ ಜನಗಳಿಗೆ ಹಂಚುತಿಲ್ಲ. ಎಲ್ಲ ದಾಖಲೆಗಳು ಇದ್ದರೂ ಪರಿಗಣಿಸದೆ ಚಳಿ, ಮಳೆ, ಬಿಸಿಲಿನಲ್ಲಿ ಪುಟ್ಟ ಪುಟ್ಟ ಕಂದಮ್ಮಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ತಾಲೂಕು ಆಡಳಿತ, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಅಲೆಮಾರಿ ಕೊರಚ ಸಮುದಾಯದ ನಲವತ್ತು ಕುಟುಂಬಗಳಿಗೂ ನಿವೇಶನ ಕಲ್ಪಿಸಿ, ಸೂರು ನಿರ್ಮಿಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಸಂಸ ಬೃಹತ್ ಹೋರಾಟಕ್ಕೆ ಮುಂದಾಗುತ್ತದೆ” ಎನ್ನುವ ಎಚ್ಚರಿಕೆ ನೀಡಿದರು.

ಸ್ಥಳೀಯ ಆಡಳಿತ ವ್ಯವಸ್ಥೆ ಈಗಲಾದರೂ ಕಣ್ತೆರೆಯುತ್ತದೆಯೋ ಅಥವಾ ಅದೇ ಹಳೆ ರಾಗ ಹಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X