ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

Date:

Advertisements
ಮಹಾ ಕುಂಭಮೇಳ ಅಸಹಾಯಕರಿಗೆ ಆಶಾಕಿರಣದಂತೆ, ಅಲ್ಪರಿಗೆ ಆತ್ಮವಿಶ್ವಾಸದಂತೆ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರದಂತೆ ಬಳಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಹಿಂದುತ್ವವಾದಿಗಳಾದ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಗಳಿಗೆ ಅಧಿಕಾರ ಗಳಿಸುವ ಸಾಧನವೇ ಹೊರತು ಬೇರೇನೂ ಅಲ್ಲ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಿನ್ನೆಯಿಂದ ವಿಧ್ಯುಕ್ತವಾಗಿ ಆರಂಭವಾಗಿರುವ ಮಹಾ ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿದೆ. ಯಾವ ಪತ್ರಿಕೆ, ಟಿವಿ, ಯೂ ಟ್ಯೂಬ್ ತೆರೆದರೂ ಕುಂಭಮೇಳದ ಭಾರೀ ಜಾಹೀರಾತು ಕಣ್ಣಿಗೆ ಬೀಳುತ್ತದೆ. ಪುರಾಣ ಕಾಲದ ಕತೆ ಹೇಳುವ ವಿಶೇಷ ಪುರವಣಿಗಳು, ಸಾಧು-ಸಂತರ ಚಿತ್ರಗಳು ಮೇಳದ ಮಹತ್ವವನ್ನು, ಪರಂಪರೆಯನ್ನು, ಸಂಪ್ರದಾಯವನ್ನು ಸಾರುತ್ತಿವೆ. ಇಡೀ ದೇಶವೇ ಮೇಳದಲ್ಲಿ ಮುಳುಗಿಹೋಗಿರುವಂತೆ ಭಾಸವಾಗುತ್ತಿದೆ.

ದೇಶದ ಪ್ರಮುಖ ಧಾರ್ಮಿಕ ವಿದ್ಯಮಾನವೆಂಬಂತೆ ಬಿಂಬಿತವಾಗಿರುವ ಮಹಾ ಕುಂಭಮೇಳದ ಉಸ್ತುವಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಸರ್ಕಾರ ಹೊತ್ತುಕೊಂಡಿದೆ. ಅದಕ್ಕೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಒತ್ತಾಸೆಯಾಗಿ ನಿಂತಿದೆ. ನಲವತ್ತೈದು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಸುಮಾರು ನಲವತ್ತು ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಯಾವುದೇ ಅಡೆತಡೆಗಳಾಗದಂತೆ ಸೂಕ್ತ-ಸಮರ್ಪಕ ವ್ಯವಸ್ಥೆ ಕಲ್ಪಿಸಲು ಉತ್ತರ ಪ್ರದೇಶದ ಆಡಳಿತ ವ್ಯವಸ್ಥೆ ಎರಡು ವರ್ಷಗಳ ಹಿಂದಿನಿಂದಲೇ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿ ಎರಡೂ ಸರ್ಕಾರಗಳು ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿವೆ.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವನ್ನು ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮಿಲನವನ್ನಾಗಿ ಮಾಡುವುದು, ಆಳುವ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕೆ ಪೂರಕವಾಗಿ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮವನ್ನೇ ಪ್ರಯೋಗಕ್ಕೊಡ್ಡಲಾಗಿದೆ. ಈ ಸಂಗಮದಲ್ಲಿ ಸ್ನಾನ ಮಾಡುವುದು ಹಿಂದೂಗಳಿಗೆ ಅತಿ ಪವಿತ್ರವೆಂದೂ, ಎಲ್ಲ ಪಾಪಗಳು ಪರಿಹಾರವಾಗುವುದೆಂದೂ, ಮೋಕ್ಷ ಪ್ರಾಪ್ತಿಯಾಗುತ್ತದೆಂದೂ ಪ್ರತೀತಿ ಇದೆ. ಆ ಪರಂಪರಾಗತ ನಂಬಿಕೆಯನ್ನು ಜನರಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಕುಂಭಮೇಳವು ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರವಲ್ಲ; ಖಗೋಳ ಮತ್ತು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ಮಹತ್ವಪೂರ್ಣವೆಂದು ಸಾರಲಾಗುತ್ತಿದೆ. ಭಾರತದ ಧರ್ಮ, ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ ಎನ್ನುವುದು ಮುನ್ನೆಲೆಗೆ ಬರುತ್ತಿದೆ.

