ಕ್ರೀಡಾಪಟು, ದಲಿತ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ 58 ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 42 ಮಂದಿ ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಬಾಲಕಿಯ ಮೇಲೆ ಆಕೆಯ ಕ್ರೀಡಾ ತರಬೇತುದಾರ, ಸಹಪಾಠಿಗಳು ಹಾಗೂ ಸ್ಥಳೀಯರು ಕಳೆದ ನಾಲ್ಕು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತನ್ನ ಮೇಲೆ 62 ಮಂದಿ ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಆಕೆಯ ದೂರಿನ ಆಧಾದರ ಮೇಲೆ ಪತ್ತನಂತಿಟ್ಟ ಜಿಲ್ಲೆಯ ನಾಲ್ಕು ವಿಭಿನ್ನ ಪೊಲೀಸ್ ಠಾಣೆಗಳಲ್ಲಿ 29 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಈವರೆಗೆ, 42 ಮಂದಿ ಕಾಮುಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಸಂತ್ರಸ್ತೆ 62 ವ್ಯಕ್ತಿಗಳ ವಿರುದ್ಧ ಹೇಳಿಕೆ ನೀಡಿದ್ದಾರೆ. ಸರಿಯಾದ ಪುರಾವೆಗಳ ಕೊರತೆಯಿಂದಾಗಿ ಪೊಲೀಸರು ಕೇವಲ 58 ವ್ಯಕ್ತಿಗಳನ್ನು ಆರೋಪಿಗಳೆಂದು ಗುರುತಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಲಿದ್ದಾರೆ.
2019ರಲ್ಲಿ ಸಂತ್ರಸ್ತೆ 13 ವರ್ಷದ ಬಾಲಕಿಯಾಗಿದ್ದಳು. ಆಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಾರಂಭವಾಯಿತು. ಆಕೆಯ ನೆರೆಹೊರೆಯ ನಿವಾಸಿ ಸುಬಿನ್ (24) ಆಕೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ನಗ್ನ ಚಿತ್ರಗಳನ್ನು ಸೆರೆಹಿಡಿದ್ದನು. ಆಕೆ 16 ವರ್ಷದವಳಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದನು. ಆ ವಿಡಿಯೋವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದನು.
ಸಾರ್ವಜನಿಕ ಸ್ಥಳಗಳು ಮತ್ತು ಆಕೆಯ ಶಾಲೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದೌರ್ಜನ್ಯ ನಡೆದಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ವರದಿಗಳ ಪ್ರಕಾರ, ಪಟ್ಟಣಂತಿಟ್ಟ ಜನರಲ್ ಆಸ್ಪತ್ರೆ ಸೇರಿದಂತೆ ಕನಿಷ್ಠ ಐದು ಸ್ಥಳಗಳಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಘಟನೆಗಳು ನಡೆದಾಗ ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾಗಿದ್ದರಿಂದ, ಬಂಧಿತರ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದೆ. ಬಂಧಿತರಲ್ಲಿ ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ.
ಸಂತ್ರಸ್ತೆ ಪ್ರಸ್ತುತ ಓದುತ್ತಿರುವ ಸಂಸ್ಥೆ ನಡೆಸಿದ ಕೌನ್ಸೆಲಿಂಗ್ ಸಮಯದಲ್ಲಿ ದೌರ್ಜನ್ಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಅವರು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ)ಗೆ ತಿಳಿಸಿದ್ದಾರೆ. ಪ್ರಸ್ತುತ, ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ನಂದಕುಮಾರ್ ಮತ್ತು ಇನ್ಸ್‌ಪೆಕ್ಟರ್ ವಿನೋದ್ ಕೃಷ್ಣನ್ ನೇತೃತ್ವ ವಹಿಸಿದ್ದಾರೆ.