ಮೈಸೂರು ನಗರ ವ್ಯಾಪ್ತಿಯಲ್ಲಿ ರೈಲ್ವೆ ನಿಲ್ದಾಣದಿಂದ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ಪ್ರಮುಖ ಎಂಟು ರೈಲುಗಳ ವಿಸ್ತರಣೆಗೆ ನಗರದ ನಿವಾಸಿಗಳು ವಿರೋಧಿಸುತ್ತಿದ್ದಾರೆ.
“ಎಂಟು ದೈನಂದಿನ ರೈಲುಗಳು ಅಶೋಕಪುರಂನಿಂದ ಪ್ರಾರಂಭವಾಗಿ, ಕೊನೆಗೊಳ್ಳುವುದು ಪ್ರಾರಂಭವಾದರೆ, ಎರಡು ಪ್ರಮುಖ ಸ್ಥಳಗಳಾದ ಟೆನ್ನಿಸ್ ಕೋರ್ಟ್/ಚಾಮರಾಜಪುರಂ ರೈಲ್ವೆ ನಿಲ್ದಾಣ ಮತ್ತು ಕುಕ್ಕರಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳ ಬಳಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ. ಪ್ರಸ್ತುತ, ಆರು ಜೋಡಿ ರೈಲುಗಳು ಈ ಎರಡು ರೈಲ್ವೆ ಲೆವೆಲ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತವೆ. ಪ್ರತಿ ಬಾರಿ ರೈಲುಗಳು ಬಂದಾಗ, ಈ ಕ್ರಾಸಿಂಗ್‌ಗಳನ್ನು ಕನಿಷ್ಠ 10 ನಿಮಿಷಗಳ ಕಾಲ ಮುಚ್ಚಲಾಗುತ್ತದೆ. ಇದು ಎರಡೂ ದಿಕ್ಕುಗಳಲ್ಲಿ ದೀರ್ಘ ಸಂಚಾರದಟ್ಟಣೆ ಉಂಟಾಗುತ್ತದೆ” ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪ್ರಸ್ತಾವನೆಯ ಪ್ರಕಾರ, ಎಂಟು ಪ್ರಮುಖ ರೈಲುಗಳಾದ ಎಂಎಎಸ್-ಮೈಸೂರು-ಎಂಎಎಸ್ ಕಾವೇರಿ ಎಕ್ಸ್‌ಪ್ರೆಸ್(16021/22), ಎಂಎಎಸ್-ಮೈಸೂರು-ಎಂಎಎಸ್ ಎಕ್ಸ್‌ಪ್ರೆಸ್(12609/10), ಎಸ್‌ಬಿಸಿ-ಎಂವೈಎಸ್-ಎಸ್‌ಬಿಸಿ ಮಾಲ್ಗುಡಿ ಎಕ್ಸ್‌ಪ್ರೆಸ್(20624/23), ಕೆಸಿಜಿ-ಎಂವೈಎಸ್-ಕೆಸಿಜಿ ಎಕ್ಸ್‌ಪ್ರೆಸ್(12785/86), ಎಸ್‌ಬಿಸಿ-ಮೈಸೂರು-ಎಸ್‌ಬಿಸಿ ಮೆಮು(06525/26), ಎಸ್‌ಬಿಸಿ-ಮೈಸೂರು-ಎಸ್‌ಬಿಸಿ ಮೆಮು(06559/60), ಎಸ್‌ಬಿಸಿ-ಮೈಸೂರು-ಎಸ್‌ಬಿಸಿ ಮೆಮು(06255/56), ಮತ್ತು ಎಸ್‌ಬಿಸಿ-ಮೈಸೂರು ಮೆಮು(06257/58) ರೈಲುಗಳನ್ನು ಇತ್ತೀಚೆಗೆ ಪುನರಾಭಿವೃದ್ಧಿ ಮಾಡಲಾದ ಅಶೋಕಪುರಂ ರೈಲು ನಿಲ್ದಾಣಕ್ಕೆ ವಿಸ್ತರಿಸಲಾಗುವುದು ಎನ್ನಲಾಗುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ (ಆರ್‌ಯುಬಿ) ಬಗ್ಗೆ ಕೇಳುತ್ತಿದ್ದೇವೆ. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಪ್ರತಿ ಬಾರಿ ಈ ಎರಡು ಕ್ರಾಸಿಂಗ್‌ಗಳ ಮೂಲಕ ರೈಲು ಹಾದುಹೋದಾಗ, ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ವಾಹನ ಚಾಲಕರು ರಸ್ತೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಮಾರ್ಗದಲ್ಲಿ ಇನ್ನೂ ಎಂಟು ರೈಲುಗಳಿಗೆ ವಿಸ್ತರಣೆ ಮಾಡಿದರೆ ಉಂಟಾಗುವ ಪರಿಣಾಮದ ಬಗ್ಗೆ ಸ್ಥಳೀಯರು ಚಿಂತಿತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಂಸಿಸಿ ಇ-ಖಾತಾ ಅಭಿಯಾನ; ಡಿಸೆಂಬರ್‌ನಲ್ಲಿ ₹1.7 ಕೋಟಿ ಆದಾಯ ಹೆಚ್ಚಳ
“ನಗರದ ರೈಲ್ವೆ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ನಗರದ ದಕ್ಷಿಣ ಭಾಗದಲ್ಲಿ ಉಳಿದುಕೊಂಡಿರುವ ಪ್ರಯಾಣಿಕರಿಗೆ ರೈಲು ಸೇವೆ ಒದಗಿಸುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ರೈಲುಗಳನ್ನು ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ವಿಸ್ತರಿಸುವುದು ಮುಖ್ಯವಾಗಿದೆ. ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಕ್ರಾಸಿಂಗ್‌ಗೆ ಅಂಡರ್‌ಗ್ರೌಂಡ್ ಮಂಜೂರಾಗಿದ್ದು, ಅದನ್ನು ತ್ವರಿತವಾಗಿ ನಿರ್ಮಿಸಬೇಕು” ಎಂದು ಮೈಸೂರು ರೈಲ್ವೆ ಪ್ರಯಾಣಿಕರ ವೇದಿಕೆಯ ಎಸ್ ಯೋಗೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಯಾವುದೇ ಸಮಸ್ಯೆ ಅಥವಾ ಅನಾನುಕೂಲತೆಗಳನ್ನು ಅನುಭವಿಸುವಂತಾದರೆ ಕೂಡಲೇ ಪರಿಶೀಲಿಸಲಾಗುವುದೆಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಹೇಳಿದ್ದಾರೆ.