Advertisements

ಕುಂಭಮೇಳದಲ್ಲಿ ಪುರಾಣ, ಪರಂಪರೆ, ಪುಣ್ಯಕ್ಷೇತ್ರಗಳಿರುವ ಕಾರಣಕ್ಕೆ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಯವರು ಅತ್ಯಾಸಕ್ತಿ ತಳೆದಿದ್ದಾರೆ. ತಮ್ಮ ಕಾಲದಲ್ಲಿ ಜರುಗುತ್ತಿರುವ ಮೇಳವನ್ನು ಮಹತ್ವದ್ದೆಂದು, ಧರ್ಮಕಾರ್ಯವೆಂದು, ಹಿಂದುತ್ವದ ಭಾಗವೆಂದು ಭಾವಿಸಿದ್ದಾರೆ. ಹಿಂದೂ ಏಕತೆ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಿದ್ದಾರೆ. ಭಕ್ತರ ಭಾವಾವೇಶವನ್ನು ರಾಜಕೀಯಗೊಳಿಸಿ, ಮತಗಳನ್ನಾಗಿ ಪರಿವರ್ತಿಸುವ ಹವಣಿಕೆಯಲ್ಲಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಸಿತ ಕಂಡ ‘ಬಾಲಿವುಡ್’, ಭಿನ್ನ ಜಾಡು ಹಿಡಿದ ದಕ್ಷಿಣ ಭಾರತದ ಚಿತ್ರೋದ್ಯಮ

ಅಷ್ಟೇ ಅಲ್ಲ, ಮಹಾ ಕುಂಭಮೇಳಕ್ಕೆ 144 ವರ್ಷಗಳ ಪೌರಾಣಿಕ ಹಿನ್ನೆಲೆ ಮತ್ತು ಪರಂಪರೆಯಿದೆ ಎನ್ನುವವರೇ, ಕುಂಭಮೇಳ ಮೊಘಲರ ಆಡಳಿತದಲ್ಲೂ ನಡೆಯುತ್ತಿತ್ತು, ಅಕ್ಬರ್‌ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ, ಬ್ರಿಟಿಷ್‌ ಆಡಳಿತ ಕೂಡ ಪ್ರೋತ್ಸಾಹ ನೀಡಿತ್ತು ಎಂದು ಹೇಳುತ್ತಾರೆ. ಸ್ವಾತಂತ್ರ್ಯಾನಂತರ ಚುನಾಯಿತ ಸರ್ಕಾರವೇ ಕುಂಭಮೇಳವನ್ನು ಆಯೋಜಿಸುತ್ತಿತ್ತು ಎಂಬುದನ್ನೂ ದಾಖಲಿಸುತ್ತಾರೆ. ಅಂದರೆ, ಉತ್ತರ ಪ್ರದೇಶವನ್ನಾಳಿದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಬಿಜೆಪಿ ಇನ್ನಿತರ ಪಕ್ಷಗಳು ಕೂಡ ಕುಂಭಮೇಳವನ್ನು ಆಚರಿಸಿಕೊಂಡು ಬಂದಿವೆ. ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ.

ಆದರೆ, ಈ ಬಾರಿಯ ಮಹಾ ಕುಂಭಮೇಳದಲ್ಲಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಮುಸ್ಲಿಮರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಮುಸ್ಲಿಂ ವ್ಯಾಪಾರ ಮಳಿಗೆಗಳಿಗೆ ನಿರ್ಬಂಧ ಹೇರಲಾಗಿದೆ. ಮುಸ್ಲಿಮರು ಓಡಿಸುವ ಜಟಕಾ ಗಾಡಿ, ಆಟೋ, ಟ್ಯಾಕ್ಸಿ ಡ್ರೈವರ್‍‌ಗಳು ಹಿಂದೂ ಯಾತ್ರಿಕರಿಂದ ಬಾಡಿಗೆ ಪಡೆಯದಂತೆ ಫತ್ವಾ ಹೊರಡಿಸಲಾಗಿದೆ.

ಇದರ ಮುಂದುವರೆದ ಭಾಗವಾಗಿ, ಕುಂಭಮೇಳದಲ್ಲಿ ಇದೇ ಮೊದಲ ಬಾರಿಗೆ, ಹರಿದ್ವಾರ ಮೂಲದ ‘ದಿವ್ಯ ಪ್ರೇಮ ಸೇವಾ ಮಿಷನ್’ ಸಂಸ್ಥೆ ಉಪನ್ಯಾಸ ಏರ್ಪಡಿಸಿದೆ. ಅವುಗಳ ಪೈಕಿ ವಿವಾದಾತ್ಮಕವಾದ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯೂ ಒಂದು ವಿಷಯವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವ ಜವಾಬ್ದಾರಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೊತ್ತುಕೊಂಡಿದ್ದಾರೆ. ಇವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದರು. 

