ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಉರ್ವ ಮಾರುಕಟ್ಟೆಯಲ್ಲಿ ಶಟಲ್, ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಗುಣಮಟ್ಟವನ್ನು ಪೂರೈಸುವಂತೆ ವಿನ್ಯಾಸಗೊಳಿಸಿ, ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣ ಸುಸಜ್ಜಿತ ಕ್ರೀಡಾಂಗಣವು ಬಳಕೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನೆಯ ನಂತರ, ನಗರವು ರಾಷ್ಟ್ರಮಟ್ಟದ ಪ್ರೊ ಕಬಡ್ಡಿ ಮತ್ತು ಶಟಲ್, ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಪಡೆಯುತ್ತದೆ. ₹33 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣ ಸೌಲಭ್ಯವು ಪ್ರಾದೇಶಿಕ ಕ್ರೀಡಾಪಟುಗಳಿಗೆ ಶಟಲ್, ಬ್ಯಾಡ್ಮಿಂಟನ್ ಮತ್ತು ಕಬಡ್ಡಿಯಲ್ಲಿ ವಿಶೇಷ ತರಬೇತಿ ಸೌಲಭ್ಯಗಳನ್ನು ಒದಗಿಸುತ್ತದೆ.
“ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್(ಎಂಎಸ್‌ಸಿಎಲ್) ಕೈಗೆತ್ತಿಕೊಂಡಿರುವ ಈ ಸೌಲಭ್ಯವು ಒಂದು ಮಹಡಿಯಲ್ಲಿ ಆರು ಅಂಕಣಗಳು ಮತ್ತು ಮೇಲಿನ ಮಹಡಿಯಲ್ಲಿ ಐದು ಅಂಕಣಗಳನ್ನು ಹೊಂದಿರುತ್ತದೆ. ಈ ಯೋಜನೆಯು ಬ್ಯಾಡ್ಮಿಂಟನ್ ಮತ್ತು ಕಬಡ್ಡಿಗೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎರಡೂ ಮಹಡಿಗಳನ್ನು ಪರಸ್ಪರ ಬದಲಾಯಿಸಬಹುದಾದ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಅಂಕಣಗಳಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿವಿಧೋದ್ದೇಶ ಸಂಕೀರ್ಣವಾಗಿದ್ದು, ಅಲ್ಲಿ ಕಬಡ್ಡಿ ಪಂದ್ಯಗಳಿಗೆ ಮ್ಯಾಟ್‌ಗಳನ್ನು ಹೊರತರಲಾಗುವುದು, ಇಲ್ಲದಿದ್ದರೆ ಆ ಅಂಕಣಗಳನ್ನು ಶಟಲ್, ಬ್ಯಾಡ್ಮಿಂಟನ್ ಕ್ರೀಡೆಗೆ ಬಳಸಲಾಗುತ್ತದೆ” ಎಂದು ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ ತಿಳಿಸಿದ್ದಾರೆ.
“ಎಂಎಸ್‌ಸಿಎಲ್ ಆರಂಭದಲ್ಲಿ ಜನವರಿ ತಿಂಗಳ ಅಂತ್ಯದ ವೇಳೆಗೆ ಸಂಕೀರ್ಣವನ್ನು ಹಸ್ತಾಂತರಿಸಲು ಯೋಜಿಸಿತ್ತು. ಆದರೆ ಕೆಲವು ಕೆಲಸಗಳು ಇನ್ನೂ ಬಾಕಿ ಉಳಿದಿವೆ. ಜನವರಿ 17 ರಿಂದ 23 ರವರೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಕ್ರೀಡಾಕೂಟ 2025ರ ಮೊದಲು ಈ ಸೌಲಭ್ಯವು ಸಿದ್ಧವಾಗುವುದಿಲ್ಲ” ಎಂದು ಹೇಳಿದರು.
“ಒಳಾಂಗಣ ಕ್ರೀಡಾಂಗಣದ ಭವಿಷ್ಯದ ನಿರ್ವಹಣೆಗೆ ಸಂಬಂಧಿಸಿದಂತೆ, ಎಂಎಸ್‌ಸಿಎಲ್‌ನ ಯಾವುದೇ ನಿರ್ಮಾಣವನ್ನು ಸಂಬಂಧಿತ ಇಲಾಖೆಗೆ ಹಸ್ತಾಂತರಿಸಬೇಕು. ಆದ್ದರಿಂದ ಈ ಸೌಲಭ್ಯವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಜ.14ರಂದು ರಸ ಬೈ ರಾಗ ಸಂಗೀತ ಕಚೇರಿ
“ಪರಸ್ಪರ ಬದಲಾಯಿಸಬಹುದಾದ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಅಂಕಣಗಳ ಜತೆಗೆ, ಕ್ರೀಡಾಂಗಣವು ಅಗತ್ಯವಿರುವ ಎಲ್ಲ ಆಟಗಾರರು ಹಾಗೂ ಸಹಾಯಕ ಸೌಲಭ್ಯಗಳು, ಪ್ರೇಕ್ಷಕರಿಗೆ ಆರಾಮದಾಯಕ ಆಸನಗಳು, ಕೆಫೆ ಸೇರಿದಂತೆ ಸದಸ್ಯರ ಸೌಲಭ್ಯಗಳನ್ನೂ ಹೊಂದಿರುವ ಸ್ಪೋರ್ಟ್ಸ್ ಕ್ಲಬ್, ಆರ್ಥಿಕ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ವಾಣಿಜ್ಯ ಸ್ಥಳಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿರುತ್ತದೆ” ಎಂದು ಹೇಳಿದರು.