ಕನಿಷ್ಠ ಬೆಂಬಲ ಬೆಲೆ ಕಾನೂನಿಗಾಗಿ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ ಅವರ ಹೋರಾಟವನ್ನು ಬೆಂಬಲಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿತು.
ಸಂಗನಕಲ್ಲು ಕೃಷ್ಣಪ್ಪ ಮಾತನಾಡಿ, “ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸಾತಿ ಸಂದರ್ಭದಲ್ಲಿ ಪ್ರಧಾನಿಗಳು ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು, ರೈತರ ಬೇಡಿಕೆ ಈಡೇರಿಸಲು ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆ/ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ” ಎಂದರು.
“ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 26ರಿಂದ ಪಂಜಾಬ್-ಹರಿಯಾಣ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಇಂದಿಗೆ 51ನೇ ದಿನಕ್ಕೆ ಕಾಲಿಟ್ಟಿದ್ದು, ದೇಹ ನಿತ್ರಾಣಗೊಂಡು, ಮಾಂಸಖಂಡಗಳು ತಮ್ಮ ತೂಕವನ್ನು ಕಳೆದುಕೊಂಡಿವೆ. ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು, ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ಆದರೆ, ಕೇಂದ್ರ ಸರ್ಕಾರ ರೈತರ ಸಾವನ್ನು ನಿರೀಕ್ಷಿಸುತ್ತಿದೆ. ಅವರ ಗೋರಿ ಮೇಲೆ ಬಂಡವಾಳಶಾಹಿಗಳ ಮಹಲ್ ಕಟ್ಟಲು ಹವಣಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದವರೆಡ್ಡಿ ಮಾತನಾಡಿ, “ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ, ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಮಾರಕವಾಗಿದ್ದ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಟ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟಿತ್ತು. ನೂರಾರು ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿತು. ಉಳಿದ ಹಕ್ಕೊತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆಯನ್ನೂ ನೀಡಿತ್ತು. ಆದರೆ, ಭರವಸೆಗೆ ವಿರುದ್ಧವಾಗಿ ನಡೆದುಕೊಂಡಿತು. ರೈತ ವಿರೋಧಿ ನೀತಿ ಅನುಸರಿಸಿದ್ದ ಎನ್‌ಡಿಎ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಮತ್ತೆ ಆದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಇನ್ನೆಂತಹ ಲಜ್ಜೆಗೇಡಿ ಸರ್ಕಾರ ಇರಬಹುದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಗುಬ್ಬಿಯಲ್ಲಿ ದಲಿತ ಯುವಕರ ಮೇಲೆ ಹಲ್ಲೆ; ರೈಲ್ವೆ ಪೊಲೀಸ್ ಚಂದ್ರಶೇಖರ್ ಬಂಧನಕ್ಕೆ ರೈತ ಸಂಘ ಒತ್ತಾಯ
ಶಿವಶಂಕರ ಮಾತನಾಡಿ, “ಮೂರು ವರ್ಷಗಳ ನಂತರವೂ ರೈತರ ಹಕ್ಕೊತ್ತಾಯಗಳನ್ನು ನಿರ್ಲಕ್ಷ್ಯ ಮಾಡಿದ್ದು ಮಾತ್ರವಲ್ಲದೆ ವರ್ಷಕ್ಕಿಂತ ಹೆಚ್ಚು ಕಾಲ ಲಕ್ಷಾಂತರ ರೈತರು ಹೋರಾಟ ನಡೆಸಿ ರದ್ದುಪಡಿಸಿಕೊಂಡ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣವನ್ನು ರದ್ದುಪಡಿಸುವ ಹಾಗೂ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆಯನ್ನು ಜಾರಿ ಮಾಡುವ ಪ್ರಯತ್ನ ನಡೆಸುತ್ತಿದೆ” ಎಂದು ಕೇಂದ್ರ ಸರ್ಕಾರದ ಕೆಟ್ಟ ಧೋರಣೆಯನ್ನು ಖಂಡಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಗೋವಿಂದ ಮಾತನಾಡಿ, “ದೇಶಾದ್ಯಂತ ಎಲ್ಲ ರೈತರ ಪಂಪಸೆಟ್‌ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ರೈತರನ್ನು ಬಲವಂತಗೊಳಿಸಲಾಯಿತು. ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿಲ್ಲ. ಇಂತಹ ಹಲವು ರೈತ ವಿರೋಧಿ ಧೋರಣೆಗಳು ಹಾಗೂ ರೈತರ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಕೂಡಲೇ ಮಧ್ಯಪ್ರವೇಶ ಮಾಡಬೇಕು” ಎಂದು ಒತ್ತಾಯಿಸಿದರು.
“ರಾಜ್ಯ ಸರ್ಕಾರವೂ ಕೂಡ ರೈತ ನಾಯಕರ ಪ್ರಾಣ ಉಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಜನಶಕ್ತಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘ ಮತ್ತು ಎಐಕೆಕೆಎಂಎಸ್‌ನ ಹೋರಾಟಗಾರರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