ಇದನ್ನು ಕಂಡು ಖೇದಗೊಂಡ ಮೇಳದ ಅತ್ಯಂತ ಹಿರಿಯ ಪುರೋಹಿತರಲ್ಲಿ ಒಬ್ಬರಾದ ಮಹಂತ್ ದುರ್ಗಾನಂದ್ ಬ್ರಹ್ಮಚಾರಿ, ‘ಶಾಂತಿಯುತ ಸಹಬಾಳ್ವೆ ಇರಬೇಕು ಮತ್ತು ದ್ವೇಷಕ್ಕೆ ಇಲ್ಲಿ ಯಾವುದೇ ಸ್ಥಾನವಿಲ್ಲ. ಕೆಲವರು ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ

ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು, ಅಧ್ಯಾತ್ಮ ಸಾಧಕರು, ವಿದೇಶಿ ಪ್ರವಾಸಿಗರು ಈ ಜಾಗತಿಕ ಮತ್ತು ಐತಿಹಾಸಿಕ ಪವಿತ್ರ ಧಾರ್ಮಿಕ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ಅದರಲ್ಲೂ ಪ್ರಯಾಗರಾಜ್ ಸಂಗಮದಲ್ಲಿ ಕೋಟ್ಯಂತರ ಜನ ಪವಿತ್ರ ಸ್ನಾನ ಮಾಡುತ್ತಾರೆಂಬ ಲೆಕ್ಕಾಚಾರವಿದೆ. ಜೊತೆಗೆ ಅದೆಷ್ಟೋ ವರ್ಷಗಳಿಂದ ಸ್ನಾನವನ್ನೇ ಮಾಡದ ನಾಗಾ ಸಾಧುಗಳು, ಸಂತರು, ಸನ್ಯಾಸಿಗಳು, ಅಘೋರಿಗಳು ಒಮ್ಮೆಲೆ ಮುಳುಗೇಳುವುದರಿಂದ ಗಂಗಾ, ಯಮುನಾ ನದಿಗಳ ನೀರು ಕಲುಷಿತಗೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಏಳುತ್ತದೆ. ಆ ನದಿಗಳ ನೀರು ಬಳಸಲು ಯೋಗ್ಯವಲ್ಲದ ನೀರಾಗಿ, ವಿಷವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳದತ್ತ ಹರಿಯುವುದನ್ನು ಪರಿಸರ ತಜ್ಞರು ತಿಳಿಸಿರುವುದೂ ಇದೆ.

ಜೊತೆಗೆ, ಹಬ್ಬಗಳು, ಜಾತ್ರೆಗಳು, ಮೇಳಗಳು ಕಾಲಕಾಲಕ್ಕೆ ಜರುಗುವುದು ಜನರ ಆಚಾರ-ವಿಚಾರವನ್ನು ಉಳಿಸಿ ಬೆಳೆಸಬಹುದು. ಸಂಪ್ರದಾಯ, ಆಚರಣೆ, ನಂಬಿಕೆಗಳ ನೆಪದಲ್ಲಿ ಮಾನಸಿಕ ನೆಮ್ಮದಿ ಸಿಗಲಿದೆ ಎನ್ನಬಹುದು. ಆದರೆ, ದೇವರು – ದೆವ್ವ ಇರುವ ಪುರಾವೆ ಇಲ್ಲ, ಅದು ವ್ಯಕ್ತಿ – ಶಕ್ತಿಯೂ ಅಲ್ಲ. ಅದು ಭ್ರಮೆ ಬಿತ್ತುವ, ಮೌಢ್ಯವನ್ನು ಗಟ್ಟಿಗೊಳಿಸುವ ಸಾಧನ. ಅದು ಅಸಹಾಯಕರಿಗೆ ಆಶಾಕಿರಣದಂತೆ, ಅಲ್ಪರಿಗೆ ಆತ್ಮವಿಶ್ವಾಸದಂತೆ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರದಂತೆ ಬಳಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಒಂದು ಧಾರ್ಮಿಕ ಮೇಳಕ್ಕಾಗಿ ಖರ್ಚು ಮಾಡುತ್ತಿರುವ ಏಳು ಸಾವಿರ ಕೋಟಿ ಹಣ, ಮೋದಿ-ಯೋಗಿಗಳ ಜೇಬಿನ ದುಡ್ಡಲ್ಲ. ಇದರಿಂದ ಉತ್ತರ ಪ್ರದೇಶದ ಬಡವರ ಕಲ್ಯಾಣವಾಗುವುದಿಲ್ಲ. ಮಹಾ ಕುಂಭಮೇಳ ಕೂಡ ಹಿಂದುತ್ವವಾದಿಗಳಾದ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಗಳಿಗೆ ಅಧಿಕಾರ ಗಳಿಸುವ ಸಾಧನವೇ ಹೊರತು ಬೇರೇನೂ ಅಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಅದು ಪತ್ರಿಕೆ ಇರಲಿ, ವೆಬ್ ಮಾಧ್ಯಮ ಇರಲಿ ಸಂಪಾದಕೀಯಕ್ಕೆ ಅದರದ್ದೇ ಆದ ಘನತೆ ಇರುತ್ತದೆ. ಈ ಸಂಪಾಕೀಯ ಅಂಕಣ ಬರೆಯುವವರೂ ಯಾವುದೇ ವಿಚಾರದಲ್ಲಿ ಸಮಚಿತ್ತ ಹಾಗೂ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸಮಾಜಮುಖಿಯಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕಾಗುತ್ತದೆ. ಅದು ಸಂಪಾದಕೀಯದ ಘನತೆ ಹೆಚ್ಚಿಸುತ್ತದೆ.

