ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರದಿಂದ ಮುಂಬೈವರೆಗೆ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ನಡೆದು ಒಂದು ವರ್ಷವಾಗಿದೆ. ನ್ಯಾಯ ಯಾತ್ರೆಯ ವಾರ್ಷಿಕೋತ್ಸವದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ನ್ಯಾಯದಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು 2024ರ ಜನವರಿ 14ರಂದು ಹಿಂಸಾಚಾರ ಪೀಡಿತ ಮಣಿಪುರದಿಂದ ‘ನ್ಯಾಯ ಯಾತ್ರೆ’ ಆರಂಭಿಸಿದ್ದರು. ಆ ವೇಳೆಯು ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಬೇಕು. ಸಂತ್ರಸ್ತರ ಅಳಲು ಆಲಿಸಬೇಕು. ಶಾಂತಿ ನೆಲೆಸುವಂತೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ, ಈಗ ಯಾತ್ರೆಯ ವಾರ್ಷಿಕೋತ್ಸವವನ್ನು ಕಾಂಗ್ರೆಸ್ ಆಚರಿಸುತ್ತಿದೆ. ಆದರೂ, ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿಲ್ಲ.
“ಮೋದಿ ಅವರಿಗೆ ಪ್ರಪಂಚದ ಎಲ್ಲ ಭಾಗಗಳಿಗೆ ಹೋಗಲು ಸಮಯ, ಒಲವು ಮತ್ತು ಶಕ್ತಿ ಇದೆ. ಆದರೆ, ಈಶಾನ್ಯ ರಾಜ್ಯದಲ್ಲಿ (ಮಣಿಪುರ) ಸಂಕಷ್ಟದಲ್ಲಿರುವ ಜನರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ. ಅದರ ಅಗತ್ಯವೂ ಇಲ್ಲ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
“ಇಂದಿಗೆ, ನಿಖರವಾಗಿ ಒಂದು ವರ್ಷದ ಹಿಂದೆ, ಮಣಿಪುರದಿಂದ ಕಾಂಗ್ರೆಸ್ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ಪ್ರಾರಂಭಿಸಿತು. ಐತಿಹಾಸಿಕ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ನಡೆದ ಭಾರತ್ ಜೋಡೋ ಯಾತ್ರೆಯ ನಂತರ ನ್ಯಾಯ ಯಾತ್ರೆಯು 15 ರಾಜ್ಯಗಳ ಮೂಲಕ 6,600 ಕಿ.ಮೀ.ಗಳನ್ನು ಕ್ರಮಿಸಿತ್ತು. 2024ರ ಮಾರ್ಚ್ 16ರಂದು ಮುಂಬೈನಲ್ಲಿ ಸಮಾರೋಪಗೊಂಡಿತ್ತು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Today, exactly a year ago, the Bharat Jodo Nyay Yatra was launched by the Indian National Congress from Manipur. The BJNY followed in the wake of the historic Kanyakumari to Kashmir Bharat Jodo Yatra and covered 6,600 kms going through 15 states, culminating in Mumbai on March… pic.twitter.com/D42FwEoCf5
— Jairam Ramesh (@Jairam_Ramesh) January 14, 2025
“ಪ್ರಧಾನಿಯವರ ಭೇಟಿಗಾಗಿ ಮಣಿಪುರ ಇನ್ನೂ ಕಾಯುತ್ತಿದೆ. ಅವರು ಪ್ರಪಂಚದಾದ್ಯಂತ ಹೋಗಲು ಸಮಯ, ಒಲವು ಮತ್ತು ಶಕ್ತಿಯನ್ನು ಹೊಂದಿದ್ದಾರೆ. ಆದರೆ, ಮಣಿಪುರದ ಸಂಕಷ್ಟದಲ್ಲಿರುವ ಜನರನ್ನು ಭೇಟಿ ಮಾಡುವುದು ಅವರಿಗೆ ಅಗತ್ಯವಿಲ್ಲ” ಎಂದು ರಮೇಶ್ ಕಿಡಿಕಾರಿದ್ದಾರೆ.
“ಪ್ರಧಾನಿಯವರು ತಮ್ಮ ಪಕ್ಷದ ಶಾಸಕರು ಮತ್ತು ಮುಖ್ಯಮಂತ್ರಿ ಸೇರಿದಂತೆ ಮಣಿಪುರದ ರಾಜಕೀಯ ನಾಯಕರನ್ನು ಭೇಟಿ ಮಾಡಲು ದೃಢವಾಗಿ ನಿರಾಕರಿಸಿದ್ದಾರೆ” ಎಂದು ರಮೇಶ್ ಆರೋಪಿಸಿದ್ದಾರೆ.
“2023ರ ಮೇ 3ರಿಂದ ಮಣಿಪುರದ ಯಾತನೆ ಕಡಿಮೆಯಾಗಿಲ್ಲ. ಉದ್ವಿಘ್ನತೆ ಮುಂದುವರೆದಿದೆ. ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 220ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.