ʼಕಳ್ಳತನ ಮಾಡಿರುವ ಉತ್ಪನ್ನ ಕೊಳ್ಳಬೇಡಿ’ ಎಂಬ ವಿನೂತನ ಜನಜಾಗೃತಿ ಕಾಲ್ನಡಿಗೆ ಜಾಥಾ ಸೋಮವಾರ ಮೂಡಿಗೆರೆ ತಾಲೂಕು ಬಣಕಲ್ ಪಟ್ಟಣದಲ್ಲಿ ದಿ ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬಣಕಲ್ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆಯಿತು.
ಅಪರಿಚಿತರು ಕಾಫಿ, ಮೆಣಸು, ಅಡಿಕೆ ಮುಂತಾದ ಕದ್ದ ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಾಗ ಖರೀದಿದಾರರು ಹಾಗೂ ಅಂಗಡಿ ಮಾಲೀಕರು ಖರೀದಿಸದೆ, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಅಥವಾ 112 ಸಹಾಯವಾಣಿಗೆ ಮಾಹಿತಿ ನೀಡುವಂತೆ ಅರಿವು ಮೂಡಿಸಲಾಯಿತು.
ಜಾಥಾದಲ್ಲಿ ಸಂಘಟಕ ಬಿ ಸಿ ಪ್ರವೀಣ್ ಗೌಡ ಮಾತನಾಡಿ, “ಒಂದೆಡೆ ಕಾಫಿ ಬೆಳೆಗಾರರಿಗೆ ತಾವು ಬೆಳೆದ ಬೆಳೆ ಕಳ್ಳರ ಪಾಲಾಗುತ್ತಿರುವುದು ತಲೆನೋವು ತರಿಸಿದೆ. ಇದೀಗ ಕಳ್ಳರ ಹಾವಳಿಯಿಂದಾಗಿ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈ ಬಾರಿ ಫಸಲು ಚೆನ್ನಾಗಿದ್ದು, ಕಾಫಿ ಬೆಲೆ ಕೂಡ ಈ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಆದರೆ, ಹೆಚ್ಚಿನ ಬೆಲೆ ಜತೆಗೆ ಕಾಫಿ ಬೆಳೆಗಾರರಿಗೆ ಹೊಸ ತಲೆನೋವು ಶುರುವಾಗಿದೆ. ಕಾಫಿಯನ್ನು ಕಣದಲ್ಲಿ ಸುಮಾರು 10-12 ದಿನಗಳ ಕಾಲ ಬಯಲಿನಲ್ಲಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ. ಇದರಿಂದ ಕಳ್ಳತನ ಮಾಡಲು ಸುಲಭವಾಗಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮುಖ್ಯವಾಹಿನಿಗೆ ಬಂದ ನಕ್ಸಲರ ಶಸ್ತ್ರಾಸ್ತ್ರ ವಶ
ಈ ವೇಳೆ ರೈತರು, ಕಾರ್ಮಿಕರು, ಮಾಲೀಕರು ಸೇರಿದಂತೆ ಜಾಥಾದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಇತರರು ಇದ್ದರು.