    ಇನ್ನೊಬ್ಬರ ಖುಷಿಗೋ, ಓಲೈಕೋ ಅಥವಾ ತಾವು ಅಸಲಿ ಜಾತ್ಯತೀತರೆಂದು ತೋರಿಸಿಕೊಳ್ಳಲೋ ಪ್ರತಿಯೊಂದನ್ನೂ ನಕಾರಾತ್ಮ ಭಾವದಿಂದ ಕಾಣುವುದು ಪ್ರಗತಿ ಪರವೇನೂ ಅಲ್ಲ.

    ಕುಂಭಮೇಳವನ್ನು ಇಲ್ಲಿ ಯಾರು ನಡೆಸುತ್ತಿದ್ದಾರೆ ಎಂಬುದು ಮುಖ್ಯ ಅಲ್ಲ. ಅದು ನಮಗೆ ಧಾರ್ಮಿಕವೋ ಅಧಾರ್ಮಿಕವೋ? ಮೂಢನಂಬಿಕೆಯೋ ಅನಿಸಬಹುದು, ಆದರೆ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

    ಕುಂಭಮೇಳಕ್ಕೆ ಖರ್ಚಾಗುವ ದುಡ್ಡು ಸಾರ್ವಜನಿಕವೇ. ಯಾವ ಅನುಮಾನವೂ ಇಲ್ಲ. ಅದರ ಅಪವ್ಯಯದ ಕುರಿತು ಪ್ರತ್ನಿಸುವವರು, ಧ್ವನಿ ಎತ್ತುವವರು ಇತರರ ಯಾತ್ರೆಗಳಿಗೆ ಖರ್ಚು ಮಾಡುವ ಸರ್ಕಾರಗಳ ನಡೆಯನ್ನೂ ಪ್ರಶ್ನಿಸುವ ಪ್ರಾಮಾಣಿಕತೆಯನ್ನು ತೋರಿಸಬೇಕಾಗುತ್ತದೆ. ಯಾವುದೇ ಕಾಫಿರರ ಅಂಗಡಿಗಳಲ್ಲಿ ಖರೀದಿಸಬೇಡಿ ಎಂದು ಫತ್ವಾ ಹೊರಡಿಸುವವರ ನಡೆಯನ್ನೂ ಜಾತ್ಯಾತೀತ ಪ್ರತಿಪಾದಕರು ಪ್ರಶ್ನಿಸಬಾರದೇಕೆ?

    ಕುಂಭಮೇಳ ಹಿಂದೆಯೂ ನಡೆದಿತ್ತು ಈಗಲೂ ನಡೆಯುತ್ತದೆ. ಭವಿಷ್ಯದಲ್ಲೂ ನಡೆಯುತ್ತದೆ.ಅಷ್ಟು ಕೋಟಿ ಜನ ಸ್ನಾನ ಮಾಡುವುದರಿಂದ ನೀರು ಕಲುಷಿತವಾಗಿ ಜನ ಸತ್ತಿದ್ದಾರೆ ಎಂಬುದಕ್ಕೆ ಯಾವ ಪುರಾವೆಗಳೂ ಇಲ್ಲ, ಉದಾಹರಣೆಗಳೂ ಇಲ್ಲ. ಯಾವುದೋ ವಿದೇಶಿ ನೆಲದಿಂದ ದಾಳಿ ಇಟ್ಟ ಕೊರೋನಾ ವೈರಸ್ ನಷ್ಟು ಸಾಮೂಹಿಕ ಸ್ನಾನ ಮಾರಕವೇನೂ ಅಲ್ಲ ಭಯಪಡಬೇಡಿ.

    ಅದು ವೈದಿಕ ಇರಲಿ, ಅವೈದಿಕ ಇರಲಿ ಈ ನೆಲದ ಸಂಸ್ಕೃತಿಯನ್ನು ಅರಿಯುವುದನ್ನು , ಗೌರವಿಸುವುದನ್ನು ಮೊದಲು ಕಲಿಯಬೇಕಿದೆ. ಪೂರ್ವಾಗ್ರಹಪೀಡಿತ ಮನಃಸ್ಥಿತಿ ಎಂದೂ ಪ್ರಬುದ್ಧವಾಗಿ ಚಿಂತಿಸಲಾರದು. ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ಪ್ರಶಸ್ತಿ ಪುರಸ್ಕಾರಗಳಿಗಾಗಿ ಪಕ್ಷಗಳ ಬೆಂಬಲಿಗನೂ ಅಲ್ಲ. ಈ ನೆಲದ ಪ್ರತಿ ಒಳ್ಳೆಯತನವನ್ನೂ ಗೌರವಿಸುವವನು.

    ಪ್ರತಿಯೊಂದನ್ನೂ ವಿರೋಧ ಮಾಡಲೇಬೇಕು ಎಂಬ ಕಾರಣಕ್ಕೆ ವಿರೋಧಿಸುವುದು. ಕಾಮಾಲೆ ಕಣ್ಣುಗಳಿಂದ ಕಾಣುವುದು ಪತ್ರಿಕೋದ್ಯಮಕ್ಕೆ ಅಷ್ಟು ಒಳ್ಳೆಯದಲ್ಲ.

    • ಈದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  2. ಅದ್ಭುತ ಕಲ್ಪನಾತೀತ ಸಂಪಾದಕೀಯ. ದುರಂತ ಎಂದರೆ ಸಿದ್ಧಾಂತ ಎಡ ಚಿಂತನೆಯ ಭರದಲ್ಲಿ ನಮ್ಮ ತನವನ್ನೇ ಮಾರುವ ಹಂತಕ್ಕೆ ಮಾಧ್ಯಮಗಳು ಬರುತ್ತವೆ ಎನ್ನಲು ಇದೇ ಸಂಪಾದಕೀಯ ಸಾಕ್ಷಿ. ಕೇವಲ ಹಿಂದು ಸಂಪ್ರದಾಯಕ್ಕೆ ಮಾತ್ರ ಯಾಕೆ ಟೀಕೆ? ಮುಸ್ಲಿಂ ಆಚರಣೆಗಳಿಗೂ ಟೀಕೆ ಮಾಡಬಹುದಲ್ಲ. ಮುಸ್ಲಿಮರು ಮಕ್ಕಾ ಮದೀನಾ ಎಂದು ಹೋಗುತ್ತಾರಲ್ಲ. ಹಿಂದುಗಳದ್ದು ಮೌಢ್ಯ ಆಚರಣೆ ಎನ್ನುವ ನಿಮಗೆಷ ಮುಸ್ಲಿಂ ಕ್ರಿಶ್ಚಿಯನ್‌ನಲ್ಲಿಯೂ ಅವೈಜ್ಞಾನಿಕ ಆಚರಣೆಗಳ ವಿರುದ್ಧ ಧ್ವನಿ ಎತ್ತಲ್ಲ ಏಕೆ? ಮುಸ್ಲಿಂ ಬಾಲಕ ಸಾಮಾನು ಕಟ್‌ ಮಾಡುವ ಅವೈಜ್ಞಾನಿಕ ಆಚರಣೆ, ಬುರ್ಖಾ ಧರಿಸುವುದು, ಮಹಿಳೆಯಿರಿಗೆ ಮಸೀದಿಗೆ ಪ್ರವೇಶ ನೀಡದೇ ಇರುವುದು ಸೇರಿ ಹಲವು ಆಚರಣೆಗಳ ವಿರುದ್ಧ ಎಂದಾದರೂ ಸಂಪಾದಕೀಯ ಬರೆದಿದ್ದೀರಾ?

    • ಈದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